Special Story: ಹಿರೋಶಿಮಾ ಅಣುಬಾಂಬ್ ದಾಳಿಯ ಕರಾಳ ದಿನಕ್ಕಿಂದು 75 ವರ್ಷ

06-08-20 11:17 am       Headline Karnataka News Network   ಸ್ಪೆಷಲ್ ಕೆಫೆ

ಜಪಾನ್‍ನ ಹಿರೋಶಿಮಾ ನಗರದಲ್ಲಿ ಜನರು ಆಕ್ರಂದನ ಮುಗಿಲು ಮುಟ್ಟಿದ್ದು 75 ವರ್ಷಗಳ ಹಿಂದೆ ಇದೇ ದಿನದಂದು. ಹೌದು, ಅಮೇರಿಕಾ ಜಪಾನ್‍ನ ಹಿರೋಶಿಮಾ ಮೇಲೆ ಅಣುಬಾಂಬ್ ಹಾಕಿ ಇಂದಿಗೆ 75 ವರ್ಷ ಸಂದಿದೆ.

ದೇಶದ ಬೆಳವಣಿಗೆಯ ವಿಚಾರದಲ್ಲಿ ಉತ್ತುಂಗದಲ್ಲಿರುವ ಜಪಾನ್, ಅಗಸ್ಟ್ ತಿಂಗಳು ಬಂತೆಂದರೆ ಕರಾಳ ದಿನದ ನೋವಿನಲ್ಲಿ ತೇಲುತ್ತದೆ. ಜಪಾನ್‍ನ ಹಿರೋಶಿಮಾ ನಗರದಲ್ಲಿ ಜನರು ಆಕ್ರಂದನ ಮುಗಿಲು ಮುಟ್ಟಿದ್ದು 75 ವರ್ಷಗಳ ಹಿಂದೆ ಇದೇ ದಿನದಂದು. ಎರಡನೇ ವಿಶ್ವ ಮಹಾಯುದ್ಧದ ವೇಳೆ ಅಮೆರಿಕದವರು ಜಪಾನ್ ದೇಶದ ಹಿರೋಶಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ಅಣುಬಾಂಬ್ ದಾಳಿ ಮಾಡಿದ್ದು ಮಾನವ ಇತಿಹಾಸದ ಘೋರ ಕ್ಷಣಗಳಲ್ಲಿ ಒಂದು. ಹೌದು, ಅಮೇರಿಕಾ ಜಪಾನ್‍ನ ಹಿರೋಶಿಮಾ ಮೇಲೆ ಅಣುಬಾಂಬ್ ಹಾಕಿ ಇಂದಿಗೆ 75 ವರ್ಷ ಸಂದಿದೆ. ಹಿರೋಶಿಮಾದಲ್ಲಿ ಮೊದಲು ದಾಳಿಯಾದರೆ, ನಾಗಸಾಕಿಯಲ್ಲಿ ಎರಡನೇ ದಾಳಿಯಾಗಿತ್ತು. ಹಿರೋಶಿಮಾದ ಅಣುಬಾಂಬ್ ದಾಳಿಯಾಗಿದ್ದು ಅಗಸ್ಟ್ 6 ರಂದು, ನಾಗಸಾಕಿಯ ಮೇಲೆ ಅಣುಬಾಂಬ್ ದಾಳಿಯಾಗಿದ್ದು ಆಗಸ್ಟ್ 9ರಂದು. ಜಗತ್ತಿನ ಅತ್ಯಂತ ಅಮಾನುಷ ಘಟನೆ ಎನಿಸಿದ ಈ ಅಣುಬಾಂಬ್ ದಾಳಿಯ ಬಳಿಕವೇ ಎರಡನೇ ಮಹಾಯುದ್ಧ ಅಂತ್ಯಗೊಂಡಿತು. ಆಗಸ್ಟ್ 15ರಂದು ಜಪಾನ್ ಶರಣಾಯಿತು. 

ದಾಳಿಗೆ ಕಾರಣ
ಜಪಾನ್ ದೇಶದ ಪ್ರಮುಖ ಮಿಲಿಟರಿ ನೆಲೆಯಾಗಿದಿದ್ದೇ ಹಿರೋಶಿಮಾ. ಅಲ್ಲಿ ಶಸ್ತ್ರಾಸ್ತ್ರ ಉತ್ಪಾದನೆಯ ಫ್ಯಾಕ್ಟರಿ ಸೇರಿದಂತೆ ಜಪಾನ್‍ನ ಕೇಂದರ ಬಿಂದುವೇ ಆಗಿತ್ತು. ಹೀಗಾಗಿ. ಅಮೆರಿಕ ಈ ಹಿರೋಶಿಮಾವನ್ನೇ ಅಣುಬಾಂಬ್ ದಾಳಿಗೆ ಆರಿಸಿಕೊಂಡು, ಯುದ್ಧ ಸಾರಿತ್ತು. ಜಪಾನ್ ದೇಶದ ಮೇಲೆ ಪೂರ್ಣಪ್ರಮಾಣದ ಮಿಲಿಟರಿ ಆಕ್ರಮಣ ಆಗಿಲ್ಲದಿದ್ದರೂ ಈ ಒಂದು ದಾಳಿಯಿಂದಾಗಿ ಜಪಾನ್ ಅಮೆರಿಕಾ ಮುಂದೆ ಶರಣಾಗುವಂತೆ ಮಾಡಿತ್ತು.  

ದಾಳಿ ಹೇಗೆ ನಡೆಯಿತು?
ಹಿರೋಶಿಮಾ ನಗರದ ಮಧ್ಯ ಭಾಗದಲ್ಲಿದ್ದ ಐಒಇ ಸೇತುವೆಯನ್ನು ಗುರಿ ಮಾಡಿಟ್ಟುಕೊಂಡ ಅಮೆರಿಕದ ಬಿ-29 ಬಾಂಬರ್, ತಾನು ಹೊತ್ತು ತಂದಿದ್ದ ಯುರೇನಿಯಮ್ ಬಾಂಬನ್ನು 11,500 ಅಡಿ ಎತ್ತರದಿಂದ ಎಸೆದಿದ್ದರು. 1945, ಅಗಸ್ಟ್ 6 ರಂದು . ಬೆಳಗ್ಗಿನ ಜಾವ ಸುಮಾರು ಎಂಟು ಗಂಟೆಗೆ ನಡೆದ ಈ ಅಣು ಬಾಂಬ್ ದಾಳಿಯು ನೆಲದಿಂದ 2 ಸಾವಿರ ಅಡಿ ಎತ್ತರದಲ್ಲಿಯೇ ಸ್ಪೋಟಗೊಂಡಿತ್ತು. ಇದರಿಂದ ಉಂಟಾದ 2 ರಿಂದ 4 ಸಾವಿರ ಸೆಲ್ಷಿಯಸ್ ಉಷ್ಣಾಂಶದಿಂದಾಗಿ ಸುತ್ತಲಿನ 2 ಕಿ ಮೀ ಜಾಗವು ಸುಟ್ಟು ಕರಕಲಾಗಿತ್ತು. ಬಾಂಬ್ ಬಿದ್ದ ಕೆಲ ಗಂಟೆಗಳ ನಂತರ ವಿಕಿರಣಗಳ ಕಪ್ಪು ಮಳೆ ಇಡೀ ಹಿರೋಶಿಮಾ ನಗರವನ್ನೇ ದ್ವಂಸ ಮಾಡಿತ್ತು. 

ಸಾವಿನ ಪ್ರಮಾಣ ಎಷ್ಟು?
ದಾಳಿಗೂ ಮೊದಲು ಹಿರೋಶಿಮಾ ನಗರದಲ್ಲಿ 3.5 ಲಕ್ಷ ಜನ ಸಂಖ್ಯೆ ಇತ್ತು. ಆದರೆ ಈ ಬಾಂಬ್ ನಿಂದಾಗಿ 200 ಮೀಟರ್ ಸುತ್ತಮುತ್ತಲಿದ್ದ ಪ್ರತಿಯೊಬ್ಬ ವ್ಯಕ್ತಿಯೂ ಆ ಕೂಡಲೇ ಸಾವನ್ನಪ್ಪಿದ್ದರು. ಆ ನಂತರ ಅದರ ವಿಕಿರಣಗಳಿಂದಾಗಿ ಸಾವಿನ ಸಂಖ್ಯೆ ಹೆಚ್ಚಾಗುತ್ತಾ ನಾಲ್ಕು ತಿಂಗಳ ಅವಧಿಯಲ್ಲಿ ಸುಮಾರು 1.4 ಲಕ್ಷ ಜನರು ಬಲಿಯಾಗಿಹೋಗಿದ್ದರು. 
ಈ ಘಟನೆಯಲ್ಲಿ ಸಾಕಷ್ಟು ಜನ ಕಾಣೆಯಾದರೆ ಇನ್ನಷ್ಟು ಜನರು ವಿಕಿರಣದ ದುಷ್ಪರಿಣಾಮಕ್ಕೆ ಒಳಗಾದರು. ಎರಡು ದಿನಗಳ ಕಾಲ ಹಿರೋಶಿಮಾ ನಗರ ಸ್ಥಬ್ಧವಾಗಿತ್ತು. ಈ ಘಟನಯಲ್ಲಿ ಲಕ್ಷಕ್ಕೂ ಅಧಿಕ ಮಂದಿ ಸಾವನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ. 

ಅದೆನೆ ಇರಲಿ, ಯುದ್ಧ ಕೇವಲ ಸಾಮೂಹಿಕ ವಿನಾಶವನ್ನು ಮಾತ್ರ ತರಬಲ್ಲದು ಮತ್ತು ಅಣುಬಾಂಬ್ ಎಂಬ ಮಾರಿ ಮನುಕುಲಕ್ಕೆ ಮಾರಿ  ಎಂಬ ಸಂದೇಶವನ್ನು ಹಿರೋಶಿಮಾ . ನಾಗಾಸಾಕಿ ಅಣುಬಾಂಬ್ ದಾಳಿ ಇಡೀ ವಿಶ್ವಕ್ಕೆ ಮನದಟ್ಟು ಮಾಡಿಕೊಟ್ಟಿದೆ.