ಬೆಂಗಳೂರಿಗೆ ಹೊರಟಿದ್ದ ಬೈಂದೂರಿನ ಸಾಫ್ಟ್‌ವೇರ್ ಯುವಕ ಅಪಘಾತದಲ್ಲಿ ಸಾವು ; ಚನ್ನರಾಯಪಟ್ಟಣ ಬಳಿ ಬೈಕ್ ಅಪಘಾತ, ಏಕೈಕ ಮಗನನ್ನು ಕಳೆದುಕೊಂಡ ಪೋಷಕರು

15-11-26 09:10 pm       HK News Staffer   ಕ್ರೈಂ

ಉದ್ಯೋಗ ನಿಮಿತ್ತ ಬೈಕ್‌ನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ಯುವ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರು ಚನ್ನರಾಯಪಟ್ಟಣ ಬಳಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ತಂದೆ-ತಾಯಿಯ ಏಕೈಕ ಪುತ್ರನಾಗಿದ್ದ ಯುವಕನ ಅಕಾಲಿಕ ಸಾವು ಕುಟುಂಬಸ್ಥರು, ಬಂಧುಮಿತ್ರರನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.

ಉಡುಪಿ, ನವೆಂಬರ್ 15: ಉದ್ಯೋಗ ನಿಮಿತ್ತ ಬೈಕ್‌ನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ಯುವ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರು ಚನ್ನರಾಯಪಟ್ಟಣ ಬಳಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ತಂದೆ-ತಾಯಿಯ ಏಕೈಕ ಪುತ್ರನಾಗಿದ್ದ ಯುವಕನ ಅಕಾಲಿಕ ಸಾವು ಕುಟುಂಬಸ್ಥರು, ಬಂಧುಮಿತ್ರರನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. 

ಮೃತರನ್ನು ಬೈಂದೂರು ತಾಲೂಕಿನ ಚುಂಗಿಗುಡ್ಡೆ ನಿವಾಸಿ ನಾರಾಯಣ ಹೆಬ್ಬಾರ್ ಅವರ ಪುತ್ರ ಅಕ್ಷಯ್ ಎನ್. ಹೆಬ್ಬಾರ್ (26) ಎಂದು ಗುರುತಿಸಲಾಗಿದೆ. ಇಂಜಿನಿಯರಿಂಗ್ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದ ಅಕ್ಷಯ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ವರ್ಕ್ ಫ್ರಮ್ ಹೋಮ್ ಕರ್ತವ್ಯ ನಿರ್ವಹಿಸುತ್ತಿದ್ದ ಅಕ್ಷಯ್, ತಿಂಗಳಿಗೊಮ್ಮೆ ಕಚೇರಿಗೆ ಭೇಟಿ ನೀಡಲು ಬೆಂಗಳೂರಿಗೆ ತೆರಳುತ್ತಿದ್ದರು.

ಭಾನುವಾರ ಬೆಳಗಿನ ಜಾವ ಸುಮಾರು 4 ಗಂಟೆಗೆ ಚುಂಗಿಗುಡ್ಡೆಯ ಮನೆಯಿಂದ ಬೈಕ್‌ನಲ್ಲಿ ಬೆಂಗಳೂರಿನತ್ತ ತೆರಳಿದ್ದರು. ಪ್ರಯಾಣದ ವೇಳೆ ಅಪಘಾತ ಸಂಭವಿಸುವುದಕ್ಕೂ ಮುನ್ನ ತಾಯಿಗೆ ದೂರವಾಣಿ ಕರೆ ಮಾಡಿದ್ದರು ಎನ್ನಲಾಗಿದೆ. ಚನ್ನರಾಯಪಟ್ಟಣ ಸಮೀಪ ಟ್ರಕ್‌ಗೆ ಬೈಕ್‌ನ ಹ್ಯಾಂಡಲ್ ತಾಗಿ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಆದರೆ, ಅಪಘಾತದ ನಿಖರ ಕಾರಣ ಖಚಿತವಾಗಿಲ್ಲ. 

ತಂದೆ -ತಾಯಿಯ ಏಕೈಕ ಆಸರೆಯಾಗಿದ್ದ ಮಗ

ಅಕ್ಷಯ್ ಸೌಮ್ಯ ಸ್ವಭಾವದ ಯುವಕನಾಗಿದ್ದು, ಕುಟುಂಬದವರೊಂದಿಗೆ ಅತ್ಯಂತ ಆತ್ಮೀಯತೆ ಹೊಂದಿದ್ದರು. ಪ್ರತಿದಿನ ಸಂಜೆ ತಾಯಿಯೊಂದಿಗೆ ಚುಂಗಿಗುಡ್ಡೆ ರಸ್ತೆಯಲ್ಲಿ ವಾಕಿಂಗ್ ಮಾಡುವುದು ಅವರ ದಿನಚರಿಯ ಭಾಗವಾಗಿತ್ತು. ತಂದೆ ನಾರಾಯಣ ಹೆಬ್ಬಾರ್ ಎಲ್‌ಐಸಿ ಏಜೆಂಟ್ ಆಗಿದ್ದು, ಕೃಷಿಯಲ್ಲೂ ತೊಡಗಿಸಿಕೊಂಡಿದ್ದಾರೆ. ತಾಯಿ ಗೃಹಿಣಿಯಾಗಿದ್ದು ಉದ್ಯೋಗಕ್ಕಾಗಿ ಬೆಂಗಳೂರಿಗೆ ತೆರಳಿದ್ದ ಮಗನ ಸಾವಿನ ಸುದ್ದಿ ಕುಟುಂಬಸ್ಥರಿಗೆ ಬರಸಿಡಿಲಿನಂತೆ ಅಪ್ಪಳಿಸಿದೆ.