ಬೆಳ್ತಂಗಡಿ ; ಗೂಡ್ಸ್ ಟೆಂಪೋ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಬಲಿ, ಚಾಲಕನ ನಿರ್ಲಕ್ಷ್ಯಕ್ಕೆ ಎರಡು ಬೈಕಿಗೆ ಟೆಂಪೋ ಸರಣಿ ಡಿಕ್ಕಿ

11-11-26 01:54 pm       HK News Staffer   ಕ್ರೈಂ

ಗೂಡ್ಸ್ ಟೆಂಪೋ ಹಾಗೂ ಎರಡು ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಇಬ್ಬರು ಸವಾರರು ದಾರುಣವಾಗಿ ಮೃತಪಟ್ಟ ಘಟನೆ ಬೆಳ್ತಂಗಡಿಯ ಚರ್ಚ್ ರಸ್ತೆಯಲ್ಲಿ ಬುಧವಾರ ನಡೆದಿದೆ. ನಾವೂರು ನಿವಾಸಿ ಸಂತೋಷ್ (32) ಹಾಗೂ ಕಣಿಯೂರು ಗ್ರಾಮದ ಪಿಲಿಗೂಡು ನಿವಾಸಿ ಮೋಹನ್ (33) ಮೃತಪಟ್ಟವರು.

ಬೆಳ್ತಂಗಡಿ, ನ.11: ಗೂಡ್ಸ್ ಟೆಂಪೋ ಹಾಗೂ ಎರಡು ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಇಬ್ಬರು ಸವಾರರು ದಾರುಣವಾಗಿ ಮೃತಪಟ್ಟ ಘಟನೆ ಬೆಳ್ತಂಗಡಿಯ ಚರ್ಚ್ ರಸ್ತೆಯಲ್ಲಿ ಬುಧವಾರ ನಡೆದಿದೆ. ನಾವೂರು ನಿವಾಸಿ ಸಂತೋಷ್ (32) ಹಾಗೂ ಕಣಿಯೂರು ಗ್ರಾಮದ ಪಿಲಿಗೂಡು ನಿವಾಸಿ ಮೋಹನ್ (33) ಮೃತಪಟ್ಟವರು. 

ಮಂಗಳೂರಿನಿಂದ ಚಿಕ್ಕಮಗಳೂರು ಕಡೆಗೆ ಚಲಿಸುತ್ತಿದ್ದ ಟಾಟಾ ಗೂಡ್ಸ್ ವಾಹನವು ಎದುರಿನಿಂದ ಗುರುವಾಯನಕೆರೆ ಕಡೆಗೆ ತೆರಳುತ್ತಿದ್ದ ಎರಡು ದ್ವಿಚಕ್ರ ವಾಹನಗಳಿಗೆ ಸರಣಿಯಾಗಿ ಢಿಕ್ಕಿ ಹೊಡೆದಿದೆ. ಗೂಡ್ಸ್ ವಾಹನದ ಚಾಲಕ ನಿದ್ರೆಯ ಮಂಪರಿನಲ್ಲಿದ್ದ ಕಾರಣ ದುರಂತ ನಡೆದಿದೆ ಎನ್ನಲಾಗಿದೆ. ಸ್ಕೂಟರ್ ಸವಾರರಾಗಿದ್ದ ಸಂತೋಷ್ ಅವರು ಮಂಗಳೂರಿನ ಸುವರ್ಣ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಅಪಘಾತದ ತೀವ್ರತೆಗೆ ಸಂತೋಷ್ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. 

ಬೈಕ್ ಸವಾರ ಮೋಹನ್ ಅವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.