ಬಿರಿಯಾನಿ ತಿಂದು ವಿದ್ಯಾರ್ಥಿನಿ ಸಾವು ಪ್ರಕರಣ ; ಹೊಟೇಲಿಗೆ ಬೀಗ, ಮಾಲೀಕ ಸೇರಿ ಮೂವರು ಪೊಲೀಸರ ವಶಕ್ಕೆ 

08-01-23 06:00 pm       HK News Desk   ದೇಶ - ವಿದೇಶ

ಬಿರಿಯಾನಿ ತಿಂದು 19 ವರ್ಷದ ಯುವತಿ ಸಾವನ್ನಪ್ಪಿದ ಪ್ರಕರಣ ಕೇರಳದಲ್ಲಿ ಸಂಚಲನ ಸೃಷ್ಟಿಸಿದೆ. ಕುಜಿಮಂತಿ ಎನ್ನುವ ಕೇರಳದ ವಿಶೇಷ ಮಾದರಿಯ ಬಿರಿಯಾನಿ ತಿಂದ ಬಳಿಕ ಅಂಜುಶ್ರೀ ಸೇರಿದಂತೆ ಕುಟುಂಬದ ನಾಲ್ವರು ಅಸ್ವಸ್ಥರಾಗಿದ್ದರು.

ಕಾಸರಗೋಡು, ಜ.8 : ಬಿರಿಯಾನಿ ತಿಂದು 19 ವರ್ಷದ ಯುವತಿ ಸಾವನ್ನಪ್ಪಿದ ಪ್ರಕರಣ ಕೇರಳದಲ್ಲಿ ಸಂಚಲನ ಸೃಷ್ಟಿಸಿದೆ. ಕುಜಿಮಂತಿ ಎನ್ನುವ ಕೇರಳದ ವಿಶೇಷ ಮಾದರಿಯ ಬಿರಿಯಾನಿ ತಿಂದ ಬಳಿಕ ಅಂಜುಶ್ರೀ ಸೇರಿದಂತೆ ಕುಟುಂಬದ ನಾಲ್ವರು ಅಸ್ವಸ್ಥರಾಗಿದ್ದರು. ಆದರೆ ಅಂಜುಶ್ರೀ ಮಾತ್ರ ದುರಂತ ಸಾವು ಕಂಡಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. 

ಅಂಜುಶ್ರೀ ಮತ್ತು ಆಕೆಯ ಸ್ನೇಹಿತರು ಡಿಸೆಂಬರ್ 31 ರಂದು ಉದುಮದ ಅಲ್ ರೊಮ್ಯಾನ್ಸಿಯಾ ಹೋಟೆಲ್‌ನಿಂದ ಕೇರಳದ ವಿಶೇಷ ಬಿರಿಯಾನಿ ಕುಜಿಮಂತಿಯನ್ನು ಆರ್ಡರ್ ಮಾಡಿದ್ದರು. ಆಕೆಯ ಸೋದರಿ ಅನುಶ್ರೀ ಪ್ರಕಾರ, ಅಂಜು ಸೇರಿ ನಾಲ್ಕು ಜನ ಬಿರಿಯಾನಿ ಸೇವಿಸಿದ್ದಾರೆ ಮತ್ತು ಅವರಲ್ಲಿ ಇಬ್ಬರಿಗೆ ತಕ್ಷಣ ವಾಂತಿ ಮತ್ತು ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಅಂಜುಶ್ರೀ ಅಸ್ವಸ್ಥಗೊಂಡಿದ್ದರಿಂದ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಾಥಮಿಕ ಚಿಕಿತ್ಸೆ ಬಳಿಕ ಆಕೆ ಮನೆಗೆ ಮರಳಿದ್ದಳು. ಆದರೆ, ಶುಕ್ರವಾರ ಬೆಳಗ್ಗೆ ಮತ್ತೆ ಪ್ರಜ್ಞಾಹೀನಳಾಗಿದ್ದು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಶನಿವಾರ ಚಿಕಿತ್ಸೆ ಫಲಿಸದೇ ಅಂಜು ಕೊನೆಯುಸಿರೆಳೆದಳು. 

ಘಟನೆಗೆ ಸಂಬಂಧಿಸಿದಂತೆ ಅಲ್ ರೊಮ್ಯಾನ್ಸಿಯಾ ಹೋಟೆಲ್ ಮಾಲೀಕ ಸೇರಿದಂತೆ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಆಹಾರ ಸುರಕ್ಷತಾ ಇಲಾಖೆ ಹೊಟೇಲ್‌ಗೆ ಬೀಗ ಹಾಕಿ ಸೀಲ್ ಮಾಡಿದೆ. ಅಂಜು ಕುಟುಂಬ ನೀಡಿದ ದೂರಿನ ಮೇರೆಗೆ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯ ಬಗ್ಗೆ ಕುತೂಹಲ ಮೂಡಿದ್ದು ಬಿರಿಯಾನಿಯಲ್ಲಿ ಏನಿದ್ದಿರಬಹುದು ಎಂಬ ಬಗ್ಗೆ ಕುತೂಹಲ ಇದೆ. ವರದಿ ಆಧರಿಸಿ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ.

Kerala Woman dies after eating Biryani, three including restaurant owner taken to custody.