ರೇಖಾ ಕದಿರೇಶ್ ಕೊಲೆಗೆ ಗಂಡನ ಸೋದರಿಯದ್ದೇ ಸುಪಾರಿ ; ರಾಜಕೀಯದ ಮೇಲೆ ಕಣ್ಣಿಟ್ಟಿದ್ದ ಮಾಲಾ !?   

26-06-21 09:48 pm       Satish, Bengaluru   ಕ್ರೈಂ

ಬಿಬಿಎಂಪಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಪ್ರಮುಖ ಆರೋಪಿಗಳಾದ ಪೀಟರ್ ಮತ್ತು ಸೂರ್ಯ ಸ್ಫೋಟಕ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ.

ಬೆಂಗಳೂರು, ಜೂನ್ 26: ಬಿಬಿಎಂಪಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಪ್ರಮುಖ ಆರೋಪಿಗಳಾದ ಪೀಟರ್ ಮತ್ತು ಸೂರ್ಯ ಸ್ಫೋಟಕ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. ಪೊಲೀಸರು ಆರು ಮಂದಿ ಆರೋಪಿಗಳನ್ನು ಸೇರಿದಂತೆ, 50ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸುತ್ತಿದ್ದಾರೆ. ಇದೇ ವೇಳೆ, ರೇಖಾ ಕೊಲೆಗೆ ಆಕೆಯ ಗಂಡ ಕದಿರೇಶ್ ಸೋದರಿಯೇ ಸುಪಾರಿ ನೀಡಿದ್ದಳು ಅನ್ನೋ ವಿಚಾರವೂ ಬಯಲಾಗಿದೆ.

ಛಲವಾದಿಪಾಳ್ಯ ವಾರ್ಡಿನಲ್ಲಿ ಜನಪ್ರಿಯತೆ ಗಳಿಸಿದ್ದ ರೇಖಾ ಕದಿರೇಶ್ ಏಳಿಗೆ ಸಹಿಸದೇ ಕುಟುಂಬಸ್ಥರೇ ಸೇರಿ ಈ ಕೊಲೆ ಕೃತ್ಯ ನಡೆಸಿದ್ದಾರೆ ಎನ್ನುವ ಅನುಮಾನ ಪೊಲೀಸರಿಗೆ ಬಲವಾಗಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿಗಳನ್ನು ಪಡೆಯಲು ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಇದೇ ವೇಳೆ, ಮೂರು ವರ್ಷಗಳ ಹಿಂದೆ ರೇಖಾ ಗಂಡ ಕದಿರೇಶ್ ಕೊಲೆಯಾಗಿತ್ತು. ಹಾಡಹಗಲೇ ನಡೆದಿದ್ದ ಕದಿರೇಶ್ ಕೊಲೆಯನ್ನೂ ರೇಖಾಳೇ ಮಾಡಿಸಿದ್ದಳು. ಕೊಲೆಯ ಬಳಿಕ ಆರೋಪಿಗಳನ್ನು ಜಾಮೀನು ಮೇಲೆ ಬಿಡಿಸಲು ರೇಖಾ ಸಹಕಾರ ನೀಡಿದ್ದಳು ಎಂದು ಪೀಟರ್ ಪೊಲೀಸರಲ್ಲಿ ಹೇಳಿಕೆ ನೀಡಿದ್ದಾಗಿ ಹೇಳಲಾಗುತ್ತಿದೆ.

ಪೀಟರ್ ಮತ್ತು ಸೂರ್ಯ ಈ ಹಿಂದೆ ಕದಿರೇಶ್ ಜೊತೆಗೇ ಇದ್ದವರು. ಪೀಟರ್ 20 ವರ್ಷಗಳಿಂದಲೂ ಕದಿರೇಶ್ ಪಾಲಿಗೆ ಆಪ್ತ ಶಿಷ್ಯನಾಗಿದ್ದ. ಆದರೆ, ಕದಿರೇಶ್ ಕೊಲೆಯಾದ ಬಳಿಕ ಆತನಿಗೆ ದಿಕ್ಕಿಲ್ಲದಂತಾಗಿತ್ತು. ಇತ್ತ ರೇಖಾ ತನ್ನ ವಾರ್ಡಿನಲ್ಲಿ ಕಾರ್ಪೊರೇಟರ್ ಆಗಿ ಜನಪ್ರಿಯತೆ ಗಳಿಸಿದ್ದರೂ ಜೊತೆಗಿದ್ದವರಿಗೆ ಏನೂ ಕೊಡುತ್ತಿರಲಿಲ್ಲ. ಇದರಿಂದಾಗಿ ಪೀಟರ್, ರೇಖಾಳ ಬಗ್ಗೆ ಮನಸ್ತಾಪ ಹೊಂದಿದ್ದ. ಇತ್ತೀಚೆಗೆ ಪೀಟರ್ ಮನೆ ಕಟ್ಟುತ್ತಿರುವ ಬಗ್ಗೆ ಹೇಳಿಕೊಂಡು ರೇಖಾ ಬಳಿ ಹಣಕಾಸಿನ ನೆರವು ಕೇಳಿದ್ದ. ಆದರೆ, ರೇಖಾ ತಾನು ಯಾವುದೇ ಹಣ ನೀಡುವುದಿಲ್ಲ ಎಂದು ಹೇಳಿ ಬೈದು ಕಳಿಸಿದ್ದರಂತೆ.

ಇದರಿಂದ ನೊಂದಿದ್ದ ಪೀಟರ್ ನನ್ನು ಕದಿರೇಶ್ ತಂಗಿಯರು ತಮ್ಮ ದಾಳಕ್ಕೆ ಬಳಸಿಕೊಂಡಿದ್ದಾರೆ. ರೇಖಾ ಬಗ್ಗೆ ಇಲ್ಲಸಲ್ಲದ್ದನ್ನು ಹೇಳಿ, ಪೀಟರ್ ನನ್ನು ರೇಖಾ ವಿರುದ್ಧ ಎತ್ತಿಕಟ್ಟಿದ್ದಾರೆ. ನಿನ್ನ ಬಗ್ಗೆಯೂ ಆಕೆ ಏನೆಲ್ಲಾ ಹೇಳಿಕೊಂಡು ತಿರುಗುತ್ತಾಳೆ ಎಂದು ಹೇಳಿ ಸಿಟ್ಟು ಬರಿಸಿದ್ದರು. ಇದೇ ಸಿಟ್ಟನ್ನು ಬಳಸಿಕೊಂಡು ನೀನು ರೇಖಾಳನ್ನು ಮುಗಿಸಿದರೆ, 25 ಲಕ್ಷ ಕೊಡುವುದಾಗಿ ಕದಿರೇಶ್ ತಂಗಿ ಮಾಲಾ ಹೇಳಿದ್ದಾಳೆ ಎನ್ನಲಾಗುತ್ತಿದೆ. ಮಾಲಾ ನೀಡಿದ್ದ 25 ಲಕ್ಷದ ಆಫರ್ ಕೇಳಿ ಉಬ್ಬಿಹೋಗಿದ್ದ ಪೀಟರ್, ತನ್ನ ಸಹಚರರ ಜೊತೆ ಸೇರಿ ರೇಖಾಳನ್ನು ಮುಗಿಸಲು ಸಂಚು ಹೂಡಿದ್ದ. ಅದಕ್ಕಾಗಿ ಆರಂಭಿಕವಾಗಿ ಹತ್ತು ಲಕ್ಷ ರೂಪಾಯಿ ಹಣ ಪಡೆದಿದ್ದ ಎನ್ನಲಾಗುತ್ತಿದೆ.

ಇದಕ್ಕಾಗಿ ತನ್ನ ಖಾಸಾ ದೋಸ್ತ್ ಆಗಿದ್ದ ಸೂರ್ಯ ಮತ್ತು ಸ್ಟೀಫನನ್ನು ಬಳಸಿಕೊಂಡಿದ್ದಾನೆ. ರೇಖಾ ಛಲವಾದಿಪಾಳ್ಯದ ತನ್ನ ಕಚೇರಿಯಲ್ಲಿರುವುದನ್ನು ತಿಳಿದು ಯಾರಲ್ಲೋ ಹೊರಗೆ ಕರೆಸಿಕೊಂಡು ತಮ್ಮ ಪ್ಲಾನ್ ಕಾರ್ಯಗತ ಮಾಡಲು ಮುಂದಾಗಿದ್ದಾರೆ. ಅದಕ್ಕಾಗಿ ಮೊದಲೇ, ಕಚೇರಿಯ ಮುಂದಿದ್ದ ಸಿಸಿಟಿವಿಗಳನ್ನು ಬೇರೆಡೆಗೆ ತಿರುಗಿಸಿ ಕೊಲೆ ದೃಶ್ಯ ಬರದಂತೆ ಮಾಡಿದ್ದರು. ಪೀಟರ್ ಮತ್ತು ಸೂರ್ಯ ಮಚ್ಚಿನಲ್ಲಿ ರೇಖಾ ತಲೆಗೆ ಹೊಡೆದು ಸಾಯಿಸಿದರೆ, ಈ ವೇಳೆ ಯಾರೂ ಹತ್ತಿರ ಸುಳಿಯದಂತೆ ಸ್ಟೀಫನ್ ನೋಡಿಕೊಂಡಿದ್ದ.

ಆದರೆ, ಇವೆಲ್ಲವನ್ನೂ ಅಲ್ಲಿಯೇ ಮತ್ತೊಂದು ಕಟ್ಟಡದ ಮೇಲಿದ್ದ ಯಾರೋ ಮೊಬೈಲಿನಲ್ಲಿ ಚಿತ್ರೀಕರಿಸಿದ್ದು, ಕೊಲೆಗೆ ಬಲವಾದ ಸಾಕ್ಷ್ಯ ಪೊಲೀಸರ ಕೈಸೇರಿತ್ತು. ಇದೇ ಸಾಕ್ಷ್ಯವನ್ನು ಹಿಡಿದು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು. ಪ್ಲಾನ್ ಪ್ರಕಾರ, ಪೀಟರ್, ಸೂರ್ಯ ಮತ್ತು ಸ್ಟೀಫನ್ ಮೂವರು ಕೂಡ ತಮಿಳ್ನಾಡಿಗೆ ಪರಾರಿಯಾಗಲು ಸ್ಕೆಚ್ ಹಾಕಿದ್ದರು. ಆದರೆ, ಲಾಕ್ಡೌನ್ ಇದ್ದುದರಿಂದ ಆಟೋದಲ್ಲಿ ತೆರಳಿದ್ದವರಿಗೆ ತಮಿಳುನಾಡಿನ ಹೊಸೂರು ಗಡಿ ತಲುಪಲು ಸಾಧ್ಯವಾಗಿರಲಿಲ್ಲ. ಮೊದಲೇ ಪೊಲೀಸರು ಅಲರ್ಟ್ ಆಗಿದ್ದರಿಂದ ಮತ್ತು ಆರೋಪಿಗಳನ್ನು ಕೂಡಲೇ ಹಿಡಿಯಬೇಕೆಂದು ಸಿಎಂ ಸೂಚನೆ ಹಿನ್ನೆಲೆಯಲ್ಲಿ ತಪಾಸಣೆ ಬಿಗಿಗೊಳಿಸಿದ್ದರು. ಇದರಿಂದಾಗಿ ಆಟೋದಲ್ಲಿಯೇ ತಿರುಗಾಡುತ್ತಿದ್ದ ಪೀಟರ್ ಮತ್ತು ಸೂರ್ಯ ಮರುದಿನ ಬೆಳಗ್ಗೆ ಪೊಲೀಸರ ಬಲೆಗೆ ಬಿದ್ದಿದ್ದರು.

ಆರೋಪಿಗಳು ಬಾಯ್ಬಿಟ್ಟ ಮಾಹಿತಿಯಂತೆ, ಪೊಲೀಸರು ಕದಿರೇಶ್ ಕುಟುಂಬ ಮತ್ತು ಆತನ ಆಪ್ತ ವಲಯದ 50ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕದಿರೇಶ್ ಸೋದರಿ ಮಾಲಾ ಮತ್ತು ಆಕೆಯ ಮಗ, ಸೊಸೆಯೂ ಪೊಲೀಸರ ವಶದಲ್ಲಿದ್ದಾರೆ. ರಾಜಕೀಯವಾಗಿ ಮೇಲೇರುತ್ತಿರುವ ರೇಖಾಳನ್ನು ಮುಗಿಸಿ, ತಾನೇ ಅಲ್ಲಿ ರಾಜಕೀಯ ಗಾದಿ ಏರಬೇಕೆಂದು ಮಾಲಾ ಲೆಕ್ಕ ಹಾಕಿದ್ದಳು. ಆದರೆ, ಆರೋಪಿಗಳು ಹೇಳಿದ್ದು ಸತ್ಯವೇ ಆಗಿದ್ದರೆ, ಮಾಲಾ ಜೈಲು ಕಂಬಿಯನ್ನೇ ಎಣಿಸಬೇಕಷ್ಟೆ.

ಅಂದಹಾಗೆ, ರೇಖಾ ಆಕೆಯ ಗಂಡ ಕದಿರೇಶನಿಗೆ ಎರಡನೇ ಪತ್ನಿ. ಅದಕ್ಕೂ ಮುನ್ನ ಮೊದಲನೇ ಪತ್ನಿ ಮತ್ತು ಆಕೆಗೆ ಮಕ್ಕಳೂ ಇದ್ದಾರೆ. ಅವರು ಬೆಳೆದು ದೊಡ್ಡವರಾಗಿದ್ದು, ರೇಖಾಳ ಜೊತೆ ಸರಿ ಇರಲಿಲ್ಲ. ಈ ನಡುವೆ, ಕದಿರೇಶ್ 2018ರ ಫೆಬ್ರವರಿಯಲ್ಲಿ ಕೊಲೆಯಾಗಿದ್ದ. ಹಿಂದೆ ರೌಡಿಶೀಟರ್ ಕೂಡ ಆಗಿದ್ದ ಕದಿರೇಶ್, ಛಲವಾದಿ ಪಾಳ್ಯದ ತಮಿಳು ಕಾಲನಿಯಲ್ಲಿ ಪ್ರಭಾವಿಯಾಗಿ ಬೆಳೆದಿದ್ದ ಗಂಡಸು. ತಮಿಳು ಕ್ರಿಸ್ತಿಯನ್ನರ ಪೈಕಿ ಪ್ರಭಾವಿಯೂ ಆಗಿದ್ದ. ಆದರೆ, ಹಳೆದ್ವೇಷದಲ್ಲಿ ಆತನನ್ನು ಅಂದು ವಿರೋಧಿ ತಂಡವೇ ಮುಗಿಸಿ ಹಾಕಿತ್ತು ಅನ್ನೋ ಮಾಹಿತಿ ಬಯಲಾಗಿತ್ತು. ರೇಖಾ ಕದಿರೇಶ್, ಆಕೆಯ ಗಂಡನನ್ನೇ ಕೊಲೆ ಮಾಡಿಸಿದ್ದಳು ಎಂದು ಪೀಟರ್ ಈಗ ಹೇಳುತ್ತಿದ್ದರೂ, ಅದೆಷ್ಟು ಸಾಚಾ ಅನ್ನೋದು ಪೊಲೀಸರ ತನಿಖೆಯಲ್ಲಷ್ಟೇ ಬಯಲಾಗಬೇಕು. 

Rekha Kadiresh was the one behind her husband's murder shocking confession by accused Peter. Around 50 people were questioned as part of the probe and four persons, who happened to be relatives of the deceased, were detained for questioning.