Mangalore Train Robbery: ಮುಂಬೈ ರೈಲಿನಲ್ಲಿ ಮಂಗಳೂರು ಮಹಿಳೆಯ ನಗದು ಬ್ಯಾಗ್ ಸುಲಿಗೆ ; ಎಸಿ ಬೋಗಿಯ ಒಳಹೊಕ್ಕ ಕಳ್ಳರ ಕೃತ್ಯ

07-08-23 08:11 pm       Mangalore Correspondent   ಕ್ರೈಂ

ಮಂಗಳೂರಿನಿಂದ ಮುಂಬೈ ಹೊರಟಿದ್ದ ಮಂಗಳೂರು ಮೂಲದ ಇಬ್ಬರು ಮಹಿಳೆಯರನ್ನು ರೈಲಿನಲ್ಲಿ ಸುಲಿಗೆ ಮಾಡಿರುವ ಘಟನೆ ಗೋವಾ- ರತ್ನಗಿರಿ ನಡುವೆ ನಡೆದಿದೆ.

ಮಂಗಳೂರು, ಆಗಸ್ಟ್ 7: ಮಂಗಳೂರಿನಿಂದ ಮುಂಬೈ ಹೊರಟಿದ್ದ ಮಂಗಳೂರು ಮೂಲದ ಇಬ್ಬರು ಮಹಿಳೆಯರನ್ನು ರೈಲಿನಲ್ಲಿ ಸುಲಿಗೆ ಮಾಡಿರುವ ಘಟನೆ ಗೋವಾ- ರತ್ನಗಿರಿ ನಡುವೆ ನಡೆದಿದೆ. ಆಗಸ್ಟ್ 4ರಂದು ಮಂಗಳೂರು- ಗೋವಾ ಮೂಲಕ ಕೇರಳದ ಕೊಚುವೆಲಿಯಿಂದ ಋಷಿಕೇಶ ತೆರಳುತ್ತಿದ್ದ ರೈಲಿನ ಎಸಿ ಕೋಚ್ ಕಂಪಾರ್ಟ್ಮೆಂಟಿನಲ್ಲಿ ಸುಲಿಗೆ ಮಾಡಲಾಗಿದೆ.

ಮಂಗಳೂರಿನ ಶಕ್ತಿನಗರ ನಿವಾಸಿಯಾಗಿರುವ ಎಲಿಜಬೆತ್ ಮತ್ತು ಅವರ ತಂಗಿ ಆಗಸ್ಟ್ 4ರಂದು ಸಂಜೆ 5.30 ಗಂಟೆಗೆ ಮಂಗಳೂರಿನ ಕಂಕನಾಡಿ ಜಂಕ್ಷನ್ ರೈಲು ನಿಲ್ದಾಣದಿಂದ ರೈಲು ಹತ್ತಿದ್ದರು. ಎಸಿ ಕೋಚ್ ನಲ್ಲಿದ್ದ ಮಹಿಳೆಯರು ಅಕ್ಕ- ಪಕ್ಕದ ಸೀಟಿನಲ್ಲಿ ರಾತ್ರಿ ಹತ್ತು ಗಂಟೆ ವೇಳೆಗೆ ಮಲಗಿದ್ದರು. ಮಹಿಳೆಯರು ಥಾಣೆ ಬಳಿಯ ವಸಾಯಿ ರೈಲು ನಿಲ್ದಾಣದಲ್ಲಿ ಇಳಿಯಬೇಕಿತ್ತು. ಬೆಳಗ್ಗೆ 6 ಗಂಟೆ ವೇಳೆಗೆ ರೈಲು ರತ್ನಗಿರಿ ತಲುಪಿದ್ದಾಗ ಎಚ್ಚರಗೊಂಡಿದ್ದು ಟಾಯ್ಲೆಟ್ ಹೋಗಬೇಕು ಅನ್ನುವಷ್ಟರಲ್ಲಿ ಬ್ಯಾಗ್ ಕಾಣೆಯಾಗಿತ್ತು. ಹುಡುಕಾಟ ನಡೆಸಿದಾಗ, ಖಾಲಿ ಬ್ಯಾಗ್ ಹೊರಭಾಗದಲ್ಲಿ ಟಾಯ್ಲೆಟ್ ಹತ್ತಿರ ಬಿದ್ದಿರುವುದು ಕಂಡುಬಂದಿತ್ತು.

ಬ್ಯಾಗಿನಲ್ಲಿದ್ದ 15 ಸಾವಿರದಷ್ಟಿದ್ದ ಹಣ, ಎಟಿಎಂ ಕಾರ್ಡ್, ಆಧಾರ್, ಪಾನ್ ಕಾರ್ಡ್ ಹೀಗೆ ಎಲ್ಲ ದಾಖಲೆ ಪತ್ರಗಳನ್ನೂ ಯಾರೋ ಸುಲಿಗೆ ಮಾಡಿದ್ದರು. ಹುಡುಕಾಟ ನಡೆಸುತ್ತಿದ್ದಾಗ ಅಲ್ಲಿಗೆ ಬಂದಿದ್ದ ರೈಲಿನ ಟಿಟಿಇ, ಕಳವು ಕೃತ್ಯದ ಬಗ್ಗೆ ಮಾಹಿತಿ ಪಡೆದು ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೆಳಗ್ಗೆ ಎದ್ದಾಗ ವೀಕ್ ನೆಸ್ ಥರಾ ಇತ್ತು. ಕಣ್ಣು ಮಂಜಾಗಿತ್ತು. ಹೀಗಾಗಿ ನಡುರಾತ್ರಿಯಲ್ಲಿ ಕಳ್ಳರು ಒಳಹೊಕ್ಕು ಮುಖಕ್ಕೆ ಸ್ಪ್ರೇ ಮಾಡಿ ನಮಗೆ ಗಾಢ ನಿದ್ದೆ ಬರುವಂತೆ ಮಾಡಿರಬೇಕು ಎಂದು ಎಲಿಜಬೆತ್ ಹೆಡ್ ಲೈನ್ ಕರ್ನಾಟಕಕ್ಕೆ ಮಾಹಿತಿ ನೀಡಿದ್ದಾರೆ.

ಅಲ್ಲದೆ, ರೈಲಿನಲ್ಲಿ ಏಸಿ ಕಂಪಾರ್ಟ್ಮೆಂಟ್ ಅದರ ಬಾಗಿಲು ತೆರೆದುಕೊಂಡಿತ್ತು. ಅದರಿಂದಲೇ ಕಳ್ಳರು ನುಗ್ಗಿರುವ ಸಾಧ್ಯತೆಯಿದೆ ಎಂದಿದ್ದಾರೆ. ಸಾಮಾನ್ಯವಾಗಿ ಎಸಿ ಬೋಗಿಯಲ್ಲಿ ಫುಲ್ ಆಗಿದ್ದರೆ, ಹೊರಗಿನಿಂದ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಎಲಿಜಬೆತ್ ಮುಂಬೈ ನಿವಾಸಿಗಳಾಗಿದ್ದು, ಮೂರು ವರ್ಷಗಳ ಹಿಂದೆ ಮಂಗಳೂರಿನಲ್ಲಿ ನೆಲೆಸಿದ್ದರು. ಇವರ ಮಗ ಮುಂಬೈನಲ್ಲಿದ್ದು, ತಂಗಿಯ ಜೊತೆಗೆ ಅಲ್ಲಿಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ.

Robbery in Mangalore Mumbai AC train coach train, women loses cash, atm cards and documents.