ಕಡಲ್ಕೊರೆತ ಕಾಮಗಾರಿ ತಲೆಗೆ ಡೈ ಮಾಡಿದಂತಲ್ಲ !ಉಳ್ಳಾಲದಲ್ಲಿ ಬಂದರು ಅಧಿಕಾರಿಗಳಿಗೆ ಸಚಿವ ಅಂಗಾರ ತರಾಟೆ

12-03-21 07:49 pm       Mangaluru correspondent   ಕರಾವಳಿ

ಕಡಲ್ಕೊರೆತ ತಡೆಯ ಬ್ರೇಕ್ ವಾಟರ್ ಕಾಮಗಾರಿಗಳು ಶಾಶ್ವತ ಆಗಿರಬೇಕೇ ಹೊರತು ತಲೆಗೆ ಡೈ ಮಾಡಿದಂತೆ ಆಗಬಾರದು.

ಉಳ್ಳಾಲ, ಮಾ.12: ಕಡಲ್ಕೊರೆತ ತಡೆಯ ಬ್ರೇಕ್ ವಾಟರ್ ಕಾಮಗಾರಿಗಳು ಶಾಶ್ವತ ಆಗಿರಬೇಕೇ ಹೊರತು ತಲೆಗೆ ಡೈ ಮಾಡಿದಂತೆ ಆಗಬಾರದು. ತಲೆಗೆ ಎಷ್ಟೇ ಡೈ ಮಾಡಿ ಕೂದಲನ್ನ ಕಪ್ಪಾಗಾಗಿಸಿದರೂ ಮತ್ತೆ ಅದು ಸಹಜ ಬಣ್ಣಕ್ಕೆ ತಿರುಗುತ್ತದೆ ಎಂದು ಮೀನುಗಾರಿಕಾ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. 

ಸೋಮೇಶ್ವರ ಉಚ್ಚಿಲದ ಕಡಲ್ಕೊರೆತ ಪ್ರದೇಶಗಳಲ್ಲಿ ಎಡಿಬಿಯಿಂದ ನಡೆಯುತ್ತಿರುವ ಬ್ರೇಕ್ ವಾಟರ್ ಕಾಮಗಾರಿಯ ಪ್ರಗತಿ ಪರಿಶೀಲನೆಯ ಸಂದರ್ಭ ಅಧಿಕಾರಿಗಳನ್ನ ತರಾಟೆಗೆ ತೆಗೆದರು. ಕಳೆದ ಮಳೆಗಾಲದಲ್ಲಿ ಉಚ್ಚಿಲ ಪ್ರದೇಶದಲ್ಲಿ ತೀವ್ರ ಕಡಲ್ಕೊರೆತಕ್ಕೆ ಅನೇಕ ಮನೆಗಳು ಸಮುದ್ರ ಪಾಲಾಗಿದ್ದದಲ್ಲದೆ ಉಚ್ಚಿಲ- ಬೆಟ್ಟಂಪಾಡಿ ಸಂಪರ್ಕದ ರಸ್ತೆಯೇ ಸಮುದ್ರದ ಬೃಹತ್ ಅಲೆಗಳಿಗೆ ಕೊಚ್ಚಿ ಹೋಗಿತ್ತು.

ಉಚ್ಚಿಲ ಪ್ರದೇಶದಲ್ಲಿ ಬ್ರೇಕ್ ವಾಟರ್ ಕಾಮಗಾರಿ ನಡೆಯುತ್ತಿದ್ದರೂ ಅದು ಅವೈಜ್ಞಾನಿಕವಾಗಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದರು. ಇದೀಗ ಬ್ರೇಕ್ ವಾಟರ್ ಕಾಮಗಾರಿ ಅಡಿಯಲ್ಲೇ ಬೆಟ್ಟಂಪಾಡಿ ರಸ್ತೆಯನ್ನು ಪುನರ್ ನಿರ್ಮಾಣ ಮಾಡಿದ್ದು, ರಸ್ತೆ ಮತ್ತು ಸಮುದ್ರದ ನಡುವಿಗೆ ಬೃಹತ್ ಗಾತ್ರದಲ್ಲಿ ಮರಳಿನ ತಡೆಗೋಡೆಯನ್ನು ನಿರ್ಮಿಸಲಾಗಿದೆ. ಮರಳಿನ ರಾಶಿಯ ತಡೆಗೋಡೆಯನ್ನು ವೀಕ್ಷಿಸಿದ ಸಚಿವ ಅಂಗಾರ ಅವರು ಎಡಿಬಿ (ಏಷ್ಯನ್ ಡೆವಲಪ್ ಮೆಂಟ್ ಬೋರ್ಡ್) ಕಾರ್ಯ ನಿರ್ವಾಹಕ ಅಭಿಯಂತರ ಗೋಪಾಲ ನಾಯ್ಕ್ ಅವರನ್ನು ತರಾಟೆಗೆ ತೆಗೆದಿದ್ದಾರೆ. ಮರಳಿನ ತಡೆ ಗೋಡೆಯು ಕಡಲ ಅಬ್ಬರಕ್ಕೆ ಉಳಿಯಲು ಸಾದ್ಯವೇ ಎಂದು ಪ್ರಶ್ನಿಸಿದ್ದಾರೆ.

ಈ ವೇಳೆ ಅಧಿಕಾರಿಯು ಮುಂದಿನ‌ ಹಂತದಲ್ಲಿ ಅದರ ಬಗ್ಗೆ ಯೋಜನೆ ನಿರ್ಮಿಸಲಿದ್ದೇವೆ ಎಂದಿದ್ದಾರೆ. ಯೋಜನೆಯು ಶಾಶ್ವತವಾಗಿ ಅನುಷ್ಠಾನಗೊಳಿಸುವ ರೀತಿ ಕಾಮಗಾರಿ ನಡೆಸುವಂತೆ ಸಚಿವರು ಅಧಿಕಾರಿಗೆ ಬಿಸಿ ಮುಟ್ಟಿಸಿದ್ದಾರೆ.


ಈ ವೇಳೆ ಮಧ್ಯ ಪ್ರವೇಶಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ ಅವರು ಗೋಪಾಲ್ ನಾಯ್ಕ್ ಅವರನ್ನು ಉದ್ದೇಶಿಸಿ ದುಡ್ಡನ್ನೆಲ್ಲ ಸಮುದ್ರಕ್ಕೆ ಸುರಿದ ನಂತರ ಫಲಿತಾಂಶ ನೋಡುತ್ತೇನೆ ಅನ್ನುವುದಕ್ಕಿಂತ ಯಾವುದೇ ಯೋಜನೆಯ ಬಗ್ಗೆ ಸಮಗ್ರ ವೈಜ್ನಾನಿಕ ಅಧ್ಯಯನ ನಡೆಸಿ ಕಾಮಗಾರಿ ನಡೆಸುವಂತೆ ಸಲಹೆ ನೀಡಿದರು. ಅಲ್ಲದೆ ಉಚ್ಚಿಲ ಬ್ರೇಕ್ ವಾಟರ್ ಕಾಮಗಾರಿ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶೀಘ್ರ ಸಭೆ ನಡೆಸಿ ಚರ್ಚಿಸಲಾಗುವುದು. ಸಭೆಯಲ್ಲಿ ಸ್ಥಳೀಯ ಮೀನುಗಾರರ ಸಲಹೆಯನ್ನು ಕೇಳಲಾಗುವುದೆಂದರು.
ಕ್ಷೇತ್ರದ ಶಾಸಕ ಯು.ಟಿ ಖಾದರ್ ಅವರು ಎಡಿಬಿ ಅಧಿಕಾರಿಗಳಿಗೆ ಸಲಹೆ  ಸೂಚನೆಗಳನ್ನು ನೀಡಿದರು.


ಇದೇ ವೇಳೆ ಸಚಿವ ಅಂಗಾರರವರು ಇತಿಹಾಸ ಪ್ರಸಿದ್ಧ ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಜೀರ್ಣೋಧ್ದಾರ ಕಾಮಗಾರಿಗಳನ್ನು ವೀಕ್ಷಿಸಿದರು.ದೇವಸ್ಥಾನದ ಪ್ರದಾನ ಅರ್ಚಕರಾದ ಸೂರ್ಯ ನಾರಾಯಣ ಹೊಳ್ಳರವರು ಸಚಿವ ಅಂಗಾರ ಮತ್ತು ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ ಅವರನ್ನು ಸನ್ಮಾನಿಸಿದರು. 

ದಿ ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ. ಅಧ್ಯಕ್ಷರಾದ ಸಂತೋಷ್ ಕುಮಾರ್ ಬೋಳಿಯಾರ್, ಬಿಜೆಪಿ ಕ್ಷೇತ್ರಾಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ, ಪ್ರಮುಖರಾದ ಪುರುಷೋತ್ತಮ ಕಲ್ಲಾಪು, ದಯಾನಂದ ತೊಕ್ಕೊಟ್ಟು, ಹೇಮಂತ್ ಶೆಟ್ಟಿ, ಚಂದ್ರಶೇಖರ್ ಉಚ್ಚಿಲ್, ರವಿಶಂಕರ್ ಸೋಮೇಶ್ವರ ಮೊದಲಾದವರು ಇದ್ದರು.

The Ullal Minister Angara slams officers over sea erosion.