ಕೊರೊನಾ ಮುಕ್ತಿಗಾಗಿ ಚತುಃ ಸಂಹಿತಾಯಾಗ ; ಶತಾಯುಷಿ ವಿದ್ವಾಂಸರಿಂದ ಭಗೀರಥ ಪ್ರಯೋಗ !! 

02-06-21 11:08 pm       Mangaluru Correspondent   ಕರಾವಳಿ

ಇಲ್ಲೊಬ್ಬ ಶತಾಯುಷಿ ವೈದಿಕರೊಬ್ಬರು ಕೊರೊನಾದಿಂದ ಜಗತ್ತು ಮುಕ್ತಿ ಪಡೆಯಲು ಅತಿ ವಿಶಿಷ್ಟ ಎನ್ನಲಾದ ಚತುರ್ವೇದಗಳನ್ನು ಒಳಗೊಂಡ ಚತುಃ ಸಂಹಿತಾಯಾಗವನ್ನೇ ನಡೆಸುತ್ತಿದ್ದಾರೆ.‌

ಮಂಗಳೂರು, ಜೂನ್ 2: ಒಂದೆಡೆ ಕೊರೊನಾ ಸೋಂಕು ಜಗತ್ತನ್ನೇ ಬೆಚ್ಚಿಬೀಳಿಸುತ್ತಾ ಮುನ್ನುಗ್ಗುತ್ತಿದ್ದರೆ, ಮತ್ತೊಂದೆಡೆ ಮಹಾವ್ಯಾಧಿಯ ಮುಕ್ತಿಗಾಗಿ ಜಗತ್ತಿನಾದ್ಯಂತ ಲಸಿಕೆ, ಔಷಧಿ ಎಂದು ನಾನಾ ರೀತಿಯ ಪ್ರಯತ್ನ, ಪ್ರಯೋಗದಲ್ಲಿ ವಿಜ್ಞಾನಿಗಳು ತೊಡಗಿದ್ದಾರೆ.‌ ಆದರೆ, ಇಲ್ಲೊಬ್ಬ ಶತಾಯುಷಿ ವೈದಿಕರೊಬ್ಬರು ಕೊರೊನಾದಿಂದ ಜಗತ್ತು ಮುಕ್ತಿ ಪಡೆಯಲು ಅತಿ ವಿಶಿಷ್ಟ ಎನ್ನಲಾದ ಚತುರ್ವೇದಗಳನ್ನು ಒಳಗೊಂಡ ಚತುಃ ಸಂಹಿತಾಯಾಗವನ್ನೇ ನಡೆಸುತ್ತಿದ್ದಾರೆ.‌

ಈ ರೀತಿಯ ವಿಭಿನ್ನ ಪ್ರಯತ್ನದಲ್ಲಿ ತೊಡಗಿರುವ ವ್ಯಕ್ತಿಯೇ ಚತುರ್ವೇದ ಪಾರಂಗತ 102 ವರ್ಷದ ಶತಾಯುಷಿ ಅಂಗಡಿಮಾರು ಕೃಷ್ಣ ಭಟ್ಟರು.‌ ಮಂಗಳೂರು ತಾಲೂಕಿನ ಮೂಲ್ಕಿ ಬಳಿಯ ಹಳೆಯಂಗಡಿ ಸಮೀಪದ ಪಕ್ಷಿಕೆರೆಯ ತಮ್ಮ ನಿವಾಸದಲ್ಲಿ ಅವರು ಈ ಯಾಗವನ್ನು ನಡೆಸುತ್ತಿದ್ದಾರೆ. ‌ಅಂದಹಾಗೆ, ಈ ವ್ಯಕ್ತಿ ಉಡುಪಿಯಲ್ಲಿ ಅಷ್ಟ ಮಠಾಧೀಶರಲ್ಲಿ ಒಬ್ಬರಾಗಿರುವ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ  ಪೂರ್ವಾಶ್ರಮದ ತಂದೆಯವರು ಕೂಡ ಆಗಿದ್ದಾರೆ. 

ವಯಸ್ಸು ನೂರು ಮೀರಿದರೂ, ಅಪಾರವಾದ ಜೀವನಶ್ರದ್ಧೆ ಮತ್ತು ಜೀವನ ಮೌಲ್ಯಗಳಿಂದ ಮಾದರಿ ಬದುಕು ನಡೆಸುತ್ತಿರುವ ಕೃಷ್ಣ ಭಟ್ಟರು, ಅತ್ಯಂತ ಸಾತ್ವಿಕ ರೀತಿಯಲ್ಲಿ ಜೀವನ ಮಾಡಿಕೊಂಡು ಬಂದಿದ್ದಾರೆ. ‌ತಮ್ಮ ಜೀವಮಾನದಲ್ಲಿ ಎದುರಾದ ಕೊರೊನಾ ಮಹಾಮಾರಿಯ ಬಗ್ಗೆ ಮರುಗಿದ ಈ ಹಿರಿಜೀವ ತನ್ನದೇ ಅರಿವಿನ ನೆಲೆಯಲ್ಲಿ ಲೋಕ ಕಲ್ಯಾಣಾರ್ಥವಾಗಿ ಋಕ್, ಯಜು, ಸಾಮ ಹಾಗೂ ಅಥರ್ವ ವೇದಗಳೆಂಬ ನಾಲ್ಕೂ ವೇದಗಳ ಯಾಗವನ್ನು ಸಂಕಲ್ಪಿಸಿ ತಾವೇ ಸ್ವತಃ ಯಾಜ್ಞಿಕರಾಗಿ ಯಾಗ ನೆರೆವೇರಿಸುತ್ತಿದ್ದಾರೆ.  

ಕಳೆದ ಅನೇಕ ದಿನಗಳಿಂದ ತಮ್ಮ ಸ್ವಗೃಹದಲ್ಲಿ ಪುತ್ರರು ಹಾಗೂ ಇತರ ಕೆಲವು ವಿದ್ವಾಂಸರ ಸಹಕಾರದಲ್ಲಿ ಚತುಃ ಸಂಹಿತಾಯಾಗ ನಡೆಸುತ್ತಿರುವ ಭಟ್ಟರು ಈಗಾಗಲೇ ಋಕ್ ಮತ್ತು ಯಜುಃ ಸಂಹಿತಾ ಯಾಗಗಳನ್ನು ಸಂಪನ್ನಗೊಳಿಸಿದ್ದಾರೆ.‌ ಇದೀಗ ವೈಶಾಖ ಬಹುಳ ಪಂಚಮಿಯಂದು ಭಾನುವಾರ ಸಾಮಸಂಹಿತಾ ಯಾಗವನ್ನು ಆರಂಭಿಸಿದ್ದು ಐದು ದಿನಗಳ ಪರ್ಯಂತ ನಡೆಯಲಿದೆ. 

1198 ಅಪೂರ್ವ ಮಂತ್ರಗಳನ್ನು ಒಳಗೊಂಡಿರುವ ಸಾಮವೇದವನ್ನು ಗಾನರೂಪದಲ್ಲಿ ಪಠಿಸುವುದರ ಜೊತೆಗೆ ದಿನಕ್ಕೆ ಸುಮಾರು ಇನ್ನೂರರಷ್ಟು ಮಂತ್ರಗಳ ಆಹುತಿಯನ್ನು ಯಜ್ಞಮುಖೇನ‌ ಅರ್ಪಿಸುವುದು ಇದರ ವಿಶೇಷ. ಲಾಕ್ ಡೌನ್ ಇರುವ ಕಾರಣ ಯಾವ ಆಡಂಬರವೂ ಇಲ್ಲದೇ ಕೇವಲ ಬೆರಳೆಣಿಕೆಯ ವಿದ್ವಾಂಸರನ್ನು ಮಾತ್ರ ಸೇರಿಸಿಕೊಂಡು ಯಾಗ  ಅನುಷ್ಠಾನ ಮಾಡಲಾಗುತ್ತಿದೆ.‌

ಸಾಮವೇದ ಯಾಗ ಮುಗಿದ ಬಳಿಕ ಅಥರ್ವ ಸಂಹಿತಾ ಯಾಗವನ್ನೂ ನಡೆಸಿ ಭಗವದರ್ಪಣಗೊಳಿಸಿ ಲೋಕಕ್ಷೇಮ ಕರುಣಿಸುವಂತೆ ಪ್ರಾರ್ಥಿಸಲಾಗುವುದು ಎಂದು  ಭಟ್ಟರ ಸುಪುತ್ರ ವಿದ್ವಾನ್ ವಿಶ್ವೇಶ ಭಟ್ ತಿಳಿಸಿದ್ದಾರೆ.‌

Chatucha Samhitagaya for Corona to go away by Centurion Scholar Krishan Bhat in Mulki.