Cyber crime, Mangalore News, School: ಶಾಲಾ ಮಕ್ಕಳ ಪೋಷಕರಿಗೆ ಬೆದರಿಕೆ ಕರೆ ; ಮಂಗಳೂರಿನಲ್ಲಿ ಸೈಬರ್ ಕಳ್ಳರ ಹೊಸ ತಂತ್ರ, ಮಕ್ಕಳು ಅರೆಸ್ಟ್ ನೆಪದಲ್ಲಿ ಹಣ ಕೀಳಲು ಯತ್ನ, ವಾಟ್ಸಪ್ ಕರೆಗೆ ಗಾಬರಿ ಬಿದ್ದ ಪೋಷಕರು, ಪೋಲಂಡ್, ಪಾಕಿಸ್ತಾನದಿಂದ ಕರೆ !

12-06-24 04:50 pm       Mangalore Correspondent   ಕ್ರೈಂ

ಮುಂಬೈ ಪೊಲೀಸರ ಸೋಗಿನಲ್ಲಿ ಕರೆ ಮಾಡಿ, ಹಣ ಕೀಳುವುದನ್ನು ಕೇಳಿದ್ದೇವೆ. ಈಗ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿರುವ ಸೈಬರ್ ಕಳ್ಳರು ಮಂಗಳೂರಿನಲ್ಲಿ ಶಾಲಾ ಮಕ್ಕಳ ಪೋಷಕರಿಗೆ ಕರೆ ಮಾಡಿ, ಬೆದರಿಕೆ ಒಡ್ಡಿ ಹಣ ಕೀಳಲು ಯತ್ನಿಸುತ್ತಿರುವುದು ಬೆಳಕಿಗೆ ಬಂದಿದೆ.

ಮಂಗಳೂರು, ಜೂನ್.12: ಮುಂಬೈ ಪೊಲೀಸರ ಸೋಗಿನಲ್ಲಿ ಕರೆ ಮಾಡಿ, ಹಣ ಕೀಳುವುದನ್ನು ಕೇಳಿದ್ದೇವೆ. ಈಗ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿರುವ ಸೈಬರ್ ಕಳ್ಳರು ಮಂಗಳೂರಿನಲ್ಲಿ ಶಾಲಾ ಮಕ್ಕಳ ಪೋಷಕರಿಗೆ ಕರೆ ಮಾಡಿ, ಬೆದರಿಕೆ ಒಡ್ಡಿ ಹಣ ಕೀಳಲು ಯತ್ನಿಸುತ್ತಿರುವುದು ಬೆಳಕಿಗೆ ಬಂದಿದೆ. ಜೂನ್ 11 ಮತ್ತು 12ರಂದು ಮಂಗಳೂರಿನಲ್ಲಿ ಹಲವಾರು ಪೋಷಕರಿಗೆ ಪೊಲೀಸರ ಸೋಗಿನಲ್ಲಿ ಕರೆ ಬಂದಿದ್ದು, ಮೋಸಕ್ಕೆ ಯತ್ನಿಸಿದ್ದಾರೆ.

ವಿದೇಶಿ ನಂಬರ್ ಗಳಿಂದ ವಾಟ್ಸಪ್ ಕರೆ ಬರುತ್ತಿದ್ದು, ಹಿಂದಿಯಲ್ಲಿ ಮಾತನಾಡಿ ತಾವು ಪೊಲೀಸರೆಂದು ಪರಿಚಯ ಹೇಳುತ್ತಿದ್ದು, ನಿಮ್ಮ ಮಕ್ಕಳು ಅರೆಸ್ಟ್ ಆಗಿದ್ದಾರೆ, ಬಿಡುಗಡೆ ಮಾಡಲು ಇಂತಿಷ್ಟು ಹಣ ಕೊಡಬೇಕೆಂದು ಕೇಳತೊಡಗಿದ್ದಾರೆ. ಶಾಲೆಗೆ ಹೋದ ಮಕ್ಕಳು ಅರೆಸ್ಟ್ ಆಗಿದ್ದಾರೆ ಎಂದು ತಿಳಿಯುತ್ತಲೇ ಕೆಲವು ಪೋಷಕರು ಗಾಬರಿ ಬಿದ್ದಿದ್ದಾರೆ. ಕೂಡಲೇ ಶಾಲೆಗೆ ಕರೆ ಮಾಡಿದಾಗ, ತಮ್ಮ ಮಕ್ಕಳು ಸೇಫ್ ಆಗಿರುವುದು ತಿಳಿದುಬಂದಿದೆ. ಶಾಲೆಯ ಅವಧಿಯಲ್ಲೇ ಈ ರೀತಿಯ ಕರೆಗಳು ಬರುತ್ತಿದ್ದು, ಇದರಿಂದ ಬಹಳಷ್ಟು ಪೋಷಕರು ಭಯಕ್ಕೆ ಬಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಂಗಳೂರು ಪೊಲೀಸರು ನಗರದ ಸೈಬರ್ ಕ್ರೈಮ್ ಠಾಣೆಯಲ್ಲಿ ಕೇಸು ದಾಖಲು ಮಾಡಿದ್ದು, ತನಿಖೆ ಆರಂಭಿಸಿದ್ದಾರೆ. ಕರೆ ಬಂದಿದ್ದ ಸಂಖ್ಯೆಗಳನ್ನು ಪರಿಶೀಲನೆ ನಡೆಸಿದಾಗ, ಅವು ಪೋಲಂಡ್ ಮತ್ತು ಪಾಕಿಸ್ತಾನದಿಂದ ಬಂದಿದ್ದಾಗಿ ಪತ್ತೆ ಮಾಡಿದ್ದಾರೆ. ಜೂನ್ 10ರಂದು ಮಧ್ಯಾಹ್ನ ಶಿವಭಾಗ್ ಬಳಿಯ ಪೋಷಕರೊಬ್ಬರಿಗೆ ಕರೆ ಬಂದಿದ್ದು, ಅವರು ಗಾಬರಿಗೆ ಒಳಗಾಗಿದ್ದರು. ತಮ್ಮ ಕಾರಿನಲ್ಲಿ ಪೆಟ್ರೋಲ್ ಇಲ್ಲ, ಕೂಡಲೇ ಪೆಟ್ರೋಲ್ ಹಾಕುವಂತೆ ಶಿವಭಾಗ್ ಪೆಟ್ರೋಲ್ ಪಂಪ್ ಗೆ ಬಂದಿದ್ದರು. ಬಂಕ್ ಮ್ಯಾನೇಜರ್ ಮಹೇಶ್ ಅವರಲ್ಲಿ ಕರೆ ಬಂದಿರುವುದನ್ನು ಹೇಳಿ, ತನ್ನ ಮಗಳನ್ನು ಯಾರೋ ಅಪಹರಿಸಿದ್ದಾರಂತೆ, ಪೊಲೀಸರಿಂದ ಕರೆ ಬಂದಿದೆ ಎಂದು ಅಳುತ್ತಾ ಶಾಲೆಯತ್ತ ತೆರಳಿದ್ದರು. ಶಾಲೆಗೆ ತೆರಳಿ ನೋಡಿದರೆ, ಮಗಳು ಕ್ಲಾಸಿನಲ್ಲೇ ಇದ್ದಳು.

ಭಯ ಬೀಳದಿರಿ- ಕಮಿಷನರ್ 

ಈ ರೀತಿಯ ಕರೆಗಳು ಎರಡು ದಿನಗಳಲ್ಲಿ ಹಲವಾರು ಪೋಷಕರಿಗೆ ಬಂದಿದ್ದು, ಪೊಲೀಸರಿಗೂ ಮಾಹಿತಿ ಹೋಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಇಂತಹ ಕರೆಗಳ ಬಗ್ಗೆ ಪೋಷಕರು ಭಯಕ್ಕೆ ಒಳಗಾಗಬೇಡಿ. ಅಪರಿಚಿತರು ವಾಟ್ಸಪ್ ಕರೆ ಮಾಡಿದರೆ, ಅದನ್ನು ಸ್ವೀಕರಿಸಬೇಡಿ. ಅಂತಹ ಕರೆಗಳು ಬಂದಲ್ಲಿ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ. ಶಾಲೆಯಲ್ಲಿ ಶಿಕ್ಷಕರು, ಸಿಬಂದಿಯೂ ಈ ಬಗ್ಗೆ ಮಕ್ಕಳ ಪೋಷಕರಿಗೆ ಜಾಗೃತಿ ಮೂಡಿಸುವಂತೆ ಕೇಳಿಕೊಂಡಿದ್ದಾರೆ.

Mangalore school Parents targeted by fake calls by online fraudters, threaten of kidnap. On Tuesday afternoon, several parents received alarming calls claiming their children were being arrested for crimes such as gang rape or kidnapping. The callers, speaking in Hindi, demanded Rs 5 lac to release the students or to clear their names.