BJP Protest Mangalore: ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಮೆಟ್ಟಿಲಲ್ಲಿ ಕುಳಿತು ಬಿಜೆಪಿ ಶಾಸಕರ ಧರಣಿ, ಜಿಲ್ಲಾಧಿಕಾರಿಯೇ ಟಾರ್ಗೆಟ್ ! 

14-08-23 12:22 pm       Mangalore Correspondent   ಕರಾವಳಿ

ಕಾಂಗ್ರೆಸ್ ಆಡಳಿತದಲ್ಲಿ ಬಿಜೆಪಿ ಶಾಸಕರಿಗೆ ಅಗೌರವ, ಹಕ್ಕುಚ್ಯುತಿಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಮೆಟ್ಟಿಲಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ.

ಮಂಗಳೂರು, ಆಗಸ್ಟ್ 14: ಕಾಂಗ್ರೆಸ್ ಆಡಳಿತದಲ್ಲಿ ಬಿಜೆಪಿ ಶಾಸಕರಿಗೆ ಅಗೌರವ, ಹಕ್ಕುಚ್ಯುತಿಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಮೆಟ್ಟಿಲಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ. 

ಗ್ರಾಪಂ, ತಾಲೂಕು ಮಟ್ಟದ ಕಾರ್ಯಕ್ರಮಗಳನ್ನು ದಿಢೀರ್ ರದ್ದುಪಡಿಸಿ ಕಾಂಗ್ರೆಸ್ ನಾಯಕರು ದುರಾಡಳಿತ ನಡೆಸುತ್ತಿದ್ದಾರೆ. ಕಾಂಗ್ರೆಸ್ ಪದಾಧಿಕಾರಿಗಳು ಕ್ಷೇತ್ರದ ಶಾಸಕರನ್ನು ಕಡೆಗಣಿಸಿ ದರ್ಪ ಮೆರೆಯುತ್ತಾರೆ. ಗ್ರಾಪಂ ಮಟ್ಟದ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಾರೆ. ಕಾಂಗ್ರೆಸ್ ನಾಯಕರ ಮನೆಯಲ್ಲಿ ಅಧಿಕಾರಿಗಳ ಸಭೆ ನಡೆಸುತ್ತಿದ್ದಾರೆ. ಮಾತು ಕೇಳದ ಅಧಿಕಾರಿಗಳನ್ನು ಸಸ್ಪೆಂಡ್, ವರ್ಗಾವಣೆ ಮಾಡಿಸಿ ಹೆದರಿಸುತ್ತಿದ್ದಾರೆ. 

ಈ ರೀತಿಯಾದರೆ ಆಡಳಿತ ವ್ಯವಸ್ಥೆ ಹೇಗಿದೆ ಎನ್ನುವುದು ತಿಳಿಯುತ್ತದೆ. ಕೂಡಲೇ ಅಮಾನತು ಮಾಡಿರುವ ಅಧಿಕಾರಿಗಳನ್ನು ಹಿಂಪಡೆಯಬೇಕು. ಮುಂದೆ ಈ ರೀತಿ ಮಾಡುವುದಿಲ್ಲವೆಂದು ಜಿಲ್ಲಾಧಿಕಾರಿ ಭರವಸೆ ನೀಡಬೇಕು ಎಂದು ಪಟ್ಟು ಹಿಡಿದು ಶಾಸಕರು ಧರಣಿ ನಡೆಸಿದ್ದಾರೆ. ‌ 

ಧರಣಿಯಲ್ಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮೂಡುಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಭಾಗಿಯಾಗಿದ್ದಾರೆ. 

ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಒಂದೆಡೆ ಶಾಸಕರಿಗೆ ಟ್ರೈನಿಂಗ್ ಕೊಡ್ತೀರಿ, ಇಲ್ಲಿ ಶಾಸಕರನ್ನು ಅಸಹಾಯಕರಾಗಿ ಮಾಡ್ತೀರಿ. ಮೊನ್ನೆ ಮುಖ್ಯಮಂತ್ರಿ ಬಂದು ಅಧಿಕಾರಿಗಳ ಅಮಾನತು ಹಿಂಪಡೆಯುವಂತೆ ಹೇಳಿದ್ದಾರೆ. ಮುಖ್ಯಮಂತ್ರಿ ಹೇಳಿದರೂ ಅಧಿಕಾರಿಗಳು ಕೇಳುತ್ತಿಲ್ಲ ಅಂದರೇನು..? ಶಾಸಕರು ಗ್ರಾಪಂ ಕಚೇರಿಗೆ ಹೋಗಲು 200 ಪೊಲೀಸರನ್ನು ಹಾಕಿ ತಡೆಯುತ್ತಾರೆಂದ್ರೆ ಏನು ಅವಸ್ಥೆ. ಅದಕ್ಕಾಗಿ ನಾವು ಈಗ ಪ್ರತಿಭಟನೆ ಕುಳಿತಿದ್ದೇವೆ ಎಂದು ಹೇಳಿದರು.

BJP MLAs and leaders protest against DC of Mangalore over negligence, protest inside DC office.