ಈತನಿಗಿನ್ನೂ ಎರಡು ತುಂಬಿಲ್ಲ, ಸ್ಮರಣಾ ಶಕ್ತಿಯಿಂದ್ಲೇ ವರ್ಲ್ಡ್ ರೆಕಾರ್ಡ್ !

09-10-20 03:11 pm       Headline Karnataka News Network   ಸ್ಪೆಷಲ್ ಕೆಫೆ

ಇಲ್ಲೊಂದು ಮಗುವಿಗೆ ಇನ್ನೂ ಎರಡು ವರ್ಷ ತುಂಬಿಲ್ಲ. ತನ್ನ ಅಗಾಧ ಸ್ಮರಣಾ ಶಕ್ತಿಯಿಂದಲೇ ದೇಶದ ಗಮನ ಸೆಳೆದಿದ್ದಾನೆ.

ಹೈದರಾಬಾದ್, ಅಕ್ಟೋಬರ್ 09: ಕೆಲವು ಮಕ್ಕಳ ಜ್ಞಾಪಕ ಶಕ್ತಿ ಅಪರಿಮಿತ. ಏನೇ ಹೇಳಿದ್ರೂ ಪಟಕ್ಕನೆ ಹೇಳ್ತಾರೆ. ಒಮ್ಮೆ ಹೇಳಿಕೊಟ್ಟಿದ್ದನ್ನು ಪಟಪಟನೆ ಹೇಳಿಬಿಡುತ್ತಾರೆ. ಆದರೆ, ಇಲ್ಲೊಂದು ಮಗುವಿಗೆ ಇನ್ನೂ ಎರಡು ವರ್ಷ ತುಂಬಿಲ್ಲ. ತನ್ನ ಅಗಾಧ ಸ್ಮರಣಾ ಶಕ್ತಿಯಿಂದಲೇ ದೇಶದ ಗಮನ ಸೆಳೆದಿದ್ದಾನೆ.

ಆತನ ಹೆಸರು ಅದಿತಿ ವಿಶ್ವನಾಥ್ ಶೆಟ್ಟಿ. ಕೇವಲ ಒಂದು ವರ್ಷ 9 ತಿಂಗಳು ಆಗಿರುವ ಈ ಮಗು ಅಲ್ಲ , ಪೋರ ತನ್ನ ಅಗಾಧ ಸ್ಮರಣಾ ಶಕ್ತಿಯಿಂದಲೇ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಗಿಟ್ಟಿಸಿದ್ದಾನೆ. ದೇಶ, ಭಾಷೆಗಳಿಂದ ತೊಡಗಿ, ಬಣ್ಣಗಳು, ಥರಹೇವಾರಿ ಕಾರುಗಳು, ಕಾಡು ಪ್ರಾಣಿಗಳು, ಸಾಕು ಪ್ರಾಣಿಗಳು, ಹಣ್ಣುಗಳು, ಗೃಹಬಳಕೆ ವಸ್ತುಗಳು, ಹೀಗೆ ಎಲ್ಲವನ್ನೂ ಪಟಪಟನೆ ಹೇಳುತ್ತಾನೆ. ಈಗ ಸ್ಮರಣಾ ಶಕ್ತಿಯೇ ಈಗ ದೇಶದ ಗಮನ ಸೆಳೆದಿದ್ದು, ಇಂಡಿಯಾ ಬುಕ್ ಆಫ್ ರೆಕಾರ್ಡ್, ತೆಲುಗು ಬುಕ್ ಆಫ್ ರೆಕಾರ್ಡ್ ಸೇರಿದಂತೆ ಐದು ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾನೆ.

ತೆಲಂಗಾಣ ರಾಜ್ಯದ ಕರೀಂ ನಗರ ನಿವಾಸಿಯಾಗಿರುವ ಅರುಣ್ ಸಾಯಿ ಗೌರಿ ಶೆಟ್ಟಿ ಮತ್ತು ಸ್ನೇಹಿತಾ ದಂಪತಿಯ ಪುತ್ರನಾಗಿರುವ ಅದಿತಿ ಬಗ್ಗೆ ಹೆತ್ತವರು ಹೆಮ್ಮೆ ವ್ಯಕ್ತಪಡಿಸುತ್ತಾರೆ. ನಮ್ಮ ಮಗುವಿನದ್ದು ವಿಶೇಷ ಪ್ರತಿಭೆ ಎಂದು ಹೇಳಿಕೊಳ್ಳುವುದಿಲ್ಲ. ಪ್ರತಿ ಮಕ್ಕಳಲ್ಲೂ ಪ್ರತಿಭೆ ಇರುತ್ತದೆ. ಮಕ್ಕಳನ್ನು ಪ್ರೀತಿಯಿಂದ ಗೆಲ್ಲಬೇಕಷ್ಟೆ. ಅದಿತಿಯ ಗೆಲುವಿನ ಹಿಂದೆ ಅಜ್ಜ- ಅಜ್ಜಿ ಇದ್ದಾರೆ. ಇಷ್ಟೆಲ್ಲ ಸವಾಲುಗಳನ್ನು ಗೆಲ್ಲುವಂತೆ ಪ್ರೇರೇಪಣೆ ನೀಡಿದ್ದು ಆತನ ಅಜ್ಜ – ಅಜ್ಜಿ. ಅವರೇ ನಮ್ಮ ಕುಟುಂಬದ ಸ್ಫೂರ್ತಿ ಎಂದು ಹೇಳುತ್ತಾರೆ.

ಅಜ್ಜಿಯ ಜೊತೆ ಒಂದು ದಿನ ಸಂಜೆ ಪೂಜೆಗೆ ಕುಳಿತಿದ್ದಾಗ, ದೇವರ ಫೋಟೋಗಳನ್ನು ನೋಡಿ ಕುತೂಹಲ ವ್ಯಕ್ತಪಡಿಸಿದ್ದ. ಹನುಮಂತ, ಸಾಯಿಬಾಬಾ, ವೆಂಕಟೇಶ್ವರ ಹೀಗೆ ಬೇರೆ ಬೇರೆ ದೇವರ ಫೋಟೋಗಳನ್ನು ಗುರುತಿಸತೊಡಗಿದ್ದ. ಆನಂತ್ರ ದಿನವೂ ಅಜ್ಜಿಯ ಜೊತೆಗೆ ಪೂಜೆ ಕುಳಿತು ಈಗ 15ಕ್ಕೂ ಹೆಚ್ಚು ದೇವರ ಫೋಟೋಗಳನ್ನು ಗುರುತಿಸುತ್ತಿದ್ದಾನೆ. ಇದೇ ಆತನ ಆರಂಭ ಹೆಜ್ಜೆ. ಹೇಳಿದ್ದನ್ನು ಮರೆಯದೆ ಜ್ಞಾಪಿಸಿಕೊಂಡು ಹೇಳುತ್ತಾನೆ ಎನ್ನುತ್ತಾರೆ, ಅರುಣ್ ಸಾಯಿ.

Adit Vishwanath Gauri Shetty of Hyderabad makes it to World Book of Record for being an extraordinary child with sharp memory.