ಮಕ್ಕಳಲ್ಲಿಯೂ ದೀರ್ಘಕಾಲದವರೆಗೆ ಕೋವಿಡ್ 19 ಲಕ್ಷಣಗಳು ಕಂಡು ಬರುವುದೇ?

20-05-21 04:37 pm       Shreeraksha , BoldSky Kannada   ಡಾಕ್ಟರ್ಸ್ ನೋಟ್

ಎರಡನೇ ಅಲೆಯ ಕೊರೊನ ಮಕ್ಕಳು, ವಯಸ್ಕರು ಎಂಬ ಯಾವುದೇ ಬೇಧ ತೋರುತ್ತಿಲ್ಲ. ಎಲ್ಲರಿಗೂ ಸಮಾನವಾಗಿ ಹಬ್ಬುತ್ತಿದೆ.

ಕಳೆದ ವರ್ಷದ ಕೊರೊನ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿಲ್ಲ. ಅವರನ್ನು ಸುರಕ್ಷಿತ ಎಂದು ಭಾವಿಸಲಾಗಿತ್ತು. ಆದರೆ ಎರಡನೇ ಅಲೆಯ ಕೊರೊನ ಮಕ್ಕಳು, ವಯಸ್ಕರು ಎಂಬ ಯಾವುದೇ ಬೇಧ ತೋರುತ್ತಿಲ್ಲ. ಎಲ್ಲರಿಗೂ ಸಮಾನವಾಗಿ ಹಬ್ಬುತ್ತಿದೆ.

ನವಜಾತ ಶಿಶುಗಳು ಸೇರಿದಂತೆ ಮಕ್ಕಳು ಸಾಮಾನ್ಯವಾಗಿ ಸಣ್ಣ ಪ್ರಮಾಣದ ರೋಗಲಕ್ಷಣಗಳನ್ನು ಹೊಂದಿರುತ್ತಾರೆ. ವಯಸ್ಕರಿಗೆ ಹೋಲಿಸಿದರೆ ವೇಗವಾಗಿ ಚೇತರಿಸಿಕೊಳ್ಳುತ್ತಾರೆ. ಅಪರೂಪದ ಸಂದರ್ಭಗಳಲ್ಲಿ ಮಾತ್ರ, ಅವರು ತೀವ್ರವಾದ ಸೋಂಕನ್ನು ಎದುರಿಸುತ್ತಾರೆ.

ಆದರೆ ಮಕ್ಕಳಲ್ಲಿ ಕಂಡುಬರುವ ರೋಗಲಕ್ಷಣಗಳು ಅಥವಾ ದೀರ್ಘಕಾಲದ ಕೋವಿಡ್ ನ ಅಪಾಯವು ಒಂದೇ ಆಗಿರುತ್ತದೆ. ಹಾಗಾದ್ರೆ ಮಕ್ಕಳು ದೀರ್ಘಕಾಲದ ಕೋವಿಡ್ ಲಕ್ಷಣಗಳನ್ನು ಎದುರಿಸುತ್ತಾರೆಯೇ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ದೀರ್ಘಕಾಲದ ಕೋವಿಡ್ ಎಂದರೇನು?

ಸೌಮ್ಯ ಅಥವಾ ಮಧ್ಯಮ ಕೋವಿಡ್ ಹೆಚ್ಚಿನ ಜನರಿಗೆ ಸುಮಾರು 15 ದಿನಗಳು ಅಥವಾ 2 ವಾರಗಳವರೆಗೆ ಇರುತ್ತದೆ. ಚೇತರಿಕೆಯ ಹಂತದಲ್ಲಿ, ರೋಗಲಕ್ಷಣಗಳು ನಿಧಾನವಾಗಿ ಕಡಿಮೆ ಆಗುತ್ತವೆ. ಆದರೆ ಕೆಲವು ಜನರು ತಮ್ಮ 15 ದಿನಗಳ ಚೇತರಿಕೆಯ ಅವಧಿಯನ್ನು ಮೀರಿ ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಈ ಸಮಯದಲ್ಲಿ ಬೆಳವಣಿಗೆಯಾಗುವ ರೋಗಲಕ್ಷಣಗಳನ್ನು ಧೀರ್ಘ ಕಾಲದ ಕೋವಿಡ್ ಎಂದು ಕರೆಯುತ್ತಾರೆ. ಇದು 12 ವಾರಗಳಿಗಿಂತ ಹೆಚ್ಚು ಕಾಲ ಮುಂದುವರಿಯುತ್ತದೆ.

ಮಕ್ಕಳಲ್ಲಿ ದೀರ್ಘಕಾಲದ ಕೋವಿಡ್ :

ಮಕ್ಕಳಲ್ಲಿ ಧೀರ್ಘಕಾಲದ ಕೋವಿಡ್ ಬಂದಾಗ ಜ್ವರ, ಕೆಮ್ಮು, ಉಸಿರಾಟದ ತೊಂದರೆ, ಆಯಾಸ, ಗಂಟಲು ನೋವು, ಅತಿಸಾರ, ವಾಸನೆ ಮತ್ತು ರುಚಿ ಇಲ್ಲದಿರುವಿಕೆ ಅಥವಾ ಯಾವುದೇ ಲಕ್ಷಣವಿಲ್ಲದೆಯೂ ಸಹ ಉಳಿಯುತ್ತಾರೆ. ಇದಕ್ಕೆ ಹಲವಾರು ಪುರಾವೆಗಳಿವೆ. ಚೇತರಿಕೆಯ ನಂತರ ಮಕ್ಕಳಲ್ಲಿ ಮಲ್ಟಿಸಿಸ್ಟಮ್ ಇನ್ಫ್ಲಮೇಟರಿ ಸಿಂಡ್ರೋಮ್ ಅಥವಾ ಪೀಡಿಯಾಟ್ರಿಕ್ ಇನ್ಫ್ಲಮೇಟರಿ ಮಲ್ಟಿಸಿಸ್ಟಮ್ ಸಿಂಡ್ರೋಮ್ (ಪಿಮ್ಸ್) ನ ಹಲವಾರು ಪ್ರಕರಣಗಳು ಗಮನಕ್ಕೆ ಬಂದಿವೆ. ಇದಲ್ಲದೆ, ಅವರು ಬ್ರೈನ್ ಫಾಗ್, ಸ್ನಾಯು ನೋವು, ಜೀರ್ಣಕ್ರಿಯೆಯ ತೊಂದರೆಗಳು, ವಾಕರಿಕೆ, ತಲೆತಿರುಗುವಿಕೆ, ಭ್ರಮೆಗಳು ಮತ್ತು ವೃಷಣ ನೋವುಗಳನ್ನು ಸಹ ಅನುಭವಿಸಬಹುದು.

ಅಧ್ಯಯನ:

ಮಾರ್ಚ್ ಮತ್ತು ನವೆಂಬರ್ 2020 ರ ನಡುವೆ 6 ರಿಂದ 16 ವರ್ಷದೊಳಗಿನ 129 ಮಕ್ಕಳನ್ನು ಅಧ್ಯಯನಕ್ಕೆ ಒಳಪಡಿಸಿದ್ದು, ಅದರ ಪ್ರಕಾರ ಸುಮಾರು 42.6 ರಷ್ಟು ಮಕ್ಕಳು ಸೋಂಕಿನ ನಂತರ 60 ದಿನಗಳಿಗಿಂತ ಹೆಚ್ಚು ರೋಗಲಕ್ಷಣಗಳನ್ನು ಹೊಂದಿದ್ದರು. 9 ರಿಂದ 15 ವರ್ಷದೊಳಗಿನ ಐದು ಮಕ್ಕಳ ಮೇಲೆ ಸ್ವೀಡನ್ನಲ್ಲಿ ನಡೆಸಿದ ಇದೇ ರೀತಿಯ ಅಧ್ಯಯನವು, ಆರಂಭಿಕ ಸೋಂಕಿನ ನಂತರ 6 ರಿಂದ 8 ತಿಂಗಳ ನಂತರವೂ ಅವರೆಲ್ಲರಿಗೂ ಆಯಾಸ, ಡಿಸ್ಪ್ನಿಯಾ (ಕಷ್ಟದ ಉಸಿರಾಟ), ಕಡಿಮೆ ಹೃದಯ ಬಡಿತ ಅಥವಾ ಎದೆ ನೋವು ಮುಂತಾದ ಲಕ್ಷಣಗಳಿವೆ ಎಂದು ತಿಳಿದುಬಂದಿದೆ.



ಮಕ್ಕಳಲ್ಲಿ ದೀರ್ಘಕಾಲದ ಕೋವಿಡ್ ಗೆ ಕಾರಣವೇನು?

ಸೋಂಕಿನ ನಂತರ ಮಕ್ಕಳು ಕೊರೊನ ರೋಗಲಕ್ಷಣಗಳನ್ನು ಪಡೆಯುವುದು ಏಕೆ ಎಂಬುದಕ್ಕೆ ನಿಜವಾದ ಕಾರಣ ತಿಳಿದಿಲ್ಲ. ವಯಸ್ಕರ ವಿಚಾರಕ್ಕೆ ಬಂದರೆ, ದುರ್ಬಲ ರೋಗನಿರೋಧಕ ವ್ಯವಸ್ಥೆ, ದೇಹದಲ್ಲಿ ಉಳಿದಿರುವ ವೈರಸ್, ಅಥವಾ ಮೊದಲೇ ಅಸ್ತಿತ್ವದಲ್ಲಿರುವ ಯಾವುದೇ ಆರೋಗ್ಯ ಸ್ಥಿತಿಯ ಕಾರಣದಿಂದಾಗಿ ಸೋಂಕಿನ ನಂತರವೂ ಕೋವಿಡ್ -19 ನ ಲಕ್ಷಣಗಳು ಅಸ್ತಿತ್ವದಲ್ಲಿರುತ್ತವೆ ಎಂದು ಊಹಿಸಲಾಗಿದೆ. ಅನಾರೋಗ್ಯದ ಆಘಾತದ ನಂತರದಲ್ಲಿ ಆಗುವ ಒತ್ತಡವೂ ಅದಕ್ಕೆ ಕಾರಣವಾಗಬಹುದು ಎಂದು ಊಹಿಸಲಾಗಿದೆ. ಆದರೆ ಮಕ್ಕಳ ವಿಚಾರದಲ್ಲಿ ಈ ಅಂಶಗಳು ಭಿನ್ನವಾಗಿರಬಹುದು. ತಜ್ಞರು, ಮಕ್ಕಳು ಯಾಕೆ ದೀರ್ಘ ಕಾಲದ ಕೋವಿಡ್ ಗೆ ತುತ್ತಾಗುತ್ತಾರೆ ಎಂದು ತಿಳಿಯಲು ಆ ಪ್ರದೇಶದಲ್ಲಿ ಸಂಶೋಧನೆ ನಡೆಸುವ ಅಗತ್ಯವಿದೆ ಎನ್ನುತ್ತಾರೆ.

(Kannada Copy of Boldsky Kannada)