ವಿಧಾನ ಪರಿಷತ್ತಿನ ಬಿ.ಕೆ.ಹರಿಪ್ರಸಾದ್, ಮಂಜುನಾಥ ಭಂಡಾರಿ ಸಚಿವರಾಗ್ತಾರೆಯೇ ? ಜಿಲ್ಲಾ ಕಾಂಗ್ರೆಸ್ ನಾಯಕರು ಏನಂತಾರೆ ?

25-05-23 10:17 pm       Mangalore Correspondent   ಕರಾವಳಿ

ಮಂಗಳೂರಿನ ಐದು ಬಾರಿಯ ಶಾಸಕ ಯುಟಿ ಖಾದರ್ ವಿಧಾನಸಭೆ ಅಧ್ಯಕ್ಷರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ನಿಂದ ಯುಟಿ ಖಾದರ್ ಮತ್ತು ಅಶೋಕ್ ರೈ ಎರಡು ಸ್ಥಾನ ಗೆದ್ದಿರುವುದರಿಂದ ಈ ಬಾರಿ ಜಿಲ್ಲೆಯಿಂದ ಯಾರು ಸಚಿವರಾಗಲಿದ್ದಾರೆ ಎನ್ನುವ ಕುತೂಹಲ ಉಂಟಾಗಿದೆ.

ಮಂಗಳೂರು, ಮೇ 25: ಮಂಗಳೂರಿನ ಐದು ಬಾರಿಯ ಶಾಸಕ ಯುಟಿ ಖಾದರ್ ವಿಧಾನಸಭೆ ಅಧ್ಯಕ್ಷರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ನಿಂದ ಯುಟಿ ಖಾದರ್ ಮತ್ತು ಅಶೋಕ್ ರೈ ಎರಡು ಸ್ಥಾನ ಗೆದ್ದಿರುವುದರಿಂದ ಈ ಬಾರಿ ಜಿಲ್ಲೆಯಿಂದ ಯಾರು ಸಚಿವರಾಗಲಿದ್ದಾರೆ ಎನ್ನುವ ಕುತೂಹಲ ಉಂಟಾಗಿದೆ. ಜಿಲ್ಲಾ ಕಾಂಗ್ರೆಸ್ ಪ್ರಮುಖರ ಪ್ರಕಾರ, ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ನಾಯಕರಾಗಿರುವ ಬಿಕೆ ಹರಿಪ್ರಸಾದ್ ಅವರೇ ಸಚಿವರಾಗಲಿದ್ದಾರಂತೆ.  

ಆದರೆ ಕೆಲವು ಕಾಂಗ್ರೆಸ್ ನಾಯಕರು, ರಮಾನಾಥ ರೈ ಅವರನ್ನು ಮತ್ತೆ ಎಂಎಲ್ಸಿ ಮಾಡಿ ಸಚಿವ ಸ್ಥಾನಕ್ಕೆ ಏರಿಸಬೇಕು ಎನ್ನುವ ಆಗ್ರಹ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಆಪ್ತರೂ ಆಗಿರುವ ರಮಾನಾಥ ರೈಯನ್ನು ಮುಖ್ಯಮಂತ್ರಿ ಅವರೇ ಮತ್ತೆ ಸಚಿವ ಸ್ಥಾನಕ್ಕೆ ಏರಿಸಲಿದ್ದಾರೆ ಎಂದು ಹೇಳುತ್ತಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಗಟ್ಟಿಗೊಳಿಸಬೇಕಿದ್ದರೆ ರಮಾನಾಥ ರೈ ಅವರೇ ಸಚಿವರಾಗಬೇಕು. ಚುನಾವಣೆ ಸೋತರೂ, ಸದಾ ಕಾರ್ಯಕರ್ತರು, ಜನರ ಜೊತೆಗಿದ್ದ ವ್ಯಕ್ತಿಯೆಂದರೆ ರಮಾನಾಥ ರೈ ಮಾತ್ರ. ಪಕ್ಷ ಸಂಘಟನೆಯಲ್ಲೂ ರಮಾನಾಥ ರೈ ಅವರೇ ಮುಂಚೂಣಿಯಲ್ಲಿದ್ದಾರೆ ಎಂದು ಹಿರಿಯ ಕಾಂಗ್ರೆಸಿಗ ಜಯಶೀಲ ಅಡ್ಯಂತಾಯ ಹೇಳುತ್ತಾರೆ.

ಚುನಾವಣೆಗೆ ಸ್ಪರ್ಧಿಸಲು ಪಕ್ಷದಲ್ಲೇ ಅಪಸ್ವರ: ರಾಜಕೀಯ ನಿವೃತ್ತಿ ಘೋಷಿಸಿದ ರಮಾನಾಥ್ ರೈ-  Kannada Prabha

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮತ್ತು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಅವರಲ್ಲಿ ನೀವು ಸಚಿವ ಸ್ಥಾನದ ಆಕಾಂಕ್ಷಿಯೇ ಎಂದು ಕೇಳಿದ ಪ್ರಶ್ನೆಗೆ, ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ನಾವು ಬಿಕೆ ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ಕೊಡಬೇಕು ಎಂದು ಹೇಳಿದ್ದೇವೆ ಎಂದಿದ್ದಾರೆ. ಬಿಲ್ಲವ ಕೋಟಾದಲ್ಲಿ ಸಚಿವ ಸ್ಥಾನ ಕೇಳುತ್ತೀರಾ ಎಂಬ ಪ್ರಶ್ನೆಗೆ, ಜಾತಿ ಪ್ರಶ್ನೆಯಲ್ಲ, ಹರಿಪ್ರಸಾದ್ ವಿಧಾನ ಪರಿಷತ್ತಿನಲ್ಲಿ ನಮ್ಮ ನಾಯಕರಿದ್ದಾರೆ. ಅವರನ್ನೇ ಸಚಿವರನ್ನಾಗಿ ಮಾಡಿದರೆ ಇನ್ನಷ್ಟು ಬಲ ಸಿಗಲಿದೆ ಎಂದು ಹೇಳಿದ್ದಾರೆ.

ಇನ್ನೊಬ್ಬ ಜಿಲ್ಲಾ ಕಾಂಗ್ರೆಸ್ ನಾಯಕರ ಪ್ರಕಾರ, ಬಿಕೆ ಹರಿಪ್ರಸಾದ್ ಅವರು ಸಚಿವರಾಗೋದಾದ್ರೆ ಮೊನ್ನೆ ಮೊದಲ ಪಟ್ಟಿಯಲ್ಲೇ ಸಿಗಬೇಕಿತ್ತು. ಹಿರಿಯರನ್ನು ಮೊದಲ ಪಟ್ಟಿಯಲ್ಲಿ ಪರಿಗಣಿಸಿದ್ದಾರೆ. ಬಿಕೆ ಅವರಿಗೆ ಕೆಲವು ಹೈಕಮಾಂಡ್ ಮಟ್ಟದ ನಾಯಕರ ಜೊತೆಗೆ ಸರಿಯಿಲ್ಲ. ಹಾಗಾಗಿ ಅವರಿಗೆ ಸಿಗೋದು ಡೌಟು. ಮಂಜುನಾಥ ಭಂಡಾರಿ ಸಚಿವರಾಗುವ ಸಾಧ್ಯತೆಯಿದೆ ಎಂದು ಹೇಳುತ್ತಾರೆ. ಮಾಹಿತಿ ಪ್ರಕಾರ, ಮೊದಲ ಪಟ್ಟಿಯಲ್ಲಿ ಬಿಕೆ ಹರಿಪ್ರಸಾದ್ ಸಚಿವರಾಗುವುದಕ್ಕೆ ಅಡ್ಡಿಯಾಗಿದ್ದು ಸಿದ್ದರಾಮಯ್ಯ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಪ್ತರಾಗಿರುವ ಬಿಕೆ ಹರಿಪ್ರಸಾದ್ ಬಗ್ಗೆ ಸಿದ್ದರಾಮಯ್ಯ ಅವರಿಗೆ ಅಷ್ಟಕ್ಕಷ್ಟೆ. ಸಿದ್ದರಾಮಯ್ಯ ವಿರುದ್ಧ ಮತ್ತೊಬ್ಬ ಹಿಂದುಳಿದ ವರ್ಗದ ಮುಖಂಡ ಎಂದು ಬಿಂಬಿಸಲು ಹರಿಪ್ರಸಾದ್ ಅವರನ್ನು ರಾಜ್ಯ ರಾಜಕೀಯಕ್ಕೆ ತರಲಾಗಿತ್ತು. ತನ್ನ ವಿರುದ್ಧ ನಾಯಕನ ಸೃಷ್ಟಿಸಿದ್ದಲ್ಲದೆ, ತನ್ನ ಆಪ್ತ ಸಿಎಂ ಇಬ್ರಾಹಿಂ ಬಿಟ್ಟು ಬಿಕೆ ಹರಿಪ್ರಸಾದ್ ಅವರನ್ನು ವಿಧಾನ ಪರಿಷತ್ತಿನಲ್ಲಿ ವಿಪಕ್ಷ ನಾಯಕನನ್ನಾಗಿ ಮಾಡಿದ್ದೂ ಸಿದ್ದರಾಮಯ್ಯರಲ್ಲಿ ಅಸಹನೆ ಸೃಷ್ಟಿಸಿತ್ತು.

Mangaluru: Manjunath Bhandary to be Congress' candidate from DK in MLC  elections - Daijiworld.com

No moral policing in Karnataka: CM Siddaramaiah directs IPS officers |  Bengaluru - Hindustan Times

ಸಿದ್ದರಾಮಯ್ಯ ಪರವಾಗಿ ಪ್ರಬಲ ಲಿಂಗಾಯತ ಮುಖಂಡ ಎಂಬಿ ಪಾಟೀಲ್ ಇರುವಂತೆ ಡಿಕೆಶಿ ತನ್ನ ಪರವಾಗಿ ಈಡಿಗ –ಬಿಲ್ಲವ ಸಮುದಾಯದ ನಾಯಕರಾಗಿ ಬಿಕೆ ಹರಿಪ್ರಸಾದ್ ಅವರನ್ನು ಮುಂದಿಡಲಿದ್ದಾರೆ. ಹಾಗಾಗಿ, ಶತಾಯಗತಾಯ ಬಿಕೆ ಅವರನ್ನು ಸಚಿವರನ್ನಾಗಿ ಮಾಡಬೇಕೆಂದು ಡಿಕೆಶಿ ಇದ್ದಾರೆ. ಬಿಕೆ ಹರಿಪ್ರಸಾದ್ ಮತ್ತು ಮಂಜುನಾಥ ಭಂಡಾರಿ ಇಬ್ಬರೂ ದಕ್ಷಿಣ ಕನ್ನಡ ಜಿಲ್ಲೆಯವರೇ ಆಗಿರುವುದರಿಂದ ಅವರಲ್ಲಿ ಒಬ್ಬರನ್ನಷ್ಟೇ ಸಚಿವರನ್ನಾಗಿ ಮಾಡಬೇಕು. ಇದೇ ವೇಳೆ, ಪಕ್ಷ ಸಂಘಟನೆ ಕಾರಣಕ್ಕೆ ರಮಾನಾಥ ರೈಯನ್ನು ಸಚಿವರನ್ನಾಗಿ ಮಾಡಬೇಕೆಂದು ಇನ್ನೊಂದು ಬಣ ಅಹವಾಲು ಇಟ್ಟಿದೆ. ಎರಡು ಬಾರಿ ಸೋತಿರುವ ರಮಾನಾಥ ರೈ ಅವರನ್ನು ಮತ್ತೆ ವಿಧಾನ ಪರಿಷತ್ತಿಗೆ ಕಳಿಸುವ ಸಾಧ್ಯತೆ ಕಡಿಮೆಯಾಗಿದ್ದರೂ, ರಾಜಕೀಯದಲ್ಲಿ ಏನೂ ಆಗಲಾರದು ಎನ್ನುವಂತಿಲ್ಲ. ಬಿಕೆ ಹರಿಪ್ರಸಾದ್ ಮೂಲ ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದರೂ, ರಾಜಕಾರಣ ನಡೆಸಿದ್ದು ಬೆಂಗಳೂರು ಮತ್ತು ದೆಹಲಿಯಲ್ಲಿ ಮಾತ್ರ. ಹಾಗಾಗಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯವರೆಂದು ತೋರಿಸಬೇಕಿಲ್ಲ ಎಂಬುದು ಇನ್ನು ಕೆಲವರ ಅನಿಸಿಕೆ. ಒಟ್ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಯಾರು ಸಚಿವರಾಗಲಿದ್ದಾರೆ ಎಂಬುದು ಸದ್ಯದ ಕುತೂಹಲ.

Will B K Hariprasad or Manjunath Bhandary bag Minister post,  Mangalore Congress leaders opinion report.