ಭಾರತಿ ಶಿಪ್ ಯಾರ್ಡ್ ಅಂತೂ 75 ಕೋಟಿಗೆ ಬಿಕರಿ ; ಮಂಗಳೂರಿಗೆ ಬರಲಿದೆ ಚೌಗುಲೆ ಹಡಗು ನಿರ್ಮಾಣ ಕಂಪನಿ  

28-09-22 08:18 pm       Mangalore Correspondent   ಕರಾವಳಿ

ಒಂದು ಕಾಲದಲ್ಲಿ ದೇಶದ ಎರಡನೇ ಅತಿದೊಡ್ಡ ಹಡಗು ನಿರ್ಮಾಣ ಯಾರ್ಡ್ ಆಗಿದ್ದ ಮಂಗಳೂರಿನ ಭಾರತಿ ಡಿಫೆನ್ಸ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಕಂಪನಿ ಅಂತೂ ಮಾರಾಟಕ್ಕೆ ಸಿದ್ಧಗೊಂಡಿದೆ.

ಮಂಗಳೂರು, ಸೆ.28: ಒಂದು ಕಾಲದಲ್ಲಿ ದೇಶದ ಎರಡನೇ ಅತಿದೊಡ್ಡ ಹಡಗು ನಿರ್ಮಾಣ ಯಾರ್ಡ್ ಆಗಿದ್ದ ಮಂಗಳೂರಿನ ಭಾರತಿ ಡಿಫೆನ್ಸ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಕಂಪನಿ ಅಂತೂ ಮಾರಾಟಕ್ಕೆ ಸಿದ್ಧಗೊಂಡಿದೆ. ಸಾಲದ ಸುಳಿಗೆ ಸಿಲುಕಿ ದಿವಾಳಿಯಾಗಿದ್ದ ಭಾರತಿ ಶಿಪ್ ಯಾರ್ಡ್ ಕಂಪನಿ ಹತ್ತು ವರ್ಷಗಳಿಂದ ಮಂಗಳೂರಿನಲ್ಲಿ ವಹಿವಾಟು ನಿಲ್ಲಿಸಿತ್ತು. ಇದೀಗ ಗೋವಾ ಮೂಲದ ಚೌಗುಲೆ ಹಡಗು ನಿರ್ಮಾಣ ಕಂಪನಿಯವರು ಕೇವಲ 75 ಕೋಟಿಗೆ ಖರೀದಿಸಲು ಮುಂದಾಗಿದ್ದಾರೆ.

ಮಂಗಳೂರಿನ ತಣ್ಣೀರುಬಾವಿಯಲ್ಲಿ ರಾಜ್ಯ ಸರಕಾರದಿಂದ ಲೀಸಿಗೆ 50 ಎಕ್ರೆ ಜಾಗ ಪಡೆದು 1973ರಲ್ಲಿ ಆರಂಭಗೊಂಡಿದ್ದ ಭಾರತಿ ಶಿಪ್ ಯಾರ್ಡ್ ಮೊದಲಿಗೆ ದೇಶದ ಮುಂಚೂಣಿ ಹಡಗು ನಿರ್ಮಾಣ ಕೇಂದ್ರಗಳಲ್ಲಿ ಒಂದೆನಿಸಿತ್ತು. 90ರ ದಶಕದ ನಂತರ ನಷ್ಟಕ್ಕೆ ಗುರಿಯಾಗಿದ್ದ ಕಂಪನಿಯು ಕೋಟ್ಯಂತರ ರೂಪಾಯಿ ಸಾಲದಿಂದಾಗಿ ಸಾಲದ ಸುಳಿಗೆ ಸಿಲುಕಿತ್ತು. ಮುಂಬೈ, ರತ್ನಗಿರಿಯಲ್ಲೂ ಇದೇ ಕಂಪನಿ ಶಿಪ್ ಯಾರ್ಡ್ ಹೊಂದಿದ್ದು, ದೇಶದ ಪ್ರತಿಷ್ಠಿತ ಕಂಪನಿಗಳಿಗೆ ಹಡಗು ನಿರ್ಮಿಸಿ ಕೊಡುವುದು, ಹಳೆ ಹಡಗುಗಳನ್ನು ಒಡೆದು ಹೊಸತು ನಿರ್ಮಿಸುತ್ತಿದ್ದುದರಿಂದ ವಹಿವಾಟು ತೋರಿಸಿ ನೂರಾರು ಕೋಟಿ ಸಾಲ ಪಡೆದಿತ್ತು. 2010ರ ವೇಳೆಗೆ ಮಂಗಳೂರಿನ ಶಿಪ್ ಯಾರ್ಡ್ ನಲ್ಲಿ ಬಹುತೇಕ ಕೆಲಸಗಳು ಸ್ಥಗಿತ ಆಗಿದ್ದವು. ಸಬ್ ಕಾಂಟ್ರಾಕ್ಟ್ ಪಡೆದು ಕಾಮಗಾರಿ ನಡೆಸುತ್ತಿದ್ದವರಿಗೂ ಹಣ ಪಾವತಿ ಮಾಡದೆ ಕಂಪನಿ ವಿರುದ್ಧವೇ ಲಾ ಟ್ರಿಬ್ಯುನಲ್ ನಲ್ಲಿ ಕೇಸು ದಾಖಲಾಗಿತ್ತು. ಅದಕ್ಕೂ ಮೊದಲು ಆರು ಸಾವಿರಕ್ಕೂ ಹೆಚ್ಚು ನೌಕರರು ಅಲ್ಲಿ ದುಡಿಯುತ್ತಿದ್ದರು ಎನ್ನುವ ಮಾಹಿತಿಗಳಿವೆ.

ಆನಂತರ, ನೌಕರರಿಗೆ ಹಣ ಕೊಡದೇ ಇದ್ದುದರಿಂದ ಮತ್ತು ಕಂಪನಿ ಕಾಮಗಾರಿ ಸ್ಥಗಿತಗೊಳಿಸಿದ್ದರಿಂದ ಭಾರತಿ ಶಿಪ್ ಯಾರ್ಡ್ ಬಹುತೇಕ ಪಾಳು ಬಿದ್ದ ಸ್ಥಿತಿಗೆ ತಲುಪಿತ್ತು. ಆದರೆ ಕಂಪನಿಗೆ ಸೇರಿದ ಮೆಷಿನರಿ ಸೇರಿದಂತೆ ವಿವಿಧ ಆಸ್ತಿಗಳು ಅಲ್ಲಿದ್ದವು. ಬ್ಯಾಂಕ್ ಸಾಲ ಪಡೆದು ಕಂಪನಿ ದಿವಾಳಿಯಾಗಿದ್ದರಿಂದ ಸರಕಾರದ ನಿಯಮದಂತೆ ಆಸ್ತಿಯನ್ನು ಮಾರಾಟ ಮಾಡುವ ಪ್ರಕ್ರಿಯೆಗೆ ಟ್ರಿಬ್ಯುನಲ್ ಮುಂದಾಗಿತ್ತು. ಇದೀಗ ಲಾ ಟ್ರಿಬ್ಯುನಲ್ ಸೂಚನೆಯಂತೆ ಬಿಡ್ ಕರೆಯಲಾಗಿದ್ದು, ಗೋವಾ ಮೂಲದ ಚೌಗುಲೆ ಕಂಪನಿಯವರು ಬಿಡ್ ಹಾಕಿದ್ದು ಸ್ವೀಕೃತವಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚೌಗುಲೆ ಕಂಪನಿಯ ಎಕ್ಸಿಕ್ಯುಟಿವ್ ಡೈರೆಕ್ಟರ್ ಅರ್ಜುನ್ ಚೌಗುಲೆ, ನಾವು ಮಂಗಳೂರು ಯಾರ್ಡ್ ಪಡೆಯಲು ಬಿಡ್ ಮಾಡಿದ್ದು, ಅದು ಸ್ವೀಕೃತವಾಗಿದೆ. ಲಾ ಟ್ರಿಬ್ಯುನಲ್ ನಲ್ಲಿ ಕಾನೂನು ಹೋರಾಟ ಇರುವುದರಿಂದ ಅಂತಿಮ ಕ್ಲಿಯರೆನ್ಸ್ ಇನ್ನಷ್ಟೇ ಆಗಬೇಕಾಗಿದೆ ಎಂದಿದ್ದಾರೆ.

ಚೌಗುಲೆ ಕುಟುಂಬದ ಒಡೆತನದಲ್ಲಿರುವ ಚೌಗುಲೆ ಕಂಪನಿ 1916ರಲ್ಲಿ ಸ್ಥಾಪಿತವಾಗಿದ್ದು, ವಿವಿಧ ಕಡೆ ಹಡಗು ನಿರ್ಮಾಣದಲ್ಲಿ ತೊಡಗಿಕೊಂಡಿದೆ. ಕೆಲವು ವಾರಗಳಲ್ಲಿ ಮಂಗಳೂರು ಶಿಪ್ ಯಾರ್ಡ್ ಕುರಿತ ಡೀಲ್ ಫೈನಲ್ ಆಗಲಿದ್ದು, ಎಲ್ಲವೂ ಅಂದ್ಕೊಂಡಂತೆ ಆದಲ್ಲಿ ಮಂಗಳೂರಿನ ತಣ್ಣೀರುಬಾವಿಯಲ್ಲಿರುವ 50 ಎಕರೆ ವ್ಯಾಪ್ತಿಯಲ್ಲಿ ಸುಸಜ್ಜಿತ ಶಿಪ್ ಯಾರ್ಡ್ ಮತ್ತೆ ಕಾರ್ಯಾರಂಭ ಆಗಲಿದೆ. ಲೀಸ್ ಒಪ್ಪಂದ ಪ್ರಕಾರ, 200 ಮೀಟರ್ ವ್ಯಾಪ್ತಿಯ ಗುರುಪುರ ನದಿ ನೀರಿನಲ್ಲಿ ಹಡಗು ನಿರ್ಮಾಣಕ್ಕೆ ತೊಡಗಿಸಿಕೊಳ್ಳುವುದಕ್ಕೂ ಅವಕಾಶಗಳಿವೆ.

Chowgule and Company - Shipbuilding Division | LinkedIn

ಇಲೆಕ್ಟ್ರಿಕ್ ಹೈಬ್ರಿಡ್ ಹಡಗು ನಿರ್ಮಾಣ ಗುತ್ತಿಗೆ

ಈಗಾಗಲೇ ಸ್ವೀಡನ್ ಕಂಪನಿಯಿಂದ ಇಲೆಕ್ಟ್ರಿಕ್ ಹೈಬ್ರಿಡ್ ಬಹೂಪಯೋಗಿ ಕಾರ್ಗೋ ಕ್ಯಾರಿಯರ್ ಗಳನ್ನು ನಿರ್ಮಿಸಲು ಚೌಗುಲೆ ಕಂಪನಿಯವರು ಗುತ್ತಿಗೆ ಪಡೆದಿದ್ದಾರೆ. ಇದಲ್ಲದೆ, ಡಚ್ ಕಂಪನಿಯಿಂದಲೂ ಇದೇ ರೀತಿಯ ಇಲೆಕ್ಟ್ರಿಕ್ ಹೈಬ್ರಿಡ್ ವೆಹಿಕಲ್ ನಿರ್ಮಾಣಕ್ಕೆ ಗುತ್ತಿಗೆ ಸಿಕ್ಕಿದೆ. ಸ್ವೀಡನ್ ಮೂಲದ ಫಿನ್ಲೇಂಡ್ಸ್ ಇಎಸ್ಎಲ್ ಶಿಪ್ಪಿಂಗ್ ಲಿಮಿಟೆಡ್ ಕಂಪನಿಯು 2021ರ ಸೆಪ್ಟಂಬರ್ ನಲ್ಲಿ ಚೌಗುಲೆ ಕಂಪನಿಯ ಜೊತೆಗೆ 70 ಮಿಲಿಯನ್ ಯೂರೋ ಮೌಲ್ಯದ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ, ಚೌಗುಲೆ ಕಂಪನಿಯು ಏಳು ಇಲೆಕ್ಟ್ರಿಕ್ ಕಾರ್ಗೋ ಕ್ಯಾರಿಯರ್ ಹಡಗುಗಳನ್ನು ನಿರ್ಮಿಸಿ ಕೊಡಬೇಕಾಗಿದೆ. ಇಲೆಕ್ಟ್ರಿಕ್ ಕಾರ್ಗೋ ಹಡಗು ಬಳಕೆಗೆ ಬಂದಲ್ಲಿ ಈಗ ಇರುವ ಇಂಧನ ಬಳಕೆಯ ಹಡಗುಗಳಿಗೆ ಹೋಲಿಸಿದರೆ 50 ಶೇಕಡಾ ಮಾಲಿನ್ಯ ತಗ್ಗಲಿದೆ. ಚೌಗುಲೆ ಕಂಪನಿಯ ಗೋವಾ ಘಟಕದಲ್ಲಿ ಮೊದಲ ಎರಡು ಇಲೆಕ್ಟ್ರಿಕ್ ಹಡಗು ರೆಡಿಯಾಗುತ್ತಿದ್ದು, 2023ರಲ್ಲಿ ಒಂದು ಹಡಗನ್ನು ಡೆಲಿವರಿ ಮಾಡುವ ಉದ್ದೇಶವನ್ನು ಚೌಗುಲೆ ಕಂಪನಿ ಹೊಂದಿದೆ.

Goa-based shipbuilder Chowgule and Company Pvt Ltd is set to acquire the Mangalore shipyard of bankrupt shipbuilder Bharati Defence and Infrastructure Ltd for Rs 75 crore in a private deal under India’s bankruptcy law, multiple sources said. Bharati Defence and Infrastructure is undergoing liquidation through private sale of specified assets after the corporate insolvency resolution process (CIRP) failed to find a buyer for what was once India’s second biggest private yard with multiple facilities spread across the western and eastern seaboards.