ಈ ಜಪಾನಿ ಮಾವಿನ ಹಣ್ಣಿನ ಬೆಲೆ ಕೇಜಿಗೆ ಬರೀ ಎರಡೂವರೆ ಲಕ್ಷ ರೂಪಾಯಿ..! ಜಗತ್ತಿನ ಅತಿ ದುಬಾರಿ ಹಣ್ಣಿಗೆ ಭಾರೀ ಡಿಮ್ಯಾಂಡ್ !

18-06-21 08:58 pm       Headline Karnataka News Network   ಸ್ಪೆಷಲ್ ಕೆಫೆ

ಜಪಾನ್ ಮೂಲದ ಈ ಮಾವಿನ ಹಣ್ಣಿನ ಬೆಲೆ ಕಿಲೋ ಒಂದಕ್ಕೆ 2.70 ಲಕ್ಷ ಅಂತೆ. ಜಗತ್ತಿನಲ್ಲಿಯೇ ಅತ್ಯಂತ ದುಬಾರಿ ಹಣ್ಣು ಎನ್ನುವ ರೀತಿ ಬಿಂಬಿತ ಆಗಿರುವ ಈ ಮಾವಿನ ಹಣ್ಣು ಜಪಾನ್ ದೇಶದ ಮಿಯಾಝಾಕಿ ಎಂಬ ಊರಿನದ್ದು.

ಇಂದೋರ್, ಜೂನ್ 18: ಮಾವಿನ ಹಣ್ಣು ಕಿಲೋ ಒಂದಕ್ಕೆ ಹೆಚ್ಚೆಂದರೆ ಎಷ್ಟು ರೇಟ್ ಇರಬಹುದು. ‌ಮುನ್ನೂರು, ನಾಲ್ನೂರು... ಬಿಡಿ ಏನೋ ಸ್ಪೆಷಲ್ ಅಂದ್ರೆ, ಬರೋಬ್ಬರಿ ಒಂದು ಸಾವಿರ ರೂಪಾಯಿ ಇರಬಹುದು‌.. ಆದ್ರೂ ಇಷ್ಟು ರೇಟಿದ್ಯಾ ಅಂದರೂ ನಂಬೋಕೆ ಆಗಲ್ಲ.. ಆದರೆ, ನಾವು ನೀವು ಎಣಿಸಲಿಕ್ಕೆ ಸಾಧ್ಯನೇ ಇಲ್ಲದ ಮಾವಿನ ಹಣ್ಣಿನ ವೆರೈಟಿ ಜಪಾನಲ್ಲಿ ಇದೆಯಂತೆ.

ಹೌದು.. ಜಪಾನ್ ಮೂಲದ ಈ ಮಾವಿನ ಹಣ್ಣಿನ ಬೆಲೆ ಕಿಲೋ ಒಂದಕ್ಕೆ 2.70 ಲಕ್ಷ ಅಂತೆ. ಜಗತ್ತಿನಲ್ಲಿಯೇ ಅತ್ಯಂತ ದುಬಾರಿ ಹಣ್ಣು ಎನ್ನುವ ರೀತಿ ಬಿಂಬಿತ ಆಗಿರುವ ಈ ಮಾವಿನ ಹಣ್ಣು ಜಪಾನ್ ದೇಶದ ಮಿಯಾಝಾಕಿ ಎಂಬ ಊರಿನದ್ದು. ಅಲ್ಲಿ ಈ ಮಾವಿನ ಹಣ್ಣಿಗೆ ತಯ್ಯೋ ನೋ ಟೊಮೆಗೋ ಎಂದು ಕರೆಯುತ್ತಾರೆ.

ಅಂದಹಾಗೆ, ಈ ಅಸಾಧಾರಣ ರೀತಿಯ ಮಾವಿನ ಹಣ್ಣುಗಳ ತಳಿಯ ಗಿಡಗಳನ್ನು ಮಧ್ಯಪ್ರದೇಶದ ದಂಪತಿ ತಂದು ಸಾಕಿ ಬೆಳೆಸಿದ್ದಾರೆ. ಎರಡು ಗಿಡ ತಂದು ನೆಟ್ಟಿದ್ದು ಈಗ ಸಾಧಾರಣ ಗಾತ್ರಕ್ಕೆ ಮರವಾಗಿ ಬೆಳೆದು ನಿಂತಿದೆ. ವಿಶೇಷ ಅಂದ್ರೆ, ಈ ಎರಡು ಮಾವುಗಳ ಮರವನ್ನು ಕಳ್ಳಕಾಕರಿಂದ ಕಾಯುವುದಕ್ಕಾಗಿ ದಂಪತಿ ಡಜನ್ ಗಟ್ಟಲೆ ನಾಯಿಗಳನ್ನೂ ಸಾಕಿದ್ದಾರೆ.

ಮಿಯಝಾಕಿ ಮಾವಿನ ಮರ ಬೆಳೆದು ಹಣ್ಣು ಬಿಡಲು ಅತಿ ಹೆಚ್ಚು ಸೂರ್ಯನ ಬೆಳಕು ಬೇಕಂತೆ. ಸುದೀರ್ಘ ಹಗಲು ಇರುವ ಅರ್ಥಾತ್ ಸೂರ್ಯನ ಬೆಳಕು ಬೀಳುವ ಪ್ರದೇಶಗಳಲ್ಲಿ ಈ ಹಣ್ಣನ್ನು ಬೆಳೆಯಲಾಗುತ್ತೆ. ಬಾಂಗ್ಲಾದೇಶ, ಫಿಲಿಪೈನ್ಸ್, ಇಂಡೋನೇಷ್ಯಾದಲ್ಲಿ ಈ ಹಣ್ಣನ್ನು ಬೆಳೆಯುತ್ತಾರೆ. ಅತಿ ಹೆಚ್ಚು ಸೂರ್ಯನ ಬೆಳಕು ಬೀಳುವಲ್ಲಿ ಈ ಮಾವುಗಳು ಕೆಂಬಣ್ಣದ ರೂಪದಲ್ಲಿ ಹಣ್ಣು ಬಿಡುತ್ತವೆ. ಇದೇ ಕಾರಣಕ್ಕೆ ಈ ಹಣ್ಣುಗಳನ್ನು ಸೂರ್ಯನ ಮೊಟ್ಟೆ ಎಂದು ಕರೆಯುತ್ತಾರೆ. ಆದರೆ, ದಕ್ಷಿಣ ಏಷ್ಯಾದಲ್ಲಿ ಸೂರ್ಯನ ಬಿಸಿಲು ಕಡಿಮೆ ಇರುವುದರಿಂದ ಸಾಮಾನ್ಯವಾಗಿ ಇತರೇ ಮಾವಿನ ಹಣ್ಣುಗಳ ರೀತಿ ಹಳದಿ ಬಣ್ಣದಲ್ಲಿರುತ್ತವೆ.

ಮಿಯಾಝಾಕಿಯ ಹಣ್ಣು ಸಾಧಾರಣ ಗಾತ್ರದ್ದು 350 ಗ್ರಾಮ್ ಇರುತ್ತದೆ. ಹೆಚ್ಚೆಂದರೆ ಒಂದು ಹಣ್ಣು 900 ಗ್ರಾಮ್ ವರೆಗೆ ತೂಗುವುದಂತೆ. ಇತರೇ ಮಾವಿನ ಹಣ್ಣುಗಳಿಗಿಂತ ಹೆಚ್ಚು ಸಿಹಿಯಾಗಿದ್ದು, ಸಕ್ಕರೆ ಅಂಶವೂ ಇದರಲ್ಲಿ 15 ಶೇಕಡಾ ಹೆಚ್ಚು. ಗುಣಮಟ್ಟದಲ್ಲಿ ಸೂಪರ್ ಆಗಿರುವ ಕೆಂಬಣ್ಣದ ಹಣ್ಣುಗಳಿಗೆ ಹೆಚ್ಚು ಬೇಡಿಕೆಯಂತೆ. ಸೂರ್ಯನ ಮೊಟ್ಟೆ ಎಂದು ಹೇಳಲ್ಪಡುವ ಈ ಹಣ್ಣುಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಡಿಮ್ಯಾಂಡ್. ಲಕ್ಷಾಂತರ ರೂಪಾಯಿಗೆ ಬಿಕರಿಯಾಗುವುದಂತೆ.

ಈ ರೀತಿಯ ಹಣ್ಣುಗಳ ತಳಿಯನ್ನು 1884ರಲ್ಲಿ ಮೊದಲ ಬಾರಿಗೆ ಜಪಾನ್ ದೇಶದ ಮಿಯಾಝಾಕಿ ನಗರದಲ್ಲಿ ಬೆಳೆಯಲಾಗಿತ್ತು. ಬಿಸಿ ವಾತಾವರಣ, ಸುದೀರ್ಘ ಸೂರ್ಯನ ಬೆಳಕು, ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಈ ಮಾವು ಬೆಳೆಯುವುದು ಸೂಕ್ತ ಎನ್ನಲಾಗುತ್ತದೆ. ಸಾಧಾರಣವಾಗಿ ಎಪ್ರಿಲ್, ಮೇ ತಿಂಗಳಲ್ಲಿ ಹಣ್ಣು ಕೊಡುತ್ತದೆ. ಮಿಯಾಝಾಕಿ ಹಣ್ಣಿನ ಬಾಕ್ಸ್ ದರ 9 ಸಾವಿರ ರೂ.ನಿಂದ 2ರಿಂದ 3 ಲಕ್ಷದ ವರೆಗೆ ಮಾರಾಟ ಆಗುವುದಂತೆ. 

Meet Sankalp Parihar and Rani, who hired four security personnel and six dogs to guard two Miyazaki mango trees that they have grown in their orchard in Madhya Pradesh's Jabalpur. This couple has cultivated Japanese Miyazaki mangoes- the rare and the most expensive types of mangoes in the world.