Mangalore Railway Police: ಉತ್ತರ ಪ್ರದೇಶದಿಂದ ವಿಮಾನದಲ್ಲಿ ಬಂದು ರೈಲು ಪ್ರಯಾಣಿಕರ ಸುಲಿಗೆ ; ಮಂಗಳೂರಿನಲ್ಲಿ ಇಬ್ಬರು ಆರೋಪಿಗಳ ಅರೆಸ್ಟ್ 

05-10-23 02:27 pm       Mangalore Correspondent   ಕ್ರೈಂ

ಉತ್ತರ ಪ್ರದೇಶದಿಂದ ವಿಮಾನದಲ್ಲಿ ಆಗಮಿಸಿ ಮಂಗಳೂರಿನಲ್ಲಿ ರೈಲು ಪ್ರಯಾಣಿಕರ ಚಿನ್ನಾಭರಣಗಳನ್ನು ಕದಿಯುತ್ತಿದ್ದ ಕಳ್ಳರಿಬ್ಬರನ್ನು ರೈಲ್ವೇ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು, ಅ.5: ಉತ್ತರ ಪ್ರದೇಶದಿಂದ ವಿಮಾನದಲ್ಲಿ ಆಗಮಿಸಿ ಮಂಗಳೂರಿನಲ್ಲಿ ರೈಲು ಪ್ರಯಾಣಿಕರ ಚಿನ್ನಾಭರಣಗಳನ್ನು ಕದಿಯುತ್ತಿದ್ದ ಕಳ್ಳರಿಬ್ಬರನ್ನು ರೈಲ್ವೇ ಪೊಲೀಸರು ಬಂಧಿಸಿದ್ದಾರೆ. 

ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ಅಭಯರಾಜ್ ಸಿಂಗ್ (26) ಹಾಗೂ ರಾಜ್ ಪುರದ ಹರಿಶಂಕರ್ ಗಿರಿ(25) ಬಂಧಿತ ಆರೋಪಿಗಳು. ಸೆಪ್ಟೆಂಬರ್ 28ರಂದು ಮಂಗಳೂರು ಮತ್ತು ಸುರತ್ಕಲ್ ನಡುವೆ ಸಂಚರಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಕರ ಚಿನ್ನಾಭರಣ ಕಳವು ಮಾಡಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು. ರೈಲಿನಲ್ಲಿದ್ದ ಇಬ್ಬರು ಯುವಕರ ಬಗ್ಗೆ ಸಂಶಯಗೊಂಡು ಅವರನ್ನು ಪತ್ತೆಹಚ್ಚಿ ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿತ್ತು. ಆಗ ತಮ್ಮ ಕಳ್ಳತನ ಕೃತ್ಯದ ಬಗ್ಗೆ ತಿಳಿಸಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದ ಆರ್ ಪಿಎಫ್ ತಂಡ ರೈಲ್ವೇ ಪೊಲೀಸರಿಗೆ ಒಪ್ಪಿಸಿದ್ದಾರೆ.

ತನಿಖೆ ವೇಳೆ ಆರೋಪಿಗಳು ಉತ್ತರಪ್ರದೇಶದಿಂದ ಮಂಗಳೂರಿಗೆ ವಿಮಾನದಲ್ಲಿ ಆಗಮಿಸಿ ರಾತ್ರಿ ವೇಳೆ ಸಂಚರಿಸುವ ರೈಲನ್ನು ಟಾರ್ಗೆಟ್ ಮಾಡಿ ಪ್ರಯಾಣ ಮಾಡುತ್ತಿದ್ದರು. ರಾತ್ರಿ ಮಲಗಿರುತ್ತಿದ್ದ ವೃದ್ಧ ಹಾಗೂ ಮಹಿಳಾ ಪ್ರಯಾಣಿಕರ ಚಿನ್ನಾಭರಣಗಳನ್ನು ದೋಚಲು ಪ್ಲ್ಯಾನ್ ಮಾಡುತ್ತಿದ್ದರು. ರಾತ್ರಿ ವೇಳೆ ರೈಲಿನ ವೇಗ ಕಡಿಮೆಯಾಗುತ್ತಿದ್ದಂತೆ ಚಿನ್ನಾಭರಣಗಳನ್ನು ಎಳೆದೊಯ್ದು ಬೋಗಿಯಿಂದ ಹೊರಜಿಗಿದು ಪರಾರಿಯಾಗುತ್ತಿದ್ದರು. 

ಆರೋಪಿಗಳು ಪಾಲಕ್ಕಾಡ್, ತಿರುವನಂತಪುರಂ ಹಾಗೂ ಮಂಗಳೂರು - ಮುಂಬೈ ನಡುವಿನ ಕೊಂಕಣ ರೈಲ್ವೆಯ ರೈಲಿನಲ್ಲಿ ಹೆಚ್ಚು ಕಳವು ಮಾಡುತ್ತಿದ್ದರು.‌ ರೈಲು ಪ್ರಯಾಣಿಕರಿಂದ ಕದ್ದು ಇರಿಸಿಕೊಂಡಿದ್ದ 125 ಗ್ರಾಂ ಚಿನ್ನಾಭರಣಗಳನ್ನು ರೈಲ್ವೆ ಪೊಲೀಸರು ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ.

Robbers come in fight, loot gold from passengera at train in Mangalore, two arrested by railway police.