ಉಪ್ಪಳ ಬೇಕೂರಿನ ಶಾಲೆಯಲ್ಲಿ ವಿಜ್ಞಾನ ಮೇಳ ; ಮಕ್ಕಳ ಮೇಲೆ ಕುಸಿದು ಬಿದ್ದ ತಗಡಿನ ಚಪ್ಪರ, ಹಲವರಿಗೆ ಗಾಯ

21-10-22 05:46 pm       HK News Desk   ದೇಶ - ವಿದೇಶ

ಉಪ್ಪಳದ ಬೇಕೂರಿನ ಸರಕಾರಿ ಶಾಲೆಯಲ್ಲಿ ಮಂಜೇಶ್ವರ ಉಪಜಿಲ್ಲಾ ವಿಜ್ಞಾನ ಮೇಳ ನಡೆಯುತ್ತಿದ್ದಾಗ ಹಾಕಿದ್ದ ತಗಡು ಶೀಟಿನ ಚಪ್ಪರ ಕುಸಿದು ಬಿದ್ದ ಘಟನೆ ನಡೆದಿದ್ದು 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಕಾಸರಗೋಡು, ಅ.21: ಉಪ್ಪಳದ ಬೇಕೂರಿನ ಸರಕಾರಿ ಶಾಲೆಯಲ್ಲಿ ಮಂಜೇಶ್ವರ ಉಪಜಿಲ್ಲಾ ವಿಜ್ಞಾನ ಮೇಳ ನಡೆಯುತ್ತಿದ್ದಾಗ ಹಾಕಿದ್ದ ತಗಡು ಶೀಟಿನ ಚಪ್ಪರ ಕುಸಿದು ಬಿದ್ದ ಘಟನೆ ನಡೆದಿದ್ದು 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಶುಕ್ರವಾರ ಮಧ್ಯಾಹ್ನ ಘಟನೆ ನಡೆದಿದ್ದು, ಊಟದ ಸಮಯದಲ್ಲಿ ಗಾಳಿಗೆ ತಗಡಿನ ಶೀಟು ಹಾಕಿದ್ದ ಚಪ್ಪರ ಕುಸಿದು ಬಿದ್ದಿದೆ ಎನ್ನಲಾಗುತ್ತಿದೆ. ಮುಖ್ಯ ಕಾರ್ಯಕ್ರಮದ ವೇದಿಕೆ ಇರುವಲ್ಲಿಯೇ ಚಪ್ಪರ ಕುಸಿದು ಬಿದ್ದಿದೆ. ಎರಡು ಕಡೆ ಪ್ರತ್ಯೇಕವಾಗಿ ಊಟದ ವ್ಯವಸ್ಥೆ ಮಾಡಿದ್ದರಿಂದ ಕಾರ್ಯಕ್ರಮದ ವೇದಿಕೆಯಲ್ಲಿ ಹೆಚ್ಚು ಮಕ್ಕಳಿರಲಿಲ್ಲ. ಹೆಚ್ಚಿನ ಮಕ್ಕಳು ಊಟಕ್ಕೆ ಹೋಗಿದ್ದರು ಮತ್ತು ಶುಕ್ರವಾರ ಆಗಿದ್ದರಿಂದ ಮುಸ್ಲಿಮ್ ಮಕ್ಕಳು ಮಸೀದಿಗೆ ತೆರಳಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಇಬ್ಬರು ಮಕ್ಕಳು ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಸೇರಿಸಿದ್ದಾರೆ. ಅದರಲ್ಲಿ ಒಬ್ಬ ವಿದ್ಯಾರ್ಥಿ ಕೊಡ್ಲಮೊಗರು ವಾಣಿ ವಿಜಯ ಹೈಸ್ಕೂಲಿನ ವಿದ್ಯಾರ್ಥಿಯೆಂದು ಹೇಳಲಾಗುತ್ತಿದೆ. ಘಟನೆಯಲ್ಲಿ ಮಕ್ಕಳು, ಶಿಕ್ಷಕಿಯರು ಕೂಡ ಗಾಯಗೊಂಡಿದ್ದಾರೆ. ಹನ್ನೊಂದು ಶಾಲೆಗಳ ಮಕ್ಕಳು ವಿಜ್ಞಾನ ಮೇಳದಲ್ಲಿ ಪಾಲ್ಗೊಂಡಿದ್ದರು. ಇದಕ್ಕಾಗಿ 500ಕ್ಕೂ ಹೆಚ್ಚು ಮಕ್ಕಳು ಕುಳಿತುಕೊಳ್ಳಲು ಸಾಧ್ಯವಾಗುವಂತೆ ಮೈದಾನದಲ್ಲಿ ಬೃಹತ್ ಚಪ್ಪರ ಹಾಕಲಾಗಿತ್ತು. ಕಬ್ಬಿಣದ ಶೀಟಿನ ಚಪ್ಪರ ಆಗಿದ್ದರಿಂದ ಅದಕ್ಕೆ ಸೂಕ್ತ ಭದ್ರತೆ ಮಾಡಿರಲಿಲ್ಲ ಎನ್ನಲಾಗುತ್ತಿದೆ. ಶಾಮಿಯಾನ ಸಿಬಂದಿಯ ಎಡವಟ್ಟಿನಿಂದಾಗಿ ಚಪ್ಪರ ಕುಸಿದು ಬಿದ್ದಿದೆ ಎನ್ನುವುದನ್ನು ಸ್ಥಳೀಯರು ಹೇಳುತ್ತಾರೆ.

ಚಪ್ಪರ ಕುಸಿದು ಬೀಳುತ್ತಲೇ ಇದರ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಮಕ್ಕಳ ಪೋಷಕರು ಶಾಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಬೆನ್ನಲ್ಲೇ ಕಾಸರಗೋಡು ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದಿದ್ದು, ಪರಿಶೀಲನೆ ನಡೆಸಿದ್ದಾರೆ.

Kasaragod Uppala Government school sheet collapses, more than 20 students injured.