12 ನೇ ಶತಮಾನದ ಇತಿಹಾಸ ಸಾರುತ್ತಿದೆ ವೀರಗಲ್ಲು

12-09-20 06:13 pm       Headline Karnataka News Network   ಸ್ಪೆಷಲ್ ಕೆಫೆ

ಕಳಸ ಸಮೀಪ 12 ನೇ ಶತಮಾನದ ಇತಿಹಾಸ ಸಾರುವ ವೀರಗಲ್ಲು ಪತ್ತೆ, 7 ಅಡಿ ಉದ್ದ ಮತ್ತು 4 ಅಡಿ ಅಗಲವನ್ನು ಹೊಂದಿದ್ದು, ಗ್ರಾನೈಟ್ ಶಿಲೆಯಲ್ಲಿ ಕೆತ್ತಲಾಗಿದೆ.

ಕಳಸ, ಸೆಪ್ಟೆಂಬರ್ 12: ಇತ್ತೀಚೆಗೆ ದೊರೆತ ವೀರಗಲ್ಲು 12 ನೇ ಶತಮಾನದ ಇತಿಹಾಸ ಅನಾವರಣ ಗೊಳಿಸಿದೆ. ಸಂಸೆ ಸಮೀಪದ ನಲ್ಲಿಬೀಡು ಪ್ರದೇಶದ ಕೆಳಮನೆ ಪುಟ್ಟಯ್ಯ ಅವರ ಜಮೀನಿನಲ್ಲಿ ಬಲು ಅಪರೂಪ ಎಂದು ಹೇಳಲಾಗುವ ವೀರಗಲ್ಲು ಪತ್ತೆಯಾಗಿತ್ತು. ಈ ವೀರಗಲ್ಲನ್ನು  ಹೆಚ್. ಆರ್‌. ಪಾಂಡುರಂಗ ಹಿರೇನಲ್ಲೂರು ಮೊದಲು ಪತ್ತೆಮಾಡಿದ್ದರು. ಇದೀಗ ಇದರ ಮರು ಅಧ್ಯಯನ ನಡೆದಿದ್ದು ಡಾ‌.ಸುಪ್ರೀತ ಕೆ.ಎನ್ ಕಳಸ ಈ ನಿಟ್ಟಿನಲ್ಲಿ ಇನ್ನಷ್ಟು ಸಂಶೋಧನೆ ನಡೆಸಿದ್ದು ಈ ಪ್ರದೇಶದ ಇತಿಹಾಸದ ಇನ್ನಷ್ಟು ವಿಚಾರಗಳನ್ನು ಬೆಳಕಿಗೆ ತಂದಿದ್ದಾರೆ.

ಈ ವೀರಗಲ್ಲು 7 ಅಡಿ ಉದ್ದ ಮತ್ತು 4 ಅಡಿ‌ ಅಗಲವನ್ನು ಹೊಂದಿದ್ದು, ಗ್ರಾನೈಟ್ ಶಿಲೆಯಲ್ಲಿ ಕೆತ್ತಲಾಗಿದೆ. ಈ ವೀರಗಲ್ಲನ್ನು ಮೊದಲು ಗುರುತಿಸಿದ್ದ ಪಾಂಡುರಂಗ ಹಿರೇನಲ್ಲೂರು ಇದರಲ್ಲಿ ಐದು ಹಂತಗಳನ್ನು‌ ಗುರುತಿಸಿದ್ದರು. ಆದರೆ ಸುಪ್ರೀತ ಕೆ.ಎನ್ ಅವರು 6 ಹಂತಗಳನ್ನು ಗುರುತಿಸಿದ್ದಾರೆ. 

ಸ್ಮಾರಕ ಶಿಲ್ಪದ ಮೊದಲನೆಯ‌ ಮತ್ತು ಎರಡನೆಯ ಹಂತದಲ್ಲಿ ವೀರರು ಬಿಲ್ಲು‌-ಬಾಣ, ಬಾಕುಗಳನ್ನು ಹಿಡಿದುಕೊಂಡು ಕಾಡು ಪ್ರಾಣಿಗಳಾದ ಜಿಂಕೆ ಮತ್ತು ವ್ಯಾಘ್ರವನ್ನು ಬೇಟೆಯಾಡುವ ದೃಶ್ಯವನ್ನು ಕೆತ್ತಲಾಗಿದೆ‌‌‌‌. ಮೂರನೆಯ ಹಂತದಲ್ಲಿ ಸಮುದ್ರ ಮಂಥನದ ಚಿತ್ರಣವನ್ನು ತೋರಿಸಲಾಗಿದೆ‌. ಈ ದೃಶ್ಯವನ್ನು ಗಮನಿಸಿದಾಗ, ಒಂದು ಅಭಿಪ್ರಾಯದಂತೆ ಶತ್ರು ಪಡೆಯನ್ನು ದಾನವರಂತೆ ಹಾಗೂ ವೀರನ ಸೇನೆಯನ್ನು‌ ದೇವರಂತೆ ತೋರಿಸಿರಬಹುದು‌. ಇನ್ನೊಂದು ಅಭಿಪ್ರಾಯದ ಪ್ರಕಾರ ದಾನವರಿಗೂ ದೇವರಿಗೂ ಅಮೃತಕ್ಕೋಸ್ಕರ ಯುದ್ಧವಾದಗೇ ಶತ್ರು ಪಡೆಗೂ ವೀರರಿಗೂ ಭೂಮಿಯ ವಿಚಾರದಲ್ಲಿ ಯುದ್ಧವಾಗಿರಬಹುದು ಎಂದು ಡಾ‌. ಸುಪ್ರೀತ ಕೆ.ಎನ್‌ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಮುದ್ರ ಮಂಥನದ ಚಿತ್ರಣವನ್ನು‌ ಈ ರೀತಿಯಾಗಿ ಸ್ಮಾರಕ ಶಿಲ್ಪದಲ್ಲಿ ತೋರಿಸಿರುವುದು ವಿಶೇಷವೆನಿಸಿದೆ.

ನಾಲ್ಕನೆಯ ‌ಹಂತದಲ್ಲಿ ಅಶ್ವದಳದ ಮೂಲಕ ವೀರನನ್ನು ಪಲ್ಲಕಿಯಲ್ಲಿ ಯುದ್ಧ ಭೂಮಿಗೆ ಹೊತ್ತುಕೊಂಡು ಹೋಗುವ ಚಿತ್ರಣವಿದೆ. ಐದನೇ ಹಂತದಲ್ಲಿ ಮಡಿದ‌ ವೀರರ ಬಲ ಭಾಗದಲ್ಲಿ ಕಿನ್ನರಿ (ಅಪ್ಸರೆ) ಸ್ತ್ರೀಯರನ್ನು ಮತ್ತು ಎಡ ಭಾಗದಲ್ಲಿ ಧ್ಯಾನಸ್ತರಾಗಿರುವ ಯತಿಯರನ್ನು ತೋರಿಸಲಾಗಿದೆ.ಕೊನೆಯ ಹಂತದಲ್ಲಿ ಸೂರ್ಯ-ಚಂದ್ರ, ಶಿವಲಿಂಗವನ್ನು ಪೂಜಿಸುತ್ತಿರುವ ಯತಿ, ವೀರ ನಂದಿ ಶಿಲ್ಪ ಮತ್ತು ಹಸು-ಕರುವಿನ ಚಿತ್ರಣವಿದೆ‌ ಎಂದು ಡಾ‌.ಸುಪ್ರೀತ ಕೆ.ಎನ್ ಕಳಸ ತಮ್ಮ ಸಂಶೋಧನೆ ಯಿಂದ ಬೆಳಕಿಗೆ ತಂದಿದ್ದಾರೆ.

Join our WhatsApp group for latest news updates