ನಾಡಿಗೆ ಬರುವ ಕಾಡು ಪ್ರಾಣಿಗಳ ಓಡಿಸಲು ರೆಡಿಯಾಗಿದೆ ವಿಭಿನ್ನ ಕೋವಿ ! 

04-09-20 10:23 am       Mangalore Reporter   ಸ್ಪೆಷಲ್ ಕೆಫೆ

ಕಾಡು ಪ್ರಾಣಿಗಳ ಸಮಸ್ಯೆಯನ್ನು ಸ್ವತಃ ಅನುಭವಿಸಿದ ವ್ಯಕ್ತಿಯೊಬ್ಬರು ಇದಕ್ಕೆ ಸರಳ ಉಪಾಯ ಕಂಡುಕೊಂಡಿದ್ದು ವಿಭಿನ್ನ ರೀತಿಯ ಕೋವಿ ರೆಡಿ ಮಾಡಿದ್ದಾರೆ. 

ಬೆಳ್ತಂಗಡಿ, ಸೆಪ್ಟೆಂಬರ್ 4: ಪಶ್ಚಿಮ ಘಟ್ಟಗಳ ತಪ್ಪಲು ಭಾಗದ ಕಾಡಂಚಿನ ಕೃಷಿಕರಿಗೆ ತಾವು ಬೆಳೆದ ಬೆಳೆಯನ್ನು ಪ್ರಾಣಿಗಳಿಂದ ರಕ್ಷಿಸಿಕೊಳ್ಳುವುದೇ ದೊಡ್ಡ ಸವಾಲು. ದಿನವೂ ದಾಳಿ ಇಡುವ ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆಗಳನ್ನು ಉಳಿಸಿಕೊಳ್ಳಲು ಪರದಾಡುವ ಸ್ಥಿತಿಯಿದೆ. ಕಾಡು ಪ್ರಾಣಿಗಳ ಸಮಸ್ಯೆಯನ್ನು ಸ್ವತಃ ಅನುಭವಿಸಿದ ವ್ಯಕ್ತಿಯೊಬ್ಬರು ಇದಕ್ಕೆ ಸರಳ ಉಪಾಯ ಕಂಡುಕೊಂಡಿದ್ದು ವಿಭಿನ್ನ ರೀತಿಯ ಕೋವಿ ರೆಡಿ ಮಾಡಿದ್ದಾರೆ. 

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಕರಿಮಣೇಲು ಗ್ರಾಮದ ಗಾಂಧಿನಗರ ಸಮೀಪದ ಗೋಪಾಲ ಆಚಾರಿ ಮರದ ಕೆಲಸ ಮಾಡುತ್ತಿರುವ ಉದ್ಯೋಗಿ. ಕಾಡು ಪ್ರಾಣಿಗಳಿಂದ ಈ ಭಾಗದ ಕೃಷಿಕರು ತೊಂದರೆಗೀಡಾಗಿದ್ದನ್ನು ಸ್ವತಃ ಕಂಡಿದ್ದ ಗೋಪಾಲ ಅವರು, ಇದಕ್ಕೊಂದು ಕೋವಿ ತಯಾರಿಸಿದ್ದಾರೆ. ಈ ಕೋವಿ ನೋಡಲು ಅಸಲಿ  ಕೋವಿಯಂತೆ ಕಂಡರೂ ಪ್ರಾಣಿಗಳನ್ನು ಕೊಲ್ಲಲು ಇದರಿಂದ ಆಗುವುದಿಲ್ಲ. ಆದರೆ ಪ್ರಾಣಿಗಳನ್ನು ಓಡಿಸಲು ಸುಲಭವಾಗಿ ಬಳಸಬಹುದು. ಕೋವಿಯ ಬಳಕೆ ಕೂಡ ತುಂಬಾ ಸರಳವಾಗಿದ್ದು ಕೋವಿಯೊಳಗೆ ಪಟಾಕಿ ಇಟ್ಟು ನಳಿಕೆಯೊಳಗೆ ಚಿಕ್ಕ ಚಿಕ್ಕ ಕಲ್ಲುಗಳನ್ನು ಹಾಕಿ ಪಟಾಕಿಗೆ ಬೆಂಕಿ ಹಚ್ಚಿದ ಕೂಡಲೇ ದೊಡ್ಡ ಶಬ್ದದಂತೆ ಆ ಕಲ್ಲುಗಳು ನಳಿಕೆಯಿಂದ ರಭಸವಾಗಿ ಹೊರ ಚೆಲ್ಲಲ್ಪಡುತ್ತದೆ. ಈ ದೊಡ್ಡ ಶಬ್ದಕ್ಕೆ ಹಾಗೂ ಚಿಕ್ಕ ಚಿಕ್ಕ ಕಲ್ಲು ರಭಸದಲ್ಲಿ ಪ್ರಾಣಿಗಳ ಮೈ ಮೇಲೆ ಬೀಳುವುದರಿಂದ ಓಡುತ್ತವಲ್ಲದೆ, ಮತ್ತೆ ಆ ಕಡೆ ಪ್ರಾಣಿಗಳು ಬರುವುದಕ್ಕೆ ಹೆದರುತ್ತವೆ. ಆದರೆ ಈ ಕೋವಿ ಬಳಕೆಯಿಂದ ಯಾವ ರೀತಿಯಲ್ಲೂ ಪ್ರಾಣಿಗಳ ಜೀವಕ್ಕೆ ಅಪಾಯವಾಗುವುದಿಲ್ಲ.

ಕೃಷಿಕರಿಗೆ ಇದೊಂದು ಉತ್ತಮ ಸಾಧನವಾಗಿದೆ ಎಂದು ಹೇಳುವ ಗೋಪಾಲ ಆಚಾರ್ಯ, ಕಳೆದ 35 ವರ್ಷಗಳಿಂದ ಮರದ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸ್ಥಳೀಯ ಕೃಷಿಕರ ಬವಣೆ ಕಂಡು ಈ ಬಗ್ಗೆ ಯೋಚಿಸಿದ ಗೋಪಾಲ, ಆರು ತಿಂಗಳ ಹಿಂದೆ ಒಂದೆರಡು ಕೋವಿಗಳನ್ನು ತಯಾರಿಸಿ ಸ್ಥಳೀಯ ಕೃಷಿಕರಿಗೆ ನೀಡಿದ್ದರು. ಕೋವಿಯನ್ನು ಉಪಯೋಗಿಸಿ, ಒಳ್ಳೆಯ ಅಭಿಪ್ರಾಯ ನೀಡಿದರಲ್ಲದೆ  ಅದರಿಂದ ಪ್ರಯೋಜನ ಆಗುತ್ತಿದ್ದರಿಂದ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಈಗಾಗಲೇ ಗೋಪಾಲ ಆಚಾರ್ಯ ಹಲವರಿಗೆ ಕೋವಿಗಳನ್ನು ತಯಾರಿಸಿಕೊಟ್ಟಿದ್ದಾರೆ. ಇದಕ್ಕೆ ಉತ್ತಮ ದರ್ಜೆಯ ಪೈಪ್ ಹಾಗೂ ಇನ್ನಿತರ ವಸ್ತುಗಳು ಬೇಕಾಗುವುದರಿಂದ ಒಟ್ಟು ಮೌಲ್ಯ ಅಂದಾಜು 2500 ರಿಂದ 3000 ರೂಪಾಯಿ ತಗಲುತ್ತದೆ. ರಾತ್ರಿ ಹೊತ್ತು ತೋಟಗಳಿಗೆ ನುಗ್ಗಿ ಬೆಳೆ ನಾಶ ಮಾಡುವ ಕಾಡುಹಂದಿ ಓಡಿಸುವುದಕ್ಕೂ ಇದನ್ನು ಬಳಸಬಹುದು ಎನ್ನುತ್ತಾರೆ.

Join our WhatsApp group for latest news updates