ಸುಶಾಂತ್ ಪ್ರಕರಣ ಸಿಬಿಐಗೆ, ರಿಯಾಗೆ ಇಡಿ ನೋಟಿಸ್ ; ಮುಂಬೈ ಪೊಲೀಸರಿಗೆ ಬಿತ್ತು ದೊಣ್ಣೆಯೇಟು !!

06-08-20 03:54 am       Headline Karnataka News Network   ಕ್ರೈಂ

ಬಾಲಿವುಡ್ ಅಂಗಳದಲ್ಲಿ ಬಿರುಗಾಳಿ ಎಬ್ಬಿಸಿರುವ ನಟ ಸುಶಾಂತ್ ರಜಪೂತ್ ಸಾವಿನ ಪ್ರಕರಣದ ತನಿಖೆಯನ್ನು ಕೇಂದ್ರ ಸರಕಾರ ಸಿಬಿಐಗೆ ವಹಿಸಿದೆ. 

ಮುಂಬೈ, ಆಗಸ್ಟ್ 6: ಬಾಲಿವುಡ್ ಅಂಗಳದಲ್ಲಿ ಬಿರುಗಾಳಿ ಎಬ್ಬಿಸಿರುವ ನಟ ಸುಶಾಂತ್ ರಜಪೂತ್ ಸಾವಿನ ಪ್ರಕರಣದ ತನಿಖೆಯನ್ನು ಕೇಂದ್ರ ಸರಕಾರ ಸಿಬಿಐಗೆ ವಹಿಸಿದೆ. 

ಸಿಬಿಐಗೆ ಒಪ್ಪಿಸುವಂತೆ ಬಿಹಾರ ರಾಜ್ಯ ಸರಕಾರ ಕೇಂದ್ರಕ್ಕೆ ಮನವಿ ಮಾಡಿತ್ತು. ಇದೇ ವೇಳೆ, ಸುಶಾಂತ್ ಪ್ರಕರಣದಲ್ಲಿ ಮುಂಬೈ ಪೊಲೀಸರ ತನಿಖೆಯ ಬಗ್ಗೆ ಅಸಮಾಧಾನಗೊಂಡಿದ್ದ ಸುಶಾಂತ್ ಕುಟುಂಬಸ್ಥರು ಸುಪ್ರೀಂ ಕೋರ್ಟಿಗೂ ಅರ್ಜಿ ಸಲ್ಲಿಸಿದ್ದರು. ಈ ಕುರಿತ ವಿಚಾರಣೆ ಸಂದರ್ಭದಲ್ಲಿ ಕೇಂದ್ರ ಸರಕಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವುದಾಗಿ ಹೇಳಿಕೆ ನೀಡಿದೆ. 

ಈಗಾಗ್ಲೇ ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು ಸುಶಾಂತ್ ಸಂಬಂಧಿಸಿ 56 ಮಂದಿಯ ಹೇಳಿಕೆ ದಾಖಲಿಸಿದ್ದಾರೆ. ಅಲ್ಲದೆ, ಅತ್ತ ಬಿಹಾರ ಪೊಲೀಸರು ಕೂಡ ಮುಂಬೈಗೆ ಬಂದು ತನಿಖೆ ನಡೆಸುತ್ತಿದ್ದಾರೆ. ಆದರೆ ಬಿಹಾರ ಪೊಲೀಸರಿಗೆ ಮಹಾರಾಷ್ಟ್ರ ಸರಕಾರ ಮತ್ತು ಅಲ್ಲಿನ ಪೊಲೀಸರು ಸಹಕಾರ ನೀಡದೆ ಸತಾಯಿಸುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದಿದ್ದವು. ಇದೇ ವೇಳೆ, ಪ್ರಕರಣದಲ್ಲಿ ಸುಶಾಂತ್ ಖಾತೆಯಲ್ಲಿದ್ದ 15 ಕೋಟಿ ಹಣ ವರ್ಗಾವಣೆ ಆಗಿರುವ ವಿಚಾರದಲ್ಲಿ ಆತನ ಪ್ರೇಯಸಿ ರಿಯಾ ಚಕ್ರವರ್ತಿ ವಿರುದ್ಧ ದಾಖಲಾಗಿರುವ ಕೇಸಿಗೆ ಸಂಬಂಧಿಸಿ ಇಡಿ ವಿಚಾರಣೆ ಆರಂಭಿಸಿದ್ದು ರಿಯಾಗೆ ಸಮನ್ಸ್ ನೀಡಿದೆ. ಆಗಸ್ಟ್ 7 ರಂದು ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದೆ. ಬಿಹಾರ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿರುವ ರಿಯಾ ಈಗ ಇಡಿ ಅಧಿಕಾರಿಗಳ ಬಲೆಗೆ ಸಿಲುಕಲಿದ್ದಾರೆ.