Sullia Kvg college Murder: ಕೆವಿಜಿ ಶಿಕ್ಷಣ ಸಂಸ್ಥೆಗಳ ಆಸ್ತಿ ವೈಷಮ್ಯ ; ಆಡಳಿತಾಧಿಕಾರಿ ಕೊಲೆ ಪ್ರಕರಣದಲ್ಲಿ ರೇಣುಕಾಪ್ರಸಾದ್ ಸೇರಿ ಐವರಿಗೆ ಜೀವಾವಧಿ, ಕೋರ್ಟಿಗೆ ಹಾಜರಾಗದ ಆಕಾಶಭವನ್ ಶರಣ್

05-10-23 05:11 pm       Mangalore Correspondent   ಕ್ರೈಂ

ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಕೊಲೆ ಪ್ರಕರಣದಲ್ಲಿ ಕೆವಿಜಿ ಪುತ್ರ ರೇಣುಕಾಪ್ರಸಾದ್ ಸೇರಿ ಐದು ಮಂದಿ ಆರೋಪಿಗಳಿಗೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.

ಮಂಗಳೂರು, ಅ.5: ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಕೊಲೆ ಪ್ರಕರಣದಲ್ಲಿ ಕೆವಿಜಿ ಪುತ್ರ ರೇಣುಕಾಪ್ರಸಾದ್ ಸೇರಿ ಐದು ಮಂದಿ ಆರೋಪಿಗಳಿಗೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.

2011ರ ಎಪ್ರಿಲ್ 28ರಂದು ನಡೆದ ಕೆವಿಜಿ ಆಡಳಿತಾಧಿಕಾರಿಯಾಗಿದ್ದ ರಾಮಕೃಷ್ಣ ಕೊಲೆ ಪ್ರಕರಣದಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಿ ಪುತ್ತೂರಿನ ನ್ಯಾಯಾಲಯ ನೀಡಿದ್ದ ತೀರ್ಪನ್ನು ಹೈಕೋರ್ಟ್ ಇತ್ತೀಚೆಗೆ ರದ್ದುಪಡಿಸಿತ್ತು. ಅಲ್ಲದೆ, ರೇಣುಕಾಪ್ರಸಾದ್ ಸೇರಿ ಆರು ಮಂದಿಯನ್ನು ತಪ್ಪಿತಸ್ಥರು ಎಂದು ಘೋಷಣೆ ಮಾಡಿತ್ತು. ಅಲ್ಲದೆ, ಅ.5ರಂದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚನೆ ನೀಡಿತ್ತು.

ಅದರಂತೆ, ಇಂದು ಸುಳ್ಯ ಪೊಲೀಸರು ರೇಣುಕಾಪ್ರಸಾದ್ ಸೇರಿ ಐದು ಮಂದಿಯನ್ನು ಮಂಗಳೂರಿನ ನ್ಯಾಯಾಲಯದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹೈಕೋರ್ಟ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಹರೀಶ್ ಶ್ರೀನಿವಾಸ್ ಮತ್ತು ಬಸವರಾಜ್ ಅವರಿದ್ದ ನ್ಯಾಯಪೀಠವು ಐದು ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ನ್ಯಾಯಾಧೀಶರು ತೀರ್ಪನ್ನು ಓದಿಹೇಳಿದ್ದು, ನ್ಯಾಯಾಲಯಕ್ಕೆ ಹಾಜರಾಗಿದ್ದ ಐದು ಮಂದಿ ವಿರುದ್ಧ ಮಾತ್ರ ಶಿಕ್ಷೆ ಪ್ರಮಾಣ ಘೋಷಿಸಿದ್ದಾರೆ. ರೇಣುಕಾಪ್ರಸಾದ್, ಮನೋಜ್ ರೈ, ಭವಾನಿಶಂಕರ್, ವಾಮನ ಪೂಜಾರಿ ಅವರಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ರೌಡಿಶೀಟರ್ ಆಕಾಶಭವನ್ ಶರಣ್ ಕೋರ್ಟಿಗೆ ಹಾಜರಾಗದೆ ತಪ್ಪಿಸಿಕೊಂಡಿದ್ದಾನೆ. ಆತನ ಅನುಪಸ್ಥಿತಿಯಲ್ಲಿ ನ್ಯಾಯಾಧೀಶರು ಶಿಕ್ಷೆ ಪ್ರಮಾಣ ಘೋಷಣೆ ಮಾಡಿಲ್ಲ. ಇದೇ ವೇಳೆ, ಒಂದನೇ ಆರೋಪಿ ರೇಣುಕಾಪ್ರಸಾದ್ ಸಂತ್ರಸ್ತ ಕೊಲೆಯಾದ ರಾಮಕೃಷ್ಣ ಅವರ ಪತ್ನಿಗೆ ಹತ್ತು ಲಕ್ಷ ರೂ. ಪರಿಹಾರ ನೀಡುವಂತೆ ಕೋರ್ಟ್ ಆದೇಶ ಮಾಡಿದೆ. ಇತರ ಆರೋಪಿಗಳಿಗೆ ತಲಾ ಹತ್ತು ಸಾವಿರ ಬಾಂಡ್ ನೀಡುವಂತೆ ತಿಳಿಸಿದ್ದಾರೆ.

ಇಂದು ಆರೋಪಿಗಳನ್ನು ಹಾಜರುಪಡಿಸುವ ಹಿನ್ನೆಲೆಯಲ್ಲಿ ಸುಳ್ಯದಿಂದ ಬಹಳಷ್ಟು ಮಂದಿ ರೇಣುಕಾಪ್ರಸಾದ್ ಅಭಿಮಾನಿಗಳು ಮಂಗಳೂರಿನ ಕೋರ್ಟಿಗೆ ಆಗಮಿಸಿದ್ದರು. ರೇಣುಕಾಪ್ರಸಾದ್ ಸುಳ್ಯದಲ್ಲಿ ಪ್ರಭಾವಿ ಮುಖಂಡರಾಗಿದ್ದು, ಒಕ್ಕಲಿಗರ ಸಂಘದ ಅಧ್ಯಕ್ಷರೂ ಆಗಿದ್ದಾರೆ. ಅಲ್ಲದೆ, ಒಕ್ಕಲಿಗರ ಸಂಘದ ರಾಜ್ಯ ಒಕ್ಕೂಟದ ಉಪಾಧ್ಯಕ್ಷರೂ ಆಗಿದ್ದಾರೆ. 2011ರ ಎಪ್ರಿಲ್ 28ರಂದು ಬೆಳಗ್ಗೆ ಕೆವಿಜಿ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿಯಾಗಿದ್ದ ರಾಮಕೃಷ್ಣ ಅವರನ್ನು ಕೊಲೆ ಮಾಡಲಾಗಿತ್ತು. ಕೆವಿಜಿ ಶಿಕ್ಷಣ ಸಂಸ್ಥೆಗಳ ಆಸ್ತಿಯನ್ನು ಪಾಲು ಮಾಡಿದ ವಿಚಾರದಲ್ಲಿ ರೇಣುಕಾಪ್ರಸಾದ್ ಸಿಟ್ಟುಗೊಂಡು, ಪಾಲು ಪತ್ರಕ್ಕೆ ರಾಮಕೃಷ್ಣ ಅವರೇ ಕಾರಣವೆಂದು ಸುಪಾರಿ ಕೊಟ್ಟು ಕೊಲ್ಲಿಸಿದ್ದರೆಂದು ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು.

ಈ ಹಿಂದೆ ಪುತ್ತೂರು ನ್ಯಾಯಾಲಯದಲ್ಲಿ ಆರೋಪಿಗಳ ಪರವಾಗಿ ವಕಾಲತ್ತು ನಡೆಸಿದ್ದ ಶಾಂತರಾಮ ಶೆಟ್ಟಿ ಮಂಗಳೂರಿನ ಕೋರ್ಟಿಗೆ ಆಗಮಿಸಿದ್ದರು. ಹೈಕೋರ್ಟ್ ತೀರ್ಪು ಕೇಳಿ ಶಾಕ್ ಆಗಿದೆ. ನ್ಯಾಯಾಧೀಶರು ನೇರವಾಗಿ ಶಿಕ್ಷೆ ನೀಡಿರುವುದು ಆಘಾತ ಮೂಡಿಸಿದೆ ಎಂದಿದ್ದಾರೆ. ಅಲ್ಲದೆ, ರೇಣುಕಾಪ್ರಸಾದ್ ಅವರ ಪರವಾಗಿ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

Sullia KVG Prof Ramakrishna murder case, 6 including Dr Renuka Prasad get life imprisonment by High court.  The high court overturned the verdict of subordinate court of acquitting the six accused in the case. It pronounced them as guilt of the offence. The high court pronounced Dr Renuka Prasad, Manoj Rai, H R Nagesh, Vamana Poojary, Sharan Poojary and Shankara as guilty in the murder and plan to murder deceased A S Ramakrishna.  Ramakrishna was hacked to death at around 7.45 am on April 28, 2011 as he was walking on Srikrishna Ayurvedic Therapy Clinic road. A case was filed in Sullia police station in this regard.