ಭಿಕ್ಷುಕರ ಹಸಿವು ನೀಗಿಸಲು ಸಮೋಸಾ ಮಾರಾಟಕ್ಕಿಳಿದ ಯುವಕ !

26-08-20 04:10 pm       Special Report - Mangaluru Correspondent   ಸ್ಪೆಷಲ್ ಕೆಫೆ

ಭಿಕ್ಷುಕರ ಹಸಿವಿನ ಬೇಗುದಿಯ ಕಂಡು ಯುವಕನ ಮನಕರಗಿದ್ದು ಅದಕ್ಕಾಗಿ ಹಸಿವು ನೀಗಿಸಲೆಂದೇ ಹೊಸ ಕಾಯಕಕ್ಕೆ ಮುಂದಾಗಿದ್ದಾನೆ. ಸಮೋಸಾ ಮಾರಾಟದಿಂದ ಬರುವ ಲಾಭದ ಹಣದಲ್ಲಿ ಪ್ರತಿ ವಾರ ಭಿಕ್ಷುಕರ ಹಸಿವು ನೀಗಿಸುವ ಪಣ ತೊಟ್ಟಿದ್ದಾನೆ.

ಮಂಗಳೂರು, ಆಗಸ್ಟ್ 26: ಲಾಕ್ಡೌನ್ ಸಮಯದಲ್ಲಿ ಕೆಲಸ ಕಳಕೊಂಡವರು ಅದೆಷ್ಟೋ ಮಂದಿ. ಊಟಕ್ಕಿಲ್ಲದೆ ಪರದಾಡಿದ ಮಂದಿಯೂ ಅದೆಷ್ಟೋ ಜನ. ಅನ್ನ, ನೀರು ಇಲ್ಲದೆ ಪರದಾಡಿದ ಅನಾಥರಿಗೆ ಕೆಲವು ಸಾಮಾಜಿಕ ಸಂಘಟನೆಗಳು ಅನ್ನ ಕೊಟ್ಟು ಹಸಿವು ನೀಗಿಸಿದ್ದೂ ಇದೆ. ಆದರೆ, ಇಲ್ಲೊಬ್ಬ ಯುವಕ ಹೀಗೆ ಹಸಿವಿನಿಂದ ಕಂಗೆಟ್ಟು ಕೈಯೊಡ್ಡುವ ಭಿಕ್ಷುಕರ ಹಸಿವು ನೀಗಿಸಲೆಂದೇ ಸಮೋಸಾ ಮಾರುವ ಕೆಲಸಕ್ಕೆ ಮುಂದಾಗಿದ್ದಾನೆ.

ಹೌದು.. ಭಿಕ್ಷುಕರ ಹಸಿವಿನ ಬೇಗುದಿಯ ಕಂಡು ಯುವಕನ ಮನಕರಗಿದ್ದು ಅದಕ್ಕಾಗಿ ಹಸಿವು ನೀಗಿಸಲೆಂದೇ ಹೊಸ ಕಾಯಕಕ್ಕೆ ಮುಂದಾಗಿದ್ದಾನೆ. ಆತನ ಹೆಸರು ಬಿನೋಯ್ ಡಿಕೋಸ್ಟ. 20 ವರ್ಷದ ಹರೆಯದ ಹುಡುಗ. ಮಂಗಳೂರಿನ ಉರ್ವಾ ಮಾರ್ಕೆಟ್ ಬಳಿ ದಿನವೂ ಬೆಳಗ್ಗೆ ಸೈಕಲಿನಲ್ಲಿ ಸಮೋಸಾ ಇಟ್ಟು ಮಾರಾಟಕ್ಕೆ ತೊಡಗುವ ಈ ಹುಡುಗನ ಧ್ಯೇಯ ಮಾತ್ರ ಉದಾತ್ತವಾದ್ದು. ಸಮೋಸಾ ಮಾರಾಟದಿಂದ ಬರುವ ಲಾಭದ ಹಣದಲ್ಲಿ ಪ್ರತಿ ವಾರ ಭಿಕ್ಷುಕರ ಹಸಿವು ನೀಗಿಸುವ ಪಣ ತೊಟ್ಟಿದ್ದಾನೆ. ಬಿನೋಯ್ ಡಿಕೋಸ್ಟನ ಮಾತುಗಳಲ್ಲೇ ಅದನ್ನು ಕೇಳಿ..

‘’ತಾಯಿ ಜೊತೆ ಸೆಂಟ್ರಲ್ ಮಾರುಕಟ್ಟೆಗೆ ಹೋಗಿದ್ದಾಗ ಅಲ್ಲಿ ಸಿಕ್ಕ ಭಿಕ್ಷುಕರ ಸ್ಥಿತಿ ಕಂಡು ಮನಕರಗಿತು. ನಮಗೆ ಹಣ ಬೇಡ, ಹಸಿವಿಗೆ ತಿನ್ನಲು ಏನಾದರೂ ಕೊಡಿ ಎಂದು ಅಂಗಲಾಚುತ್ತಿದ್ದರು. ಆದರೆ ಅವರಿಗೆ ಕೊಡಲು ನಮ್ಮಲ್ಲೇನಿದೆ. ಒಂದು ಹೊತ್ತಿಗೆ ಕೊಡಬಹುದು ಅಷ್ಟೇ.. ಈಗ ಕೊರೊನಾ ಕಾರಣದಿಂದ ಯಾರಲ್ಲೂ ಹಣವೂ ಇಲ್ಲ. ಹಣ ಡೊನೇಷನ್ ಮಾಡೋಕೂ ಹಿಂದೆ ಮುಂದೆ ನೋಡುತ್ತಾರೆ. ಹೀಗೆ ಯೋಚಿಸಿದಾಗ ನಮ್ಮ ಮನೆಯವರು ಸಮೋಸಾ ಮಾರುವ ಐಡಿಯಾ ಕೊಟ್ಟಿದ್ದಾರೆ. ದಿನವೂ ಬೆಳಗ್ಗೆ ವೆಜ್ ಸಮೋಸಾ ತಯಾರಿಸಿ ಕೊಡುತ್ತಾರೆ...

‘’ಸಮೋಸಾ ಮಾರಿ ಬಂದ ಹಣದಲ್ಲಿ ಪ್ರತಿ ಭಾನುವಾರ ನಗರದ ಭಿಕ್ಷುಕರ ಹಸಿವು ನೀಗಿಸುವ ಕೆಲಸ ಮಾಡುತ್ತೇವೆ. ಸಮೋಸಾ, ಬ್ರೆಡ್, ಬನ್ ಹೀಗೆ ಒಂದಷ್ಟು ಪೊಟ್ಟಣ ಕೈಗೆ ನೀಡುತ್ತೇವೆ. ಯಾವ ಜಾಗಕ್ಕೂ ಹೇಳಿ ಹೋಗುವುದಿಲ್ಲ. ಮಂಗಳೂರಿನ ನೆಹರು ಮೈದಾನ, ರೈಲು ನಿಲ್ದಾಣ, ಕಂಕನಾಡಿ ಹೀಗೆ ಬೇರೆ ಬೇರೆ ಕಡೆ ಒಂದು ಹೊತ್ತಿನ ಊಟಕ್ಕಾಗಿ ಪರದಾಡುವ ಮಂದಿ ಇದ್ದಾರೆ. ಅಲ್ಲಿಗೇ ಹೋಗಿ ಪೊಟ್ಟಣಗಳನ್ನು ಕೊಡುತ್ತಿದ್ದೇವೆ. ಮೊನ್ನೆ ಭಾನುವಾರ ಒಂದೇ 200ಕ್ಕೂ ಹೆಚ್ಚು ಆಹಾರ ವಸ್ತುಗಳ ಪೊಟ್ಟಣ ಕೊಟ್ಟಿದ್ದೇವೆ. ನೆಹರು ಮೈದಾನದ ಬಳಿಯ ಆರ್ ಟಿಓ ಕಚೇರಿ ಬಳಿ ತೆರಳಿದಾಗ, ಇನ್ನೊಂದು ಕಡೆಯಿಂದ ಬ್ಯಾರಿಕೇಡ್ ಹಾರಿ ಓಡಿ ಬಂದಿದ್ದಾರೆ. ಆದರೆ ನಮ್ಮಲ್ಲಿ ಆಹಾರ ವಸ್ತುಗಳು ಖಾಲಿಯಾಗಿದ್ದವು. ಮುಂದಿನ ವಾರ ಇನ್ನಷ್ಟು ಆಹಾರ ಒಯ್ಯಬೇಕೆಂಬ ಉದ್ದೇಶ ಇದೆ ಎಂದು ಬಿನೋಯ್ ಹೇಳುತ್ತಾನೆ.

ಮೆಕ್ ಡೊನಾಲ್ಡ್ ಹೋಯ್ತು, ಸಮೋಸಾ ಹಿಡೀತು..

ಇಷ್ಟಕ್ಕೂ ಬಿನೋಯ್ ಡಿಕೋಸ್ಟ ಸಾದಾ ಸೀದಾ ಹುಡುಗನಲ್ಲ. ತಂದೆ ಕುವೈಟ್ನಲ್ಲಿದ್ದು ಉದ್ಯೋಗದಲ್ಲಿದ್ದಾರೆ. ಹತ್ತನೇ ಕ್ಲಾಸ್ ವರೆಗೂ ಇಂಗ್ಲಿಷ್ ಮೀಡಿಯಮ್ಮಲ್ಲಿ ಕಲಿತಿದ್ದು ಪಿಯುಸಿಯನ್ನು ದೂರಶಿಕ್ಷಣದಲ್ಲಿ ಮುಗಿಸಿದ್ದಾನೆ. ಈಗ ಪದವಿಯನ್ನೂ ದೂರ ಶಿಕ್ಷಣದಲ್ಲಿಯೇ ಮಾಡುತ್ತಿದ್ದಾನೆ. ಕಳೆದ ಜನವರಿ ತಿಂಗಳಲ್ಲಿ ಉಡುಪಿಯ ಮಣಿಪಾಲದಲ್ಲಿ ಬಹುರಾಷ್ಟ್ರೀಯ ಕಂಪೆನಿ ಮೆಕ್ ಡೊನಾಲ್ಡ್ ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ. ಮಣಿಪಾಲದಲ್ಲಿ ಅತಿ ಹೆಚ್ಚು ಬೇಡಿಕೆಯಿದ್ದ ಮೆಕ್ ಡೊನಾಲ್ಡ್ ಫಾಸ್ಟ್ ಫುಡ್ ಕಂಪೆನಿ ಲಾಕ್ಡೌನ್ ಬಳಿಕ ಮುಚ್ಚುಗಡೆಯಾಗಿದೆ.

ಹೀಗಾಗಿ ಮತ್ತೆ ಮೆಕ್ ಡೊನಾಲ್ಡ್ ಕೆಲಸ ಸಿಗುವುದೇ ಎಂಬ ಖಾತ್ರಿಯಿಲ್ಲ. ಈಗ ಸಮೋಸಾ ಮಾರಾಟಕ್ಕೆ ಜನ ಮೆಚ್ಚಿದ್ದಾರೆ. ತುಂಬಾ ಜನ ನಮ್ಮ ಉದ್ದೇಶ ಅರಿತು ಬೆಂಬಲಿಸಿದ್ದಾರೆ. ನಿತ್ಯವೂ ಬೆಳಗ್ಗೆ ಎಂಟು ಗಂಟೆಗೆ ಸಮೋಸಾ ತರುತ್ತೇನೆ. ಇದಕ್ಕಾಗಿ ಸೈಕಲ್ ತಗೊಂಡಿದ್ದೇನೆ. ಸಮೋಸಾ ಮುಗಿಯುವ ತನಕ ಇರುತ್ತೇನೆ. ಸಾಧಾರಣ ಮಧ್ಯಾಹ್ನ 11- 12 ಗಂಟೆ ಒಳಗೆ ಸಮೋಸಾ ಖಾಲಿಯಾಗುತ್ತದೆ. ದಿನಕ್ಕೆ 150-200 ಸಮೋಸಾ ಹೋಗುತ್ತಿದೆ. ಚಿಕ್ಕದಕ್ಕೆ 5 ರೂ., ದೊಡ್ಡ ಸೈಜಿನ ಪೊಟೇಟೋ ಓನಿಯನ್ ಸಮೋಸಾಗೆ ಹತ್ತು ರೂ.ಗೆ ಮಾರುತ್ತೇನೆ. ಆರಂಭದಲ್ಲಿ ನನ್ನನ್ನು ನೋಡಿದ ಕೆಲವು ವೈದ್ಯರು, ತಮ್ಮ ಫೇಸ್ಬುಕ್ಕಲ್ಲಿ ಹಾಕಿದ್ರು. ಆಬಳಿಕ ಶಾಸಕ ವೇದವ್ಯಾಸ ಕಾಮತ್ ಕೂಡ ನನ್ನ ಬಗ್ಗೆ ಫೇಸ್ಬುಕ್ಕಲ್ಲಿ ಹಾಕಿದ್ರು. ವೋಕಲ್ ಫಾರ್ ಲೋಕಲ್ ಎಂದು ಹಾಕಿದ್ದರಿಂದ ಜನ ಈಗ ನನ್ನನ್ನು ಕೇಳಿಕೊಂಡು ಬರುತ್ತಿದ್ದಾರೆ ಎಂದು ಬಿನೋಯ್ ಮುಗುಳ್ನಗುತ್ತಾನೆ.