ಮಾಜಿ ಪೋಪ್ 16ನೇ ಬೆನೆಡಿಕ್ಟ್ ನಿಧನ ; ಚರ್ಚ್ ಮುಖ್ಯಸ್ಥ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಮೊದಲ ಧರ್ಮಗುರು 

31-12-22 07:17 pm       HK News Desk   ದೇಶ - ವಿದೇಶ

2013ರಲ್ಲಿ ಕ್ಯಾಥೋಲಿಕ್ ಚರ್ಚುಗಳ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೊದಲ ಧರ್ಮಗುರು, ಮಾಜಿ ಪೋಪ್ ಬೆನೆಡಿಕ್ಟ್ XVI ಶನಿವಾರ ನಿಧನರಾಗಿದ್ದಾರೆ.

ವ್ಯಾಟಿಕನ್ ಸಿಟಿ, ಡಿ.31 : 2013ರಲ್ಲಿ ಕ್ಯಾಥೋಲಿಕ್ ಚರ್ಚುಗಳ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೊದಲ ಧರ್ಮಗುರು, ಮಾಜಿ ಪೋಪ್ ಬೆನೆಡಿಕ್ಟ್ XVI ಶನಿವಾರ ನಿಧನರಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 95 ವಯಸ್ಸಿನ ಬೆನೆಡಿಕ್ಟ್ XVI ಅವರು ವ್ಯಾಟಿಕನ್‌ನ ಮೇಟರ್ ಎಕ್ಲೆಸೀಯೆ ಮಾನೆಸ್ಟರಿಯಲ್ಲಿ ಇಂದು ಬೆಳಗ್ಗೆ 9.40ಕ್ಕೆ ನಿಧನರಾದರು ಎಂದು ವ್ಯಾಟಿಕನ್ ವಕ್ತಾರ ಮ್ಯಾಟಿಯೊ ಬ್ರೂನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಶ್ರಾಂತ ಪೋಪ್ ಬೆನೆಡಿಕ್ಟ್ ಅವರ ಪಾರ್ಥಿವ ಶರೀರವನ್ನು ಜನವರಿ 2ರಿಂದ ಸೇಂಟ್ ಪೀಟರ್ಸ್ ಬೆಸಿಲಿಯಾದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುತ್ತದೆ. 5ರಂದು ಅಂತ್ಯಕ್ರಿಯೆ ನಡೆಯಲಿದೆ ಎಂದು ವ್ಯಾಟಿಕನ್ ತಿಳಿಸಿದೆ. ಜರ್ಮನಿ ಮೂಲದ ಪೋಪ್ ಎಮೆರಿಟಸ್ ಬೆನೆಡಿಕ್ಟ್ ಅವರ ಮೂಲ ಹೆಸರು ಜೋಸೆಫ್ ರಟ್ಜಿಂಗರ್ ಆಗಿತ್ತು. ಫೆಬ್ರವರಿ 2013 ರಲ್ಲಿ ಅನಾರೋಗ್ಯದ ಕಾರಣ ನೀಡಿ ಬೆನೆಡಿಕ್ಟ್ ಅವರು ಪೋಪ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ಅವಧಿಯಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಆರೋಪವೂ ಕೇಳಿಬಂದಿತ್ತು. 

ವಿವಾದಾತ್ಮಕ ಕ್ರೈಸ್ತ ಧರ್ಮ ಗುರುವಾಗಿದ್ದ ಮಾಜಿ ಪೋಪ್ ಬೆನೆಡಿಕ್ಟ್ ಅವರು ಅನೇಕ ಹಗರಣಗಳಲ್ಲಿ ಸಿಲುಕಿದ್ದರು. ಲೈಂಗಿಕ ದೌರ್ಜನ್ಯದ ಹಗರಣ, ದುರಾಡಳಿತದ ಆರೋಪಗಳು ಮತ್ತು ಸಂಪ್ರದಾಯವಾದಿಗಳು ಹಾಗೂ ಪ್ರಗತಿಪರರ ಧ್ರುವೀಕರಣದಂತಹ ಚಟುವಟಿಕೆಗಳಿಂದ ಟೀಕೆಗೆ ಗುರಿಯಾಗಿದ್ದರು.

Benedict XVI, the pope who shocked the world by stepping down from the leadership of the Roman Catholic Church in 2013, has died at the age of 95. The Vatican announced his death on Saturday.