ಬೊಮ್ಮಾಯಿ ಸಂಪುಟಕ್ಕೆ ಹೊಸ ಟೀಮ್ ರೆಡಿ ; ಸಚಿವ ಸ್ಥಾನಕ್ಕೆ ಸುನಿಲ್, ಭರತ್ ಶೆಟ್ಟಿ, ಕುಮಾರ್ ಬಂಗಾರಪ್ಪ ?

31-07-21 01:36 pm       Mangaluru Correspondent   ಕರ್ನಾಟಕ

ಬೊಮ್ಮಾಯಿ ಸರಕಾರದಲ್ಲಿ ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎನ್ನುವ ಬಗ್ಗೆ ಭಾರೀ ಕುತೂಹಲ ಎದ್ದಿರುವಂತೆಯೇ ಹಳಬರನ್ನು ಬದಿಗೆ ಸರಿಸಿ, ಹೊಸ ತಂಡವನ್ನು ಕಟ್ಟಲಾಗುತ್ತಿದೆ ಎನ್ನುವ ಮಾಹಿತಿ ಸಿಕ್ಕಿದೆ.

ಬೆಂಗಳೂರು, ಜುಲೈ 31: ಸಿಎಂ ಬಸವರಾಜ ಬೊಮ್ಮಾಯಿ ಸರಕಾರದಲ್ಲಿ ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎನ್ನುವ ಬಗ್ಗೆ ಭಾರೀ ಕುತೂಹಲ ಎದ್ದಿರುವಂತೆಯೇ ಹಳಬರನ್ನು ಬದಿಗೆ ಸರಿಸಿ, ಹೊಸ ತಂಡವನ್ನು ಕಟ್ಟಲಾಗುತ್ತಿದೆ ಎನ್ನುವ ಮಾಹಿತಿ ಸಿಕ್ಕಿದೆ. ಯಡಿಯೂರಪ್ಪ ಸರಕಾರದಲ್ಲಿದ್ದ ಬಹುತೇಕ ಮಂದಿಗೆ ಕೊಕ್ ನೀಡಲಾಗಿದ್ದು ಹೆಚ್ಚಿನ ಮಂದಿ ಹೊಸ ಮುಖಗಳು ಸಚಿವ ಸ್ಥಾನ ಗಿಟ್ಟಿಸಲಿದ್ದಾರೆ.

ಹಳೆ ತಂಡದಲ್ಲಿದ್ದ ಅಶ್ವತ್ಥ ನಾರಾಯಣ, ಆರ್. ಅಶೋಕ್, ಕೆ.ಎಸ್. ಈಶ್ವರಪ್ಪ, ಬಿ.ಶ್ರೀರಾಮುಲು, ಮಾಧುಸ್ವಾಮಿ ಅವರನ್ನು ಮಾತ್ರ ಉಳಿಸಿಕೊಳ್ಳಲಾಗುತ್ತೆ ಎನ್ನುವ ಮಾಹಿತಿಗಳಿವೆ. ವಲಸಿಗರ ಪೈಕಿ ಯಾರಿಗೆಲ್ಲ ಸಚಿವ ಸ್ಥಾನ ಉಳಿಯಲಿದೆ ಎನ್ನುವುದು ಇನ್ನೂ ದೃಢವಾಗಿಲ್ಲ. ಹೊಸಬರ ಪೈಕಿ ಕಾರ್ಕಳ ಶಾಸಕ ಸುನಿಲ್ ಕುಮಾರ್, ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ, ಧಾರವಾಡ ಪಶ್ಚಿಮ ಕ್ಷೇತ್ರದ ಅರವಿಂದ ಬೆಲ್ಲದ್, ಕುಮಾರ್ ಬಂಗಾರಪ್ಪ ಹೆಸರು ಮುಂಚೂಣಿಯಲ್ಲಿದೆ.

ಉಳಿದಂತೆ, ಶಿಕ್ಷಣ ಸಚಿವರಾಗಿದ್ದ ಸುರೇಶ್ ಕುಮಾರ್ ಬದಲಿಗೆ ಬ್ರಾಹ್ಮಣ ಕೋಟಾದಿಂದ ಮೈಸೂರಿನ ಎಸ್.ಎ. ರಾಮದಾಸ್, ಬೀದರ್ ಜಿಲ್ಲೆಯ ಪ್ರಭು ಚೌಹಾಣ್ ಬದಲಿಗೆ ಪಿ.ರಾಜೀವ್ ಹೆಸರು ಕೇಳಿಬರುತ್ತಿದೆ. ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಯಡಿಯೂರಪ್ಪ ಆಪ್ತ ರೇಣುಕಾಚಾರ್ಯ ಹೆಸರು ಕೂಡ ಪಟ್ಟಿಯಲ್ಲಿದೆ. ಆದರೆ, ಯತ್ನಾಳ್ ಮತ್ತು ರೇಣುಕಾ ಹೆಸರಿನ ಬಗ್ಗೆ ಆರೆಸ್ಸೆಸ್ ನಾಯಕರು ಒಪ್ಪಿಗೆ ನೀಡಿಲ್ಲ ಎನ್ನಲಾಗಿದೆ.

ಸತೀಶ್ ರೆಡ್ಡಿ (ಬೊಮ್ಮನಹಳ್ಳಿ), ಎಸ್.ಆರ್ ವಿಶ್ವನಾಥ್ (ಯಲಂಹಕ), ವಿ.ಸೋಮಣ್ಣ (ಗೋವಿಂದರಾಜ ನಗರ), ದುರ್ಯೋಧನ ಐಹೊಳೆ (ರಾಯಭಾಗ), ಪ್ರೀತಮ್ ಗೌಡ(ಹಾಸನ), ಮುನಿರತ್ನ (ಆರ್.ಆರ್. ನಗರ) ಹೆಸರು ಕೇಳಿಬಂದಿದೆ. ಮುನಿರತ್ನ ಕಳೆದ ಬಾರಿ ಬಿಜೆಪಿ ಸರಕಾರ ಬರಲು ಕಾರಣವಾಗಿದ್ದ ವಲಸಿಗ ಶಾಸಕರಲ್ಲಿ ಒಬ್ಬರಾಗಿದ್ದರು. ಆದರೆ, ಮುನಿರತ್ನಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಡ ಇತ್ತಾದರೂ ಅದನ್ನು ಈಡೇರಿಸಿರಲಿಲ್ಲ. ವಲಸಿಗ ಶಾಸಕರ ಪೈಕಿ ಅನೇಕರಿಗೆ ಈ ಬಾರಿ ಸಚಿವ ಸ್ಥಾನ ನೀಡದೆ, ಪ್ರಮುಖ ನಿಗಮಗಳ ಅಧ್ಯಕ್ಷ ಸ್ಥಾನ ನೀಡಿ ಸಂತೈಸಲು ಪ್ಲಾನ್ ಹಾಕಲಾಗಿದೆ.

ಉಡುಪಿ ಜಿಲ್ಲೆಯಿಂದ ಐದು ಬಾರಿಯ ಸಂಸದ ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಸಚಿವ ಸ್ಥಾನದ ಮಾತು ಕೇಳಿಬರುತ್ತಿದೆ. ಆದರೆ, ಅದಿನ್ನೂ ಫೈನಲ್ ಆಗಿಲ್ಲ. ಕಳೆದ ಬಾರಿ ಸಚಿವರಾಗಿದ್ದ ಅಂಗಾರ ಬದಲಿಗೆ ಮೀಸಲು ಕೋಟಾದಲ್ಲಿ ಮೂಡಿಗೆರೆ ಶಾಸಕ ಕುಮಾರಸ್ವಾಮಿಗೆ ಸಚಿವ ಸ್ಥಾನ ಸಿಗಲಿದೆ ಎನ್ನಲಾಗುತ್ತಿದೆ. ಉಡುಪಿಯಿಂದ ಕೋಟಾ ಶ್ರೀನಿವಾಸ ಪೂಜಾರಿ ಬದಲಿಗೆ ಬಿಲ್ಲವ ಕೋಟಾದಿಂದ ಸುನಿಲ್ ಕುಮಾರ್ ಗೆ ಸ್ಥಾನ ನೀಡುವ ಪ್ಲಾನ್ ಇದೆ.

ಮೊದಲ ಬಾರಿಗೆ ಶಾಸಕರಾಗಿರುವ ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮತ್ತು ಬಿ.ಎಲ್. ಸಂತೋಷ್ ಬಣಕ್ಕೆ ಹತ್ತಿರವಾಗಿದ್ದವರು. ಮೊದಲ ಬಾರಿಗೆ ಶಾಸಕನಾಗಿದ್ದರೂ, ದಕ್ಷಿಣ ಕನ್ನಡ ಜಿಲ್ಲೆಯಿಂದ ಒಬ್ಬರಿಗೆ ಸಚಿವ ಸ್ಥಾನ ನೀಡಬೇಕೆಂಬ ನೆಲೆಯಲ್ಲಿ ಅವರ ಹೆಸರನ್ನು ಅಂತಿಮ ಮಾಡಲಾಗಿದೆ ಎನ್ನುವ ಮಾಹಿತಿಗಳಿವೆ. ಕಾರವಾರದಿಂದ ರೂಪಾಲಿ ನಾಯ್ಕರಿಗೆ ಮಹಿಳಾ ಕೋಟಾದಲ್ಲಿ ಸ್ಥಾನ ಸಿಗಲಿದೆ ಎನ್ನಲಾಗುತ್ತಿದೆ. ಬಹುತೇಕ 22 ಮಂದಿಯ ಲಿಸ್ಟ್ ದೆಹಲಿ ಮಟ್ಟದಲ್ಲಿ ಅಂತಿಮಗೊಂಡಿದೆ ಎನ್ನುವ ಮಾಹಿತಿಯಿದೆ. ಇತ್ತೀಚೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರ ಆಡಿಯೋದಲ್ಲಿ ಫುಲ್ ಹೊಸ ಟೀಮ್ ಬರಲಿದೆ ಎಂದು ಹೇಳಿದ್ದ ಮಾಹಿತಿಗಳಿದ್ದವು. ಅದೇ ಆಧಾರದಲ್ಲಿ ಬೊಮ್ಮಾಯಿ ಸಂಪುಟಕ್ಕೆ ಪೂರ್ತಿ ಹೊಸ ತಂಡ ಬರಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. 

Karnataka Cabinet Expansion MLA Bharath Shetty Sunil and Kumar Bangarappa in the race for post. Karnataka chief minister Basavaraj Bommai on Thursday hinted at a delay in the state cabinet’s expansion and said that the decision regarding it will be taken following his meeting with the Bharatiya Janata Party’s (BJP) central leadership in Delhi.