ಅಟಲ್ ಕನಸು ನನಸು ;  ಮನಾಲಿಯಲ್ಲಿ 9 ಕಿಮೀ ಉದ್ದದ ವಿಶ್ವದ ಅತಿ ಉದ್ದದ ಸುರಂಗ ಹೆದ್ದಾರಿ ಸಿದ್ಧ ! 

02-10-20 09:57 pm       Headline Karnataka News Network   ದೇಶ - ವಿದೇಶ

ವಿಶ್ವದ ಅತೀ ಉದ್ದದ ಸುರಂಗ ಹೆದ್ದಾರಿ ಎನಿಸಿಕೊಂಡ 9 ಕಿಮೀ ಉದ್ದದ ಅಟಲ್ ರೋಹ್ಟಾಂಗ್ ಸುರಂಗ ಮಾರ್ಗವನ್ನು ಅಕ್ಟೋಬರ್ 3 ರಂದು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. 

ಶಿಮ್ಲಾ, ಅಕ್ಟೋಬರ್ 02: ವಿಶ್ವದ ಅತೀ ಉದ್ದದ ಸುರಂಗ ಹೆದ್ದಾರಿ ಎನಿಸಿಕೊಂಡ 9 ಕಿಮೀ ಉದ್ದದ ಅಟಲ್ ರೋಹ್ಟಾಂಗ್ ಸುರಂಗ ಮಾರ್ಗವನ್ನು ಅಕ್ಟೋಬರ್ 3 ರಂದು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. 

ಹಿಮಾಚಲಪ್ರದೇಶದ ರೋಹ್ಟಂಗ್‌ನಲ್ಲಿರುವ ಈ ಸರ್ವಋತು ಸುರಂಗವನ್ನು ಪ್ರಧಾನಿ ಮೋದಿ ಅವರು ಉದ್ಘಾಟಿಸಿದ ಬಳಿಕ ಸೋಲನ್‌ ಕಣಿವೆ ಹಾಗೂ ಲಹೌಲ್‌ ಸ್ಪಿಟಿ ಜಿಲ್ಲೆಯ ಸಿಸ್ಸುವಿನಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅಲ್ಲಿನ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಮಾಹಿತಿ ನೀಡಿದ್ದಾರೆ. ಎರಡೂ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಪಾಲನೆ ಆಗಲಿದ್ದು ಕೇವಲ 200 ಜನ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ. 

ಸುಮಾರು 10 ಸಾವಿರ ಅಡಿ ಎತ್ತರದಲ್ಲಿ ನಿರ್ಮಿಸಲ್ಪಟ್ಟಿರುವ ವಿಶ್ವದ ಅತಿ ಉದ್ದವಾದ ಹೆದ್ದಾರಿ ಎಂಬ ಹೆಗ್ಗಳಿಕೆಗೆ ಅಟಲ್ ಸುರಂಗ ಮಾರ್ಗ ಪಾತ್ರವಾಗಿದೆ. ಈ ಸುರಂಗದಿಂದಾಗಿ ಮನಾಲಿ- ಲೇಹ್ ನಡುವಿನ ಪ್ರಯಾಣದ ಅಂತರ 46 ಕಿ.ಮೀನಷ್ಟು ಕಡಿಮೆಯಾಗಲಿದ್ದು 4 ಗಂಟೆಗಳ ಉಳಿತಾಯವಾಗಲಿದೆ. 

ಮನಾಲಿಯಲ್ಲಿ ಭಾರೀ ಹಿಮಪಾತವಾಗುವ ಕಾರಣ ಇಲ್ಲಿ ರಸ್ತೆ ಸಂಚಾರ ಕೇವಲ ಆರು ತಿಂಗಳು ಮಾತ್ರ ಸಾಧ್ಯವಿತ್ತು. ಆದರೆ ಇದೀಗ ಸುರಂಗ ಮಾರ್ಗದಿಂದಾಗಿ ಮನಾಲಿಯಿಂದ ಲಹೌಲ್ ಸ್ಪಿಟಿ  ಕಣಿವೆಯನ್ನು ವರ್ಷವಿಡಿ ಸಂಪರ್ಕ ಸಾಧಿಸಲು ಅನುಕೂಲವಾಗಲಿದೆ. ಈ ಸುರಂಗ ಮಾರ್ಗದಲ್ಲಿ ಪ್ರತಿ 60 ಮೀಟರಿಗೆ  ಸಿಸಿಟಿವಿ ಕ್ಯಾಮೆರಾಗಳಿದ್ದು, ಸುರಂಗದ ಒಳಗೆ ಪ್ರತಿ 500 ಮೀಟರ್ ಅಂತರದಲ್ಲಿ ತುರ್ತು ನಿರ್ಗಮನ ದ್ವಾರಗಳನ್ನು ನಿರ್ಮಿಸಲಾಗಿದೆ. 

ವಾಜಪೇಯಿ ಪ್ರಧಾನಿ ಆಗಿದ್ದಾಗ ಈ ಸುರಂಗ ಮಾರ್ಗ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದರು. ಅಟಲ್ ಕನಸಿನ ಯೋಜ‌ನೆ ಆಗಿದ್ದರಿಂದ ಸುರಂಗ ಮಾರ್ಗಕ್ಕೆ ಅಟಲ್ ಹೆಸರನ್ನೇ ಇಡಲಾಗಿದೆ. ಇದಲ್ಲದೆ, ಈ ಸುರಂಗ ಮಾರ್ಗದಿಂದಾಗಿ ಚೀನಾ ಗಡಿಭಾಗದಲ್ಲಿ ಲಡಾಖ್ ಪ್ರಾಂತ್ಯದ ಮೇಲೆ ಭಾರತ ತನ್ನ ಹಿಡಿತವನ್ನು ಇನ್ನಷ್ಟು ಬಲಪಡಿಸಲು ಸಾಧ್ಯವಾಗಲಿದೆ.