ಬಡ ಮಕ್ಕಳ ಆನ್‌ಲೈನ್‌ ತರಗತಿಗೆ ನೆರವು ; ಕಾನೂನು ವಿದ್ಯಾರ್ಥಿಗಳಿಬ್ಬರ ಅಭಿಯಾನ

18-08-20 06:21 pm       Mangalore Reporter   ಸ್ಪೆಷಲ್ ಕೆಫೆ

ಸ್ಮಾರ್ಟ್ ಫೋನ್, ಲ್ಯಾಪ್‌ಟಾಪ್ ಇಲ್ಲದೆ ಆನ್ಲೈನ್ ಕ್ಲಾಸ್ ಹೇಗೆ ಮಾಡಿಕೊಳ್ಳುವುದೆಂದು ಚಿಂತೆಯಲ್ಲಿದ್ದಾರೆ. ಇದೇ ವೇಳೆ, ಇಬ್ಬರು ಕಾನೂನು ವಿದ್ಯಾರ್ಥಿಗಳು ಸೇರಿ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಬಡ ಮಕ್ಕಳಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.‌ 

ಮಂಗಳೂರು, ಆಗಸ್ಟ್ 18: ಕೊರೊನಾ ಕಾರಣದಿಂದಾಗಿ ಶಾಲೆ ಮತ್ತು ಕಾಲೇಜುಗಳು ಬಂದ್ ಆಗಿದ್ದರೆ, ಇತ್ತ ಆನ್‌ಲೈನ್ ತರಗತಿ ಆರಂಭಗೊಂಡಿದೆ. ಆದರೆ ಬಡ ಮಕ್ಕಳಿಗೆ ಆನ್‌ಲೈನ್‌ ಕ್ಲಾಸ್ ಪೇಚಿಗೀಡು ಮಾಡಿದೆ.‌ ಸ್ಮಾರ್ಟ್ ಫೋನ್, ಲ್ಯಾಪ್‌ಟಾಪ್ ಇಲ್ಲದೆ ಆನ್ಲೈನ್ ಕ್ಲಾಸ್ ಹೇಗೆ ಮಾಡಿಕೊಳ್ಳುವುದೆಂದು ಚಿಂತೆಯಲ್ಲಿದ್ದಾರೆ. ಇದೇ ವೇಳೆ, ಇಬ್ಬರು ಕಾನೂನು ವಿದ್ಯಾರ್ಥಿಗಳು ಸೇರಿ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಬಡ ಮಕ್ಕಳಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.‌ 

ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ಕಾನೂನು ವಿದ್ಯಾರ್ಥಿಗಳಾಗಿರುವ ಅಮನ್ ಮತ್ತು ಸುಚೇತಾ ವಿಕ್ರಮ್ ಸೇರಿ ಸುರಕ್ಷಾ ಧಾಮ ಎನ್ನುವ ಎನ್ ಜಿಓ ಆರಂಭಿಸಿದ್ದು ಬಡ ಮಕ್ಕಳ ಆನ್ ಲೈನ್ ಶಿಕ್ಷಣಕ್ಕೆ ನೆರವಾಗಲು ನಿರ್ಧರಿಸಿದ್ದಾರೆ.‌ ಅಮನ್ ಮಂಗಳೂರಿನ ಕರಂಗಲ್ಪಾಡಿ ನಿವಾಸಿಯಾಗಿದ್ದರೆ, ಸುಚೇತಾ ಬೆಂಗಳೂರಿನವರು. ತಮ್ಮ ಅಪಾರ್ಟ್ಮೆಂಟ್ ಗಳಿಗೆ ಕೆಲಸಕ್ಕೆ ಬರುವ ಬಡವರ ಮಕ್ಕಳ ಸ್ಥಿತಿ ಕಂಡು ದಾನಿಗಳಿಂದ ಸ್ಮಾರ್ಟ್ ಫೋನ್ ಮೊಬೈಲ್ ಗಳನ್ನು ಪಡೆದು ಉಚಿತವಾಗಿ ವಿತರಿಸಲು ಆರಂಭಿಸಿದ್ದಾರೆ. ಇದಕ್ಕಾಗಿ ಫೇಸ್ಬುಕ್, ವಾಟ್ಸಪ್ ಗಳಲ್ಲಿ ಅಭಿಯಾನ ನಡೆಸುತ್ತಿದ್ದು ಉಳ್ಳವರಿಂದ ಪಡೆದು ಇಲ್ಲದವರಿಗೆ ನೀಡುವುದಕ್ಕಾಗಿ ಪ್ರಚಾರ ನಡೆಸುತ್ತಿದ್ದಾರೆ. ಈಗಾಗ್ಲೇ ಮಂಗಳೂರಿನಲ್ಲಿ ನಾಲ್ಕು ಬಡ ಮಕ್ಕಳಿಗೆ ಸ್ಮಾರ್ಟ್ ಫೋನ್ ನೀಡಿದ್ದೇವೆ ಎನ್ನುತ್ತಾರೆ ಅಮನ್. 

ಕೊರೊನಾದಿಂದ ಉದ್ಯೋಗ ಕಳೆದುಕೊಂಡವರು ಮಕ್ಕಳಿಗೆ ಸ್ಮಾರ್ಟ್ ಫೋನ್ ತೆಗೆದುಕೊಡಲು ಸಾಧ್ಯವಾಗುತ್ತಿಲ್ಲ. ಆರ್ಥಿಕರಾಗಿ ಸದೃಢರಿಲ್ಲದ ಬಡವರ ಮಕ್ಕಳಿಂದಲೂ ಸಾಕಷ್ಟು ಬೇಡಿಕೆ ಬಂದಿದೆ.‌ ವಾರದ ಹಿಂದೆ ನಾವು ಈ ಅಭಿಯಾನವನ್ನು ಆರಂಭಿಸಿದ್ದು ಮಂಗಳೂರಿನಲ್ಲಿ ನಾಲ್ಕು ಫೋನ್‌ಗಳನ್ನು ದಾನ ಮಾಡಿದ್ದೇವೆ. ಎರಡು ಮೊಬೈಲ್‌ಗಳನ್ನು ನಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಮನೆ ಕೆಲಸ ಮಾಡುವ ಕುಟುಂಬದ ಮಕ್ಕಳಿಗೆ ಹಾಗೂ ಇನ್ನೆರಡು ಮೊಬೈಲ್‌ಗಳನ್ನು ವೈಟ್‌ ಡವ್ಸ್ ಅನಾಥಾಶ್ರಮದ ಮಕ್ಕಳಿಗೆ ನೀಡಿದ್ದೇವೆ ಎಂದು ಅಮನ್ ತಿಳಿಸಿದ್ದಾರೆ. 

ಮಂಗಳೂರಿನಲ್ಲಿ ಒಟ್ಟು 12 ಫೋನ್ ಗಳನ್ನು ನೀಡಲು ದಾನಿಗಳು ಮುಂದೆ ಬಂದಿದ್ದಾರೆ. ನಮ್ಮೊಂದಿಗೆ ಮುಂಬೈನ ಸಂಘಟನೆಯೊಂದು ಕೈಜೋಡಿಸಿದ್ದು ಅಲ್ಲಿನ ಕೆಲವರು ತಮ್ಮ ಫೋನ್‌ಗಳನ್ನು ದಾನ ಮಾಡಲು ಆಸಕ್ತಿ ತೋರಿದ್ದಾರೆ. ಶೀಘ್ರವೇ ಬೆಂಗಳೂರಿಗೆ ಅದನ್ನು ಕಳುಹಿಸಿಕೊಡಲಿದ್ದಾರೆ ಎಂದು ಹೇಳಿದ್ದಾರೆ. 

ಈ ಬಗ್ಗೆ ಮಾತನಾಡಿದ ಸಂಸ್ಥೆಯ ಸದಸ್ಯೆ ಸುಚೇತಾ ವಿಕ್ರಮ್, ಬೆಂಗಳೂರಿನಲ್ಲಿ ನಾಲ್ಕು ಫೋನ್‌ಗಳನ್ನು ಸಂಗ್ರಹಿಸಿದ್ದು ಇನ್ನೂ ಅದನ್ನು ದಾನ ಮಾಡಿಲ್ಲ. ಇನ್ನಷ್ಟು ಮೊಬೈಲ್‌ಗಳನ್ನು ಸಂಗ್ರಹಿಸಿ ದಾನ ಮಾಡುತ್ತೇವೆ. ಉಜ್ವಲ್‌ ಎಂಬ ಶಾಲೆಗೆ ದಾನ ಮಾಡಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಆನ್ಲೈನ್ ಕ್ಲಾಸ್ ನಿಂದ ಭರವಸೆ ಕಳಕೊಂಡ ಮಕ್ಕಳಿಗೆ ನೆರವು ನೀಡಲು ವಿದ್ಯಾರ್ಥಿಗಳಿಬ್ಬರು ಮುಂದಾಗಿದ್ದು ಉತ್ತಮ ನಡೆಯೇ ಸರಿ.