3.5 ಕೋಟಿ ರೂಪಾಯಿಗೆ ಬಿಕರಿಯಾಯ್ತು ಕುರಿ..! ಇನ್ಯಾರನ್ನೂ ಕುರಿ ಕುರಿ ಅನ್ನಬೇಡ್ರೀ !! 

02-09-20 11:49 am       Headline Karnataka News Network   ಸ್ಪೆಷಲ್ ಕೆಫೆ

ಒಂದು ಕುರಿ 50 ಸಾವಿರಕ್ಕೆ ಹೋಗಬಹುದು. ಒಂದು ಕ್ವಿಂಟಾಲ್ ತೂಗಿದರೂ ನಮ್ಮಲ್ಲಿ ಅದಕ್ಕಿಂತ ಹೆಚ್ಚು ಬೆಲೆಗೆ ಹೋಗಲ್ಲ ಬಿಡಿ. ಆದರೆ, ಇಲ್ಲೊಂದು ಕುರಿ ಬರೋಬ್ಬರಿ ಮೂರೂವರೆ ಕೋಟಿ ರೂಪಾಯಿಗೆ ಬಿಕರಿಯಾಗಿ ದಾಖಲೆಯ ಪುಟ ಸೇರಿದೆ.

ಲಂಡನ್, ಸೆಪ್ಟೆಂಬರ್ 2: ಮಾಂಸದ ಕುರಿಯ ರೇಟ್ ಎಷ್ಟಿರಬಹುದು. ಹೆಚ್ಚೆಂದರೆ ಒಂದು ಕುರಿ 50 ಸಾವಿರಕ್ಕೆ ಹೋಗಬಹುದು. ಒಂದು ಕ್ವಿಂಟಾಲ್ ತೂಗಿದರೂ ನಮ್ಮಲ್ಲಿ ಅದಕ್ಕಿಂತ ಹೆಚ್ಚು ಬೆಲೆಗೆ ಹೋಗಲ್ಲ ಬಿಡಿ. ಆದರೆ, ಇಲ್ಲೊಂದು ಕುರಿ ಬರೋಬ್ಬರಿ ಮೂರೂವರೆ ಕೋಟಿ ರೂಪಾಯಿಗೆ ಬಿಕರಿಯಾಗಿ ದಾಖಲೆಯ ಪುಟ ಸೇರಿದೆ. ಕೇಳಿದರೆ ಅಚ್ಚರಿ ಅನಿಸಿದ್ರೂ ಇದು ನೈಜ ಘಟನೆ. ಕುರಿಯೊಂದು ಇಷ್ಟು ದೊಡ್ಡ ರೇಟಿಗೆ ಸೇಲ್ ಆಗಲು ಕಾರಣ ಆಗಿದ್ದು ಅಲ್ಲಿನ ಏಲಂ ಮಾರುಕಟ್ಟೆ. 

ಈ ವಿದ್ಯಮಾನ ನಡೆದಿರೋದು ಯುರೋಪ್ ದೇಶ ಸ್ಕಾಟ್ಲೇಂಡ್ ದೇಶದಲ್ಲಿ. ಅಲ್ಲಿನ ಲ್ಯಾನಾರ್ಕ್ ನಗರದಲ್ಲಿ ನಡೆಯುವ ಟೆಕ್ಸೆಲ್ ಎನ್ನುವ ಹೈಬ್ರಿಡ್ ಕುರಿಗಳ ವಾರ್ಷಿಕ ಏಲಂ ಮಾರುಕಟ್ಟೆಯಲ್ಲಿ ದಷ್ಟಪುಷ್ಟ ಕುರಿಯೊಂದು ಜಗತ್ತಿನಲ್ಲೇ ಅತಿ ಹೆಚ್ಚು ದರಕ್ಕೆ ಬಿಕರಿಯಾಗಿದೆ. ಆರಂಭದಲ್ಲಿ 10,500 ಪೌಂಡ್ ದರಕ್ಕೆ ಬಿಡ್ ಆದ ಡಬಲ್ ಡೈಮಂಡ್ ಹೆಸರಿನ ಈ ಕುರಿಗೆ ನೋಡ ನೋಡುತ್ತಲೇ ಹರಾಜು ದರ ಹೆಚ್ಚುತ್ತಲೇ ಹೋಯ್ತು. ಕೊನೆಗೆ ಚೆಶೈರ್ ನಗರದ ಉದ್ಯಮಿ ಚಾರ್ಲೀ ಬಾಡೆನ್ ಎನ್ನುವಾತ ತನ್ನ ಮೂವರು ಸ್ನೇಹಿತರ ಜೊತೆ ಸೇರಿ 3.68 ಲಕ್ಷ ಪೌಂಡಿಗೆ ಖರೀದಿ ಮಾಡಿಯೇ ಬಿಟ್ಟ. ಇಷ್ಟೊಂದು ರೇಟಿಗೆ ಕುರಿಯೊಂದು ಹರಾಜು ಆಗಿದ್ದು ಅಲ್ಲಿನ ಮಾರುಕಟ್ಟೆ ತಜ್ಞರಿಗೇ ಅಚ್ಚರಿಯಾಗಿತ್ತು. ಟೆಕ್ಸೆಲ್ ತಳಿಯ ಕುರಿ (ಭಾರತದ ಕರೆನ್ಸಿಯ 3.5 ಕೋಟಿ ರೂಪಾಯಿ ) ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆಗಿದ್ದು ಹೊಸ ದಾಖಲೆಯಾಗಿದೆ. ಜಗತ್ತಿನ ಅತಿ ದುಬಾರಿ ಕುರಿ ಎಂಬ ಖ್ಯಾತಿಗೂ ಪಾತ್ರವಾಗಿದೆ. 

ಅಂದಹಾಗೆ, ಟೆಕ್ಸೆಲ್ ಎನ್ನುವುದು ನೆದರ್ಲೇಂಡ್ ಬಳಿ ಇರುವ ಪುಟ್ಟ ದ್ವೀಪದ ಹೆಸರು. ಅಲ್ಲಿ ಬ್ರಿಟನ್ ಮೂಲದ ಕೃಷಿಕರು ಅತ್ಯುತ್ತಮ ಮಾದರಿಯ ಮಾಂಸಕ್ಕಾಗಿ ಕುರಿಯ ಹೈಬ್ರಿಡ್ ತಳಿಯನ್ನು ಬೆಳೆಯುತ್ತಿದ್ದಾರೆ. ಇಲ್ಲಿ ಬೆಳೆದ ಕುರಿ ತಳಿಗೆ ಟೆಕ್ಸೆಲ್ ಅಂತಲೇ ಹೆಸರು ಬಂದಿದೆ. ಈ ಮಾದರಿಯ ಕುರಿಗಳಿಗೆ ಹೆಚ್ಚು ಡಿಮ್ಯಾಂಡ್ ಇರುವ ಕಾರಣ ಸ್ಕಾಟ್ಲೆಂಡ್, ಇಂಗ್ಲೆಂಡ್ ಹೀಗೆ ಯುರೋಪಿಯನ್ ರಾಷ್ಟ್ರಗಳಲ್ಲಿ ಟೆಕ್ಸೆಲ್ ತಳಿಯ ಕುರಿಗಳನ್ನು ಹರಾಜು ಮಾಡಲಾಗುತ್ತೆ. ರಾಷ್ಟ್ರ ಮಟ್ಟದಲ್ಲಿ ನಡೆಯುವ ಈ ಹರಾಜುಗಳಲ್ಲಿ ಬೇರೆ ಬೇರೆ ದೇಶಗಳ ಜನರು ಭಾಗವಹಿಸುತ್ತಾರೆ. ಕೆಲವೊಮ್ಮೆ ಪ್ರತಿಷ್ಠೆಗೆ ಬಿದ್ದು ಖರೀದಿಗೆ ಮುಂದಾದರೆ ಕುರಿಯೂ ಈ ಪರಿ ರೇಟಿಗೆ ಬಿಕರಿಯಾಗುತ್ತದೆ. ಇನ್ನು ಯಾರೂ ಕೀಟಲೆ ಮಾಡೋದಕ್ಕೂ ಕುರಿ ಕುರಿ ಎಂದು ಹಲುಬುವಂತಿಲ್ಲ. ಕುರಿಯೂ ತಾನೇನೂ ಕಮ್ಮಿ ಇಲ್ಲ ಎನ್ನೋದನ್ನು ತೋರಿಸಿಕೊಟ್ಟಿದೆ.