ವಿದ್ಯುತ್ ಕಂಬಕ್ಕೂ ಬಂತು 'ತಾಂಟ್ರೆ ಬಾ ತಾಂಟ್ ' ಫಲಕ ; ಫೋಟೊ ವೈರಲ್ !

13-03-21 11:11 am       Udupi Correspondent   ಕರಾವಳಿ

‘ತಾಂಟ್ರೇ ಬಾ ತಾಂಟ್’ ಆಡಿಯೋ ಡಯಲಾಗನ್ನು ಬ್ಯಾನರಿನಲ್ಲಿ ಬರೆದು ಕಲ್ಯಾಣಪುರ ಚರ್ಚ್‌ ಎದುರಿನ ವಿದ್ಯುತ್ ಕಂಬದಲ್ಲಿ ಅಂಟಿಸಿದ್ದು ವಿವಾದಕ್ಕೆ ಕಾರಣವಾಗಿದೆ. 

ಉಡುಪಿ, ಮಾ.13 : ಕಲ್ಯಾಣಪುರ ಚರ್ಚ್‌ ಎದುರಿನ ವಿದ್ಯುತ್ ಕಂಬದಲ್ಲಿ ಯಾರೋ ಕಿಡಿಗೇಡಿಗಳು ಇತ್ತೀಚೆಗೆ ವೈರಲ್  ಆಗಿದ್ದ ‘ತಾಂಟ್ರೇ ಬಾ ತಾಂಟ್’ ಆಡಿಯೋ ಡಯಲಾಗನ್ನು ಬ್ಯಾನರಿನಲ್ಲಿ ಬರೆದು ಅಂಟಿಸಿದ್ದು ಜಾಲತಾಣದಲ್ಲಿ ಫೋಟೊ ಬರುತ್ತಿದ್ದಂತೆ ಆಕ್ರೋಶ ಕೇಳಿಬಂದಿದೆ. 

ಲೋಕೋಪಯೋಗಿ ಇಲಾಖೆ ರಸ್ತೆ ಕಾಮಗಾರಿ ಸಂದರ್ಭದಲ್ಲಿ ಚರ್ಚ್ ಎದುರಿನಲ್ಲಿದ್ದ ವಿದ್ಯುತ್ ಕಂಬವನ್ನು ಸ್ಥಳಾಂತರಿಸದೆ ಅಲ್ಲಿಯೇ ಉಳಿಸಿಕೊಂಡಿತ್ತು. ಈ ಕಂಬಕ್ಕೆ ಯಾರೋ ಕಿಡಿಗೇಡಿಗಳು 'ತಾಂಟ್ರೆ ಬಾ ತಾಂಟ್' ಎಂಬ ಫಲಕವನ್ನು ಅಳವಡಿಸಿದ್ದರು. ಅಲ್ಲದೆ ಇದರಲ್ಲಿ ಶುಭಕೋರುವವರು ಮೆಸ್ಕಾಂ ಎಂದು ಬರೆದಿರುವುದು ವಿವಾದಕ್ಕೆ ಕಾರಣವಾಗಿತ್ತು. 

ಈ ಬರಹ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಮೆಸ್ಕಾಂ ಅಧಿಕಾರಿಗಳು, ವಿದ್ಯುತ್ ಕಂಬದಲ್ಲಿದ್ದ ಫಲಕವನ್ನು ತೆರವುಗೊಳಿಸಿದ್ದಾರೆ. 

ಈ ಬಗ್ಗೆ ಪ್ರತಿಕ್ರಿಯಿಸಿರುವ ಮೆಸ್ಕಾಂ ಬ್ರಹ್ಮಾವರ ಕಚೇರಿಯ ಸಹಾಯಕ ಎಂಜಿನಿಯರ್ ನವೀನ್, ಮೆಸ್ಕಾಂನಿಂದ ಇಂತಹ ಯಾವುದೇ ಫಲಕವನ್ನು ವಿದ್ಯುತ್ ಕಂಬಕ್ಕೆ ಆಳವಡಿಸಿಲ್ಲ. ಲೋಕೋಪಯೋಗಿ ಇಲಾಖೆ ವಿದ್ಯುತ್ ಕಂಬ ಸ್ಥಳಾಂತರಿಸಲು ಹಣ ಪಾವತಿಸದ ಹಿನ್ನೆಲೆಯಲ್ಲಿ ಅವನ್ನು ಸ್ಥಳಾಂತರಿಸಿಲ್ಲ ಎಂದು ತಿಳಿಸಿದ್ದಾರೆ.

Udupi Mescom has installed a board of danger on an electric pole with then most popular dialogue on internet called tant re ba tant.