ಸರ್ಕಾರ ಸುಭದ್ರವಾಗಿದೆ, ಮುಂದಿನ ಮೂರು ವರ್ಷವೂ ಯಡಿಯೂರಪ್ಪನವರೇ ಸಿಎಂ; ನಳಿನ್‌ ಕುಮಾರ್‌ ಕಟೀಲ್​

30-07-20 07:42 am       Kiran - Correspondant   ಕರ್ನಾಟಕ

ಸಂಪುಟ ಪುನಾರಚನೆ ಸಿಎಂ ವಿವೇಚನೆಗೆ ಬಿಟ್ಟ ವಿಚಾರ. ಯಾರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು? ಯಾರನ್ನು ಸಂಪುಟದಿಂದ ಕೈಬಿಡಬೇಕು? ಎಂದು ಅವರೇ ನಿರ್ಧರಿಸುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್​ ತಿಳಿಸಿದ್ದಾರೆ.

ಚಾಮರಾಜನಗರ ( ಜುಲೈ 30); ಮುಂದಿನ ಮೂರು ವರ್ಷಕ್ಕೂ ಬಿ.ಎಸ್. ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿರಲಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸುಭದ್ರವಾಗಿರಲಿದೆ ಈ ಕುರಿತು ಯಾರಿಗೂ ಸಂಶಯ ಬೇಡ ಎಂದು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್​‌ ತಿಳಿಸಿದ್ದಾರೆ.

ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಊಹಾಪೋಹಗಳಿಗೆ ಇಂದು ಚಾಮರಾಜನಗರದ ಕೊಳ್ಳೆಗಾಲದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್‌ ಕಟೀಲ್​ ‌ತೆರೆ ಎಳೆಯಲು ಮುಂದಾಗಿದ್ದಾರೆ.

ಈ ಕುರಿತ ವಿವಾದಕ್ಕೆ ಸ್ಪಷ್ಟನೆ ನೀಡಿರುವ ಅವರು, "ಪಕ್ಷದ ಯಾವೊಬ್ಬ ಶಾಸಕರು, ಮಂತ್ರಿಗಳು ಸಿಎಂ ಬದಲಾವಣೆ ಬಗ್ಗೆ ಮಾತನಾಡಿಲ್ಲ. ನಮ್ಮ ಪಕ್ಷದಲ್ಲಿ ನಮ್ಮದೆ ಆದ ಶಿಸ್ತು ಮತ್ತು ನಿಮಯಗಳಿವೆ. ಪಕ್ಷದ ಶಿಸ್ತನ್ನು ಯಾರೇ ಉಲ್ಲಂಘನೆ ಮಾಡಿದರೂ ಸಹಿಸುವುದಿಲ್ಲ ಎಂದು ಪಕ್ಷ ವಿರೋಧಿ ಚಟುವಟಿಕೆ ಮಾಡುವವರಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಮುಂದಿನ ಮೂರು ವರ್ಷಗಳೂ ಬಿ.ಎಸ್.ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಪಕ್ಷವೂ ಸುಭದ್ರವಾಗಿರಲಿದೆ" ಎಂದು ತಿಳಿಸಿದ್ದಾರೆ.