Bisle Ghat fight, Mangalore bikers, Crime: ಬಿಸಿಲೆ ಘಾಟ್ ಪಟ್ಲ ಬೆಟ್ಟಕ್ಕೆ ಚಾರಣ ತೆರಳಿದ್ದ ಮಂಗಳೂರಿನ ಯುವಕರ ಮೇಲೆ ಹಲ್ಲೆ ; ಸ್ಥಳೀಯ ಜೀಪು ಚಾಲಕರ ಗೂಂಡಾಗಿರಿ ವಿಡಿಯೋ ಸೆರೆ, ಎಫ್ಐಆರ್ ದಾಖಲು

25-06-24 04:35 pm       Mangalore Correspondent   ಕ್ರೈಂ

ಹಾಸನ ಜಿಲ್ಲೆ ವ್ಯಾಪ್ತಿಯ ಬಿಸಿಲೆ ಘಾಟ್ ಬಳಿಯ ಪಟ್ಲ ಬೆಟ್ಟಕ್ಕೆ ಪ್ರವಾಸ ತೆರಳಿದ್ದ ಮಂಗಳೂರಿನ ಯುವಕರ ತಂಡವನ್ನು ಅಡ್ಡಗಟ್ಟಿ ಅಲ್ಲಿನ ಜೀಪು ಚಾಲಕರು ಗೂಂಡಾಗಿರಿ ಪ್ರದರ್ಶನ ಮಾಡಿದ್ದಾರೆ.

ಮಂಗಳೂರು, ಜೂನ್ 25: ಹಾಸನ ಜಿಲ್ಲೆ ವ್ಯಾಪ್ತಿಯ ಬಿಸಿಲೆ ಘಾಟ್ ಬಳಿಯ ಪಟ್ಲ ಬೆಟ್ಟಕ್ಕೆ ಪ್ರವಾಸ ತೆರಳಿದ್ದ ಮಂಗಳೂರಿನ ಯುವಕರ ತಂಡವನ್ನು ಅಡ್ಡಗಟ್ಟಿ ಅಲ್ಲಿನ ಜೀಪು ಚಾಲಕರು ಗೂಂಡಾಗಿರಿ ಪ್ರದರ್ಶನ ಮಾಡಿದ್ದಾರೆ.

ಮಂಗಳೂರಿನ ಕೊಟ್ಟಾರ ನಿವಾಸಿ ಭವಿತ್ ಪೂಜಾರಿ ಮತ್ತು ಇನ್ನಿತರ ಎಂಟು ಮಂದಿ ಬೈಕಿನಲ್ಲಿ ಪಟ್ಲ ಬೆಟ್ಟಕ್ಕೆ ಭಾನುವಾರ ಚಾರಣ ತೆರಳಿದ್ದರು. ಕುಕ್ಕೆ ಸುಬ್ರಹ್ಮಣ್ಯದಿಂದ 30 ಕಿಮೀ ದೂರದಲ್ಲಿರುವ ಈ ಬೆಟ್ಟದ ತುದಿ ಕಡಿದಾದ ರಸ್ತೆಯಿಂದ ಕೂಡಿದ್ದು, ಎರಡು ಕಿಮೀ ದಾರಿಯನ್ನು ಅತ್ಯಂತ ಕಷ್ಟದಿಂದ ದಾಟಬೇಕಿದೆ. ಅಲ್ಲಿನ ಮಣ್ಣಿನ ರಸ್ತೆಯಲ್ಲಿ ಸಾಮಾನ್ಯ ವಾಹನಗಳು ಸಾಗದೇ ಇರುವುದರಿಂದ ಸ್ಥಳೀಯರು ಜೀಪು ಬಾಡಿಗೆ ಇಟ್ಟಿದ್ದು ಪ್ರವಾಸಿಗರು ಆ ಜೀಪುಗಳ ಮೂಲಕವೇ ತೆರಳಬೇಕೆಂದು ಫರ್ಮಾನು ಮಾಡುತ್ತಿದ್ದಾರೆ. ಅಲ್ಲದೆ, ಹೆಚ್ಚು ಮೊತ್ತವನ್ನು ಪೀಕಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸ್ಥಳದಲ್ಲಿ ಪೊಲೀಸರಾಗಲೀ, ಅರಣ್ಯ ಇಲಾಖೆ ಸಿಬಂದಿಯಾಗಲೀ ಇಲ್ಲದೆ, ಜೀಪು ಚಾಲಕರೇ ಕಾರುಬಾರು ಮಾಡುತ್ತಿದ್ದಾರೆ.

ಮಂಗಳೂರಿನಿಂದ ಬೈಕಿನಿಂದ ತೆರಳಿದ್ದ ತಂಡ ಬೆಳಗ್ಗೆ ಬೆಟ್ಟಕ್ಕೆ ಹೋಗುವ ಸಂದರ್ಭದಲ್ಲೇ ತಂಡವೊಂದು ಅಡ್ಡಗಟ್ಟಿ ಕಿರಿಕ್ ಮಾಡಿತ್ತು. ಅದನ್ನು ಲೆಕ್ಕಿಸದೆ ಯುವಕರು ಚಾರಣ ತೆರಳಿದ್ದು, ಹಿಂತಿರುಗಿ ಬರುವಾಗ ಗೂಂಡಾಗಳ ತಂಡ ಅಡ್ಡಗಟ್ಟಿ ಹಲ್ಲೆಗೆ ಮುಂದಾಗಿದೆ. ಬೈಕನ್ನು ನಿಲ್ಲಿಸಿ, ಇಳಿಯಿರಿ. ಮೇಲೆ ಹೋಗುವಂತಿಲ್ಲ. ಹೋಗುವುದಿದ್ದರೆ ನಮ್ಮ ಜೀಪು ಹತ್ತಿ ಹೋಗಿ, ಇಲ್ಲಾಂದ್ರೆ ನಡೆದುಕೊಂಡು ಹೋಗಿ ಎಂದು ಆವಾಜ್ ಹಾಕಿದ್ದಾರೆ. ನೀವು ಯಾರು ಕೇಳೋಕೆ, ನಾವು ಬೈಕಿನಲ್ಲಿ ಹೋಗುತ್ತೇವೆ ಎಂದು ಹೇಳಿದ್ದಕ್ಕೆ, ಪ್ರತಿಯಾಗಿ ಹಲ್ಲೆ ಮಾಡಿದ್ದಾರೆ. ಇವರು ಮಾತನಾಡುವುದು ಮತ್ತು ಜೀಪು ಚಾಲಕರು ಗೂಂಡಾಗಳ ರೀತಿ ಹಲ್ಲೆ ನಡೆಸಲು ಬಂದಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಈ ಬಗ್ಗೆ ಹಲ್ಲೆಗೀಡಾದ ಮಂಗಳೂರಿನ ಭವಿತ್ ಪೂಜಾರಿ ಇಮೇಲ್ ಮೂಲಕ ಸಕಲೇಶಪುರ ಸರ್ಕಲ್ ವಿಭಾಗದ ಎಸಳೂರು ಠಾಣೆಗೆ ದೂರು ನೀಡಿದ್ದು, ಪೊಲೀಸರು ಗಗನ್, ಕಿರಣ್, ನಿಶಾಂತ್, ಮದನ್ ಎಂಬವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

Bisle Ghat fight, Mangalore bikers attacked for visiting Ghat without using their Jeeps. Jeep drivers tried to assult the youths who came from Mangalore. A video of this has gone viral on social media.