ATM Robbery Mangalore, Arrest: ಸುರತ್ಕಲ್ ನಲ್ಲಿ ಜೆಸಿಬಿ ಬಳಸಿ ಎಟಿಎಂ ದೋಚುವ ಯತ್ನ ; ಶಿಕಾರಿಪುರ ಮೂಲದ ನಾಲ್ವರ ಸೆರೆ 

21-08-23 02:06 pm       Mangalore Correspondent   ಕ್ರೈಂ

ಸುರತ್ಕಲ್ ಬಳಿಯ ಇಡ್ಯಾ ಎಂಬಲ್ಲಿ ಜೆಸಿಬಿ ಮೂಲಕ ಎಟಿಎಂ ಒಡೆದು ಹಣ ದೋಚುವ ಯತ್ನ ನಡೆದಿತ್ತು. ಪ್ರಕರಣದ ಬೆನ್ನತ್ತಿದ ಸುರತ್ಕಲ್ ಪೊಲೀಸರು ಶಿವಮೊಗ್ಗ ಮೂಲದ ನಾಲ್ವರನ್ನು ಬಂಧಿಸಿದ್ದಾರೆ. 

ಮಂಗಳೂರು, ಆಗಸ್ಟ್ 21: ಸುರತ್ಕಲ್ ಬಳಿಯ ಇಡ್ಯಾ ಎಂಬಲ್ಲಿ ಜೆಸಿಬಿ ಮೂಲಕ ಎಟಿಎಂ ಒಡೆದು ಹಣ ದೋಚುವ ಯತ್ನ ನಡೆದಿತ್ತು. ಪ್ರಕರಣದ ಬೆನ್ನತ್ತಿದ ಸುರತ್ಕಲ್ ಪೊಲೀಸರು ಶಿವಮೊಗ್ಗ ಮೂಲದ ನಾಲ್ವರನ್ನು ಬಂಧಿಸಿದ್ದಾರೆ. 

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಬೇಗೂರು ಗ್ರಾಮದ ದೇವರಾಜ್ (24), ಭರತ್ (20), ನಾಗರಾಜ ನಾಯ್ಕ (21), ಕೃತ್ಯಕ್ಕೆ ಧನಸಹಾಯ ಮಾಡಿದ್ದ ಧನರಾಜ್ ನಾಯ್ಕ (26) ಬಂಧಿತರು. ಇವರಿಂದ ಹೀರೊ ಹೊಂಡಾ ಸ್ಪ್ಲೆಂಡರ್ ಬೈಕ್ ಮತ್ತು ಎರಡು ಮೊಬೈಲ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಆರೋಪಿಗಳು ಈ ಹಿಂದೆ 2023ರ ಜುಲೈ 26ರಂದು ಮಧ್ಯರಾತ್ರಿ ಶಿವಮೊಗ್ಗ ಜಿಲ್ಲೆಯ ವಿನೋಬ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶಿವ ದೇವಸ್ಥಾನದ ಬಳಿಯಿರುವ ಏಕ್ಸಿಸ್ ಬ್ಯಾಂಕ್ ಎಟಿಎಂ ಕೇಂದ್ರವನ್ನು ಜೆಸಿಬಿ ಮೂಲಕ ಒಡೆಯುವ ಪ್ರಯತ್ನ ಮಾಡಿದ್ದರು. ಈ ಕೃತ್ಯವನ್ನು ತಾವೇ ಮಾಡಿದ್ದಾಗಿ ಆರೋಪಿಗಳು ಒಪ್ಪಿದ್ದಾರೆ. ಇದಲ್ಲದೆ, ಆಗಸ್ಟ್ 4ರಂದು ರಾತ್ರಿ ಪಡುಬಿದ್ರೆ ಠಾಣೆ ವ್ಯಾಪ್ತಿಯಲ್ಲಿ ನಿಲ್ಲಿಸಿದ್ದ ಜೆಸಿಬಿ ಯಂತ್ರವನ್ನು ಕಳವುಗೈದಿದ್ದು ಅದೇ ಜೆಸಿಬಿ ಮೂಲಕ ಸುರತ್ಕಲ್ ವರೆಗೆ ಚಲಾಯಿಸಿಕೊಂಡು ಬಂದು ಇಡ್ಯಾ ಗ್ರಾಮದ ವಿದ್ಯಾದಾಯಿನಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಬಳಿಯ ರಾಜಶ್ರೀ ಕಟ್ಟಡದಲ್ಲಿರುವ ಸೌತ್ ಇಂಡಿಯನ್ ಬ್ಯಾಂಕಿನ ಎಟಿಎಂ ಮೆಷಿನನ್ನು ಒಡೆಯುವ ಯತ್ನ ಮಾಡಿದ್ದರು. ಅದೇ ದಿನ ನಸುಕಿನ 2ರಿಂದ 2.30ರ ನಡುವೆ ಘಟನೆ ನಡೆದಿದ್ದು ಎಟಿಎಂ ಕೇಂದ್ರದಲ್ಲಿ ಸೈರನ್ ಆಗಿದ್ದರಿಂದ ಅರ್ಧಕ್ಕೆ ಬಿಟ್ಟು ಹೋಗಿದ್ದರು. 

ಇದೇ ವೇಳೆ, ಸಿಸಿಟಿವಿ ವಿಭಾಗದಿಂದ ಬಂದ ಮಾಹಿತಿಯಂತೆ ಸ್ಥಳಕ್ಕೆ ಬ್ಯಾಂಕ್ ಶಾಖೆಯ ಮ್ಯಾನೇಜರ್ ರೋಹಿತ್ ರಾತ್ರಿಯೇ ಆಗಮಿಸಿದ್ದರು. ಅಷ್ಟರಲ್ಲಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಮರುದಿನ ಬೈಕಂಪಾಡಿ ಬಳಿಯ ಜೋಕಟ್ಟೆಯಲ್ಲಿ ಜೆಸಿಬಿ ಪತ್ತೆಯಾಗಿತ್ತು. ಪಡುಬಿದ್ರಿಯಲ್ಲಿ ಕಳವು ಮಾಡಿದ್ದ ಜೆಸಿಬಿ ಎಂದು ಪತ್ತೆಹಚ್ಚಲಾಗಿತ್ತು. ಆರೋಪಿಗಳ ಪತ್ತೆಗೆ ಸುರತ್ಕಲ್ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು.

Mangalore Surathkal South Indian ATM Robbery, four from Shivamogga arrested by Mangalore Police. The four had attempted robbery of ATM using JCB machine at Surathkal.