ಸುರತ್ಕಲ್ ಬ್ಯಾಂಕ್ ಮ್ಯಾನೇಜರ್ ಜೊತೆ ಸೇರಿ ವಂಚನೆ ; ಕೋಕ್ ಸರಬರಾಜು ಹೆಸರಲ್ಲಿ 65 ಲಕ್ಷ ರೂ. ಹೂಡಿಕೆ ಮಾಡಿಸಿ ಮೋಸ

11-06-24 10:51 am       Mangalore Correspondent   ಕ್ರೈಂ

ಬ್ಯಾಂಕ್ ಮ್ಯಾನೇಜರೊಬ್ಬರು ಖಾಸಗಿ ವ್ಯಕ್ತಿಯ ಜೊತೆ ಸೇರಿ 65 ಲಕ್ಷ ರೂ. ಹೂಡಿಕೆ ಮಾಡಿಸಿ ವ್ಯಕ್ತಿಯೊಬ್ಬರಿಗೆ ಮೋಸ ಮಾಡಿದ  ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಂಗಳೂರು, ಜೂನ್ 11: ಬ್ಯಾಂಕ್ ಮ್ಯಾನೇಜರೊಬ್ಬರು ಖಾಸಗಿ ವ್ಯಕ್ತಿಯ ಜೊತೆ ಸೇರಿ 65 ಲಕ್ಷ ರೂ. ಹೂಡಿಕೆ ಮಾಡಿಸಿ ವ್ಯಕ್ತಿಯೊಬ್ಬರಿಗೆ ಮೋಸ ಮಾಡಿದ  ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೈಕಂಪಾಡಿ ಕುಕ್ಕಾಡಿ ಕಾಂಪ್ಲೆಕ್ಸ್ ನಲ್ಲಿ ಮಳಿಗೆ ಹೊಂದಿದ್ದ ಶರೀಫ್ ಮತ್ತು ಸುರತ್ಕಲ್ ಖಾಸಗಿ ಬ್ಯಾಂಕ್ ಶಾಖೆಯ ಮ್ಯಾನೇಜರ್ ರಾಘವೇಂದ್ರ ಶೇಟ್ ಪ್ರಕರಣದ ಆರೋಪಿಗಳು. ಪ್ರದೀಪ್ ಕುಮಾರ್ ಎಂಬವರು ತನ್ನ ಪತ್ನಿಯ ಜೊತೆಗೆ ಸುರತ್ಕಲ್ ಖಾಸಗಿ ಬ್ಯಾಂಕಿನಲ್ಲಿ ಖಾತೆ ತೆರೆದಿದ್ದರು. ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿದ್ದ ರಾಘವೇಂದ್ರ ಶೇಟ್ ಪರಿಚಿತನಾಗಿದ್ದು, ಇಲ್ಲಿ ಹಣವನ್ನು ಠೇವಣಿ ಇಡುವುದಕ್ಕಿಂತ ವ್ಯವಹಾರದಲ್ಲಿ ಹೂಡಿಕೆ ಮಾಡುವುದು ಬೆಟರ್ ಎಂದು ಸಲಹೆ ನೀಡಿದ್ದಾರೆ. ಅಲ್ಲದೆ, ತನ್ನ ಪರಿಚಯದ ಶರೀಫ್ ಅವರ ಕೋಕ್ ಸರಬರಾಜು ವ್ಯವಹಾರದಲ್ಲಿ ಪಾಲುದಾರನಾಗುವಂತೆ ತಿಳಿಸಿದ್ದಾರೆ. ಶರೀಫ್ ಬ್ಯಾಂಕ್ ಲೋನ್ ಪಡೆಯಲು ಮುಂದಾಗಿದ್ದು, ಅದಕ್ಕೆ ವಿಳಂಬ ಆಗಬಹುದು. ನೀವು ಹೂಡಿಕೆ ಮಾಡಿದರೆ ಲಾಭ ಬರಬಹುದು ಎಂದು ಹೇಳಿದ್ದರು.

ಅದರಂತೆ, ಪ್ರದೀಪ್ ಕುಮಾರ್ ಅವರು ಶರೀಫ್ ಜೊತೆಗೆ ಪಾಲುದಾರನಾಗಲು ಸಮ್ಮತಿಸಿದ್ದು, ವ್ಯವಹಾರದಲ್ಲಿ 50 ಲಕ್ಷ ರೂ. ಹೂಡಿಕೆ ಮಾಡಿದ್ದರು. ಹಣದ ಭದ್ರತೆಗಾಗಿ ಅಬ್ದುಲ್ ಬಶೀರ್ ಎಂಬವರ ಜಾಗವನ್ನು ಸಾಲದ ವ್ಯವಹಾರಕ್ಕಾಗಿ ಕರಾರು ಮಾಡಿಕೊಂಡಿದ್ದರು. ಆನಂತರ, ಅಕ್ಟೋಬರ್ 17ರಂದು ಮತ್ತೆ 15 ಲಕ್ಷ ರೂ. ಹಣವನ್ನು ಬೇರೊಂದು ಬ್ಯಾಂಕ್ ಖಾತೆಯಿಂದ ಪ್ರದೀಪ್ ಕುಮಾರ್, ಶರೀಫ್ ಖಾತೆಗೆ ವರ್ಗಾಯಿಸಿದ್ದರು. ಇದಕ್ಕಾಗಿ ಖಾಲಿ ಚೆಕ್ ಪತ್ರವನ್ನೂ ಪಡೆದಿದ್ದರು. ಆದರೆ, ಕರಾರು ಪ್ರಕಾರ ಶರೀಫ್ ಹಣವನ್ನು ಹಿಂತಿರುಗಿಸದೆ ವಂಚಿಸಿದ್ದಾನೆ.

ಚೆಕ್ಕನ್ನು ಬ್ಯಾಂಕಿಗೆ ಹಾಕಿದಾಗ, ಅದು ಬೌನ್ಸ್ ಆಗಿದ್ದು, 65 ಲಕ್ಷ ಹೂಡಿಕೆ ಮಾಡಿದ್ದ ಪ್ರದೀಪ್ ಕುಮಾರ್ ಮೋಸ ಹೋಗಿದ್ದಾರೆ. ಇದಲ್ಲದೆ, ಹಣ ಹೂಡಿಕೆ ಮಾಡಿಸಿದ್ದಕ್ಕಾಗಿ ಬ್ಯಾಂಕ್ ಮ್ಯಾನೇಜರ್, ಶರೀಫ್ ಬಳಿಯಿಂದ ಕಮಿಷನ್ ಹಣವನ್ನೂ ಪಡೆದಿರುವುದು ತಿಳಿಯುತ್ತಲೇ ಪ್ರದೀಪ್ ಕುಮಾರ್ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.

Fraud by bank manager of  65 lakhs in the name of investment  in supplies in Mangalore. A case has been registered against Raghavendra at cen police station.