ಮಹಾ ಸಿಎಂ ಉದ್ಧವ್ ಠಾಕ್ರೆ ನಿವಾಸ ಸ್ಫೋಟ ಬೆದರಿಕೆ ; ದಾವೂದ್ ಬಂಟನ ಹೆಸರಲ್ಲಿ ಕರೆ 

07-09-20 03:28 pm       Headline Karnataka News Network   ಕ್ರೈಂ

ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮೇಲೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗ್ಯಾಂಗ್ ಹೆಸರಲ್ಲಿ ಬೆದರಿಕೆ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ ತಾನು ದಾವೂದ್ ಇಬ್ರಾಹಿಂ ಗ್ಯಾಂಗ್ ಸದಸ್ಯ ಎಂದು ಹೇಳಿಕೊಂಡಿದ್ದ.

ಮುಂಬೈ, ಸೆಪ್ಟೆಂಬರ್ 7: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮೇಲೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗ್ಯಾಂಗ್ ಹೆಸರಲ್ಲಿ ಬೆದರಿಕೆ ಕರೆ ಬಂದಿದೆ. ಮುಂಬೈನ ಬಾಂದ್ರಾದಲ್ಲಿರುವ ಸಿಎಂ ನಿವಾಸ 'ಮಾತೋಶ್ರೀ' ಗೆ ಕರೆ ಮಾಡಿರುವ ಅಪರಿಚಿತ ವ್ಯಕ್ತಿ ಕೆಲವೇ ದಿನಗಳಲ್ಲಿ ಮಾತೋಶ್ರೀಯನ್ನು ಬ್ಲಾಸ್ಟ್ ಮಾಡುವುದಾಗಿ ಹೇಳಿದ್ದಾನೆ. 

ಕರೆ ಮಾಡಿದ ವ್ಯಕ್ತಿ ತಾನು ದಾವೂದ್ ಇಬ್ರಾಹಿಂ ಗ್ಯಾಂಗ್ ಸದಸ್ಯ ಎಂದು ಹೇಳಿಕೊಂಡಿದ್ದ. ಬೆದರಿಕೆ ಕರೆಯ ಬಗ್ಗೆ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೇಲ್ನೋಟಕ್ಕೆ ಹುಸಿ ಕರೆ ಎನ್ನುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. 

ಆದರೂ ಕರೆಯ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಮಾತೋಶ್ರೀ ಆವರಣದಲ್ಲಿ ಭದ್ರತೆ ಹೆಚ್ಚಿಸಿದೆ. ಅಲ್ಲದೆ, ಕರೆ ಮಾಡಿದ ವ್ಯಕ್ತಿಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ನಿನ್ನೆ ರಾತ್ರಿ 10.30ರ ಸುಮಾರಿಗೆ ಕರೆ ಮಾಡಿದ್ದ ವ್ಯಕ್ತಿ , ದಾವೂದ್ ಇಬ್ರಾಹಿಂ ಲೈನಲ್ಲಿದ್ದಾರೆ. ಸಿಎಂ ಉದ್ಧವ್ ಠಾಕ್ರೆಗೆ ಕರೆ ಹಸ್ತಾಂತರ ಮಾಡುವಂತೆ ಹೇಳಿದ್ದಾನೆ. ಆದರೆ ಕರೆ ಸ್ವೀಕರಿಸಿದ ವ್ಯಕ್ತಿ ಉದ್ಧವ್ ಠಾಕ್ರೆಗೆ ಕರೆಯನ್ನು ಹಸ್ತಾಂತರ ಮಾಡಲಿಲ್ಲ. ಅದೇ ವ್ಯಕ್ತಿ ಮತ್ತೊಮ್ಮೆ ಕರೆ ಮಾಡಿದ್ದು ತಾನು ದುಬೈನಿಂದ ಕರೆ ಮಾಡುತ್ತಿದ್ದು ದಾವೂದ್ ಸಹಚರ ಎಂದು ಹೇಳಿದ್ದ. ಹೆಸರು ಕೇಳಿದ್ದಕ್ಕೆ ಹೇಳಿರಲಿಲ್ಲ. ಈ ಬಗ್ಗೆ ಭದ್ರತಾ ಸಿಬಂದಿ ಆಬಳಿಕ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ಮಹಾರಾಷ್ಟ್ರ ಸರಕಾರ ಘಟನೆ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದು ಕೇಂದ್ರ ಸರಕಾರ ಮಧ್ಯಪ್ರವೇಶ ಮಾಡಿ ತನಿಖೆ ನಡೆಸಬೇಕೆಂದು ಒತ್ತಾಯ ಮಾಡಿದೆ.