Mangalore Ulaibettu dacoity, crime: ಉಳಾಯಿಬೆಟ್ಟು ದರೋಡೆ ; ಐದಾರು ಕೋಟಿ ನಗದು ಹೊತ್ತೊಯ್ಯಲು ಗೋಣಿಚೀಲ ತಂದಿದ್ದ ತಂಡ, ಸೌತಡ್ಕ ಮನೆ ದರೋಡೆ ಮಾದರಿ ಕೃತ್ಯ, ಸ್ಥಳೀಯ ಕೈವಾಡದ ಶಂಕೆ 

24-06-24 04:51 pm       Mangalore Correspondent   ಕ್ರೈಂ

ಉಳಾಯಿಬೆಟ್ಟು ಪೆರ್ಮಂಕಿಯಲ್ಲಿ ಕಲ್ಲು ಕೋರೆ ಉದ್ಯಮಿ ಪದ್ಮನಾಭ ಕೋಟ್ಯಾನ್‌ ಮನೆಗೆ ನುಗ್ಗಿದ್ದ ದರೋಡೆಕೋರರು ಕೋಟ್ಯಂತರ ಮೌಲ್ಯದ ನಗದು ಮತ್ತು ಚಿನ್ನಾಭರಣ ದೋಚುವ ಯೋಜನೆ ರೂಪಿಸಿದ್ದರು ಎನ್ನುವ ಅನುಮಾನ ಮೂಡಿದೆ.

ಮಂಗಳೂರು, ಜೂನ್.24: ಉಳಾಯಿಬೆಟ್ಟು ಪೆರ್ಮಂಕಿಯಲ್ಲಿ ಕಲ್ಲು ಕೋರೆ ಉದ್ಯಮಿ ಪದ್ಮನಾಭ ಕೋಟ್ಯಾನ್‌ ಮನೆಗೆ ನುಗ್ಗಿದ್ದ ದರೋಡೆಕೋರರು ಕೋಟ್ಯಂತರ ಮೌಲ್ಯದ ನಗದು ಮತ್ತು ಚಿನ್ನಾಭರಣ ದೋಚುವ ಯೋಜನೆ ರೂಪಿಸಿದ್ದರು ಎನ್ನುವ ಅನುಮಾನ ಮೂಡಿದೆ. ಮನೆಯಲ್ಲಿ ಐದಾರು ಕೋಟಿ ರೂಪಾಯಿ ಹಣ ನಗದು ರೂಪದಲ್ಲೇ ಇರಬಹುದು ಎಂಬ ಲೆಕ್ಕ ಹಾಕಿದ್ದ ದರೋಡೆಕೋರರು ಅದನ್ನು ಹೊತ್ತೂಯ್ಯಲು ಗೋಣಿ ಚೀಲ ತಂದಿದ್ದರು ಎಂಬ ಅಂಶ ತಿಳಿದುಬಂದಿದೆ. 

ಆದರೆ ದರೋಡೆಕೋರರು ನಿರೀಕ್ಷಿದಷ್ಟು ನಗದು ಹಣ ಸಿಗಲಿಲ್ಲ ಎನ್ನಲಾಗುತ್ತಿದೆ. ಕೃತ್ಯದ ಸಂದರ್ಭದಲ್ಲಿ ಮನೆಯವರನ್ನು ಪದೇ ಪದೆ ಹಣ ಎಲ್ಲಿದೆ ಎಂದು ಪ್ರಶ್ನಿಸಿದ್ದು ಯಜಮಾನ ಪದ್ಮನಾಭ ಕೋಟ್ಯಾನ್ ಮೇಲೆ ಅದೇ ಕಾರಣಕ್ಕೆ ಅರ್ಧ ಗಂಟೆ ಕಾಲ ಹಲ್ಲೆ ಮಾಡಿದ್ದಾರೆ. ಅಲ್ಲದೆ, ಮನೆಯನ್ನು ಪೂರ್ತಿಯಾಗಿ ಜಾಲಾಡಿದ್ದಾರೆ. ಹಾಸಿಗೆ, ಕಪಾಟಿನ ಅಡಿ ಭಾಗದಲ್ಲಿಯೂ ಹುಡುಕಿದ್ದಾರೆ. ಭಾರೀ ಹಣವನ್ನು ಮನೆಯಲ್ಲಿ ಸಂಗ್ರಹಿಸಿಟ್ಟಿದ್ದಾರೆ ಎಂಬ ಮಾಹಿತಿ ಇದ್ದೇ ಕಳ್ಳರು ದರೋಡೆಗೆ ಸ್ಕೆಚ್ ಹಾಕಿದಂತಿದೆ. ಇದರಿಂದಾಗಿ ಕೃತ್ಯದಲ್ಲಿ ಸ್ಥಳೀಯ ಸಂಪರ್ಕ ಇರುವ ವ್ಯಕ್ತಿಗಳು ಶಾಮೀಲಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 

ಮನೆಯಲ್ಲಿರುವ ಸಿಸಿಟಿವಿಯಲ್ಲಿ ದರೋಡೆಕೋರರ ಕೃತ್ಯದ ಕೆಲವು ದೃಶ್ಯಗಳು ದಾಖಲಾಗಿವೆ. ಮುಖಕ್ಕೆ ಮಾಸ್ಕ್ ಹಾಕಿರುವುದರಿಂದ ಸ್ಪಷ್ಟ ಚಹರೆ ಸಿಕ್ಕಿಲ್ಲ. ಒಬ್ಬ ಮಾತ್ರ ಮುಖದ ಮಾಸ್ಕ್ ಅನ್ನು ಕೆಳಗೆ ಇಳಿಸಿದ್ದ. ಸಿಸಿಟಿವಿಯಲ್ಲಿ ಬರುತ್ತೆ ಎಂದು ಡಿವಿಆರ್ ಹೊತ್ತೊಯ್ಯಲು ಪ್ಲಾನ್ ಮಾಡಿದ್ದರು. ಕೊನೆ ಕ್ಷಣದ ಅರ್ಜೆಂಟಲ್ಲಿ ಡಿವಿಆರ್ ಬದಲು ಅಲ್ಲಿದ್ದ ಮಾಡೆಮ್ ಅನ್ನು ಕಿತ್ತುಕೊಂಡು ಹೋಗಿದ್ದಾರೆ. ಹೊರಗಡೆ ಸ್ವಲ್ಪ ದೂರದಲ್ಲಿ ತಮ್ಮ ವಾಹನ ನಿಲ್ಲಿಸಿದ್ದರಿಂದ ಅದರ ಕುರಿತಾಗಿಯೂ ಪೂರ್ಣ ಚಿತ್ರಣ ಸಿಸಿಟಿವಿಯಲ್ಲಿ ಲಭಿಸಿಲ್ಲ. ಪೊಲೀಸರು ಪರಾರಿಯಾದ ವಾಹನದ ಚಿತ್ರವನ್ನು ಬಂಟ್ವಾಳಕ್ಕೆ ಸಾಗುವಲ್ಲಿ ರಸ್ತೆ ಬದಿಯೊಂದರ ಕಟ್ಟಡದ ಸಿಸಿ ಟಿವಿಯಲ್ಲಿ ಪತ್ತೆ ಮಾಡಿದ್ದು, ಅದನ್ನು ಪೊಲೀಸರು ಪರಿಶೀಲಿಸಿದ್ದಾರೆ. 

2021ರಲ್ಲಿ ದರೋಡೆ, ಮೂರೇ ದಿನದಲ್ಲಿ ಬಂಧನ 

2021ರ ಮಾರ್ಚ್‌ನಲ್ಲಿ ಮೂಡುಬಿದಿರೆ, ಬಜಪೆ ಮತ್ತು ಮೂಲ್ಕಿ ಠಾಣೆ ವ್ಯಾಪ್ತಿಯ ಹಲವೆಡೆ ದರೋಡೆ, ಕಳ್ಳತನ ನಡೆಸಿದ್ದ ಗ್ಯಾಂಗಿನ 9 ಮಂದಿಯನ್ನು ಪೊಲೀಸರು ಮೂರು ದಿನಗಳಲ್ಲಿ ಬಂಧಿಸಿದ್ದರು. ಕಳ್ಳರ ತಂಡವು ಫಾರ್ಮ್ ಹೌಸ್‌, ಗೋದಾಮು, ಮನೆಗಳಲ್ಲಿ ಭಾರೀ ಪ್ರಮಾಣದಲ್ಲಿ ಹಣ ಸಂಗ್ರಹಿಸುತ್ತಿದ್ದವರ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸುತ್ತಿತ್ತು. ಇದೀಗ ಅದೇ ಮಾದರಿಯಲ್ಲಿ ದರೋಡೆ ನಡೆದಿರುವಂತೆ ಕಂಡುಬಂದಿದೆ. ‌
 
ಧರ್ಮಸ್ಥಳ ಬಳಿಯ ಸೌತಡ್ಕದಲ್ಲಿ 2020ರ ಡಿಸೆಂಬರ್‌ನಲ್ಲಿ ರಾತ್ರಿ ವೇಳೆ ಯಜಮಾನನ್ನು ಕಟ್ಟಿ ಹಾಕಿ ಮನೆಯೊಡತಿಗೆ ಚೂರಿಯಿಂದ ಇರಿದು ದರೋಡೆ ನಡೆಸಿದ್ದ ತಂಡ, ಅಡಿಕೆ ಮಾರಾಟ ಮಾಡಿ ಕೂಡಿಟ್ಟಿದ್ದ ನಗದು ಹಣ ಮತ್ತು ಚಿನ್ನಾಭರಣ ದೋಚಿತ್ತು. ಸುಮಾರು 9 ಮಂದಿ ದರೋಡೆಕೋರರ ತಂಡ ಮನೆಯವರನ್ನು ಬೆದರಿಸಿ ಕಪಾಟಿನ ಕೀಲಿ ಕೈಯನ್ನು ಪಡೆದಿತ್ತು. ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.

Mangalore Ulaibettu dacoity, accused carried gunny bags expecting crores in cash, locals involved. In a dramatic turn of events, it has been revealed that the dacoits who raided the house of an entrepreneur in Permanki, Ulaibettu, on Friday night, had plans to loot crores of rupees. The dacoits, armed with gunny bags, believed there were crores of rupees in cash stored in the house.