ಎಂಆರ್ ಪಿಎಲ್ ಚಿ‌ನ್ನದ ಉದ್ಯೋಗ ಉತ್ತರ ಭಾರತೀಯರಿಗೆ, ಕೆಮಿಕಲ್ ಮಾಲಿನ್ಯದಿಂದ ರೋಗಗಳು ಮಾತ್ರ ಸ್ಥಳೀಯರಿಗೆ !

15-03-21 05:27 pm       Mangalore Correspondent   ಕರಾವಳಿ

ಎಮ್ ಆರ್ ಪಿ ಎಲ್ ದ್ವಾರದ ಮುಂಭಾಗ 'ನಾಗರಿಕ ಹೋರಾಟ ಸಮಿತಿ, ಜೋಕಟ್ಟೆ' ವತಿಯಿಂದ ಪ್ರತಿಭಟನಾ ಧರಣಿ ನಡೆಯಿತ್ತು.

ಸುರತ್ಕಲ್, ಮಾ.15; ಎಮ್ ಆರ್ ಪಿ ಎಲ್ ಕೋಕ್ ಸಲ್ಫರ್ ಘಟಕದಿಂದ ಆಗುತ್ತಿರುವ ಮಾಲಿನ್ಯವನ್ನು ತಡೆಗಟ್ಟಲು ಕಂಪೆನಿಯಾಗಲೀ, ಜಿಲ್ಲಾಡಳಿತವಾಗಲೀ ಆಸಕ್ತಿ ತೋರಿಸುತ್ತಿಲ್ಲ.‌ ಸ್ಥಳೀಯ ಗ್ರಾಮಸ್ಥರು ಏಳು ವರ್ಷಗಳಿಂದ ಸತತ ಹೋರಾಟ ನಡೆಸುತ್ತಿದ್ದರೂ, ಮಾಲಿನ್ಯ ಪರಿಹಾರಕ್ಕಾಗಿ ಸರಕಾರ ಹೊರಡಿಸಿದ ಆರು ಅಂಶದ ಪರಿಹಾರ ಕ್ರಮಗಳನ್ನು ಜಾರಿಗೆ ತರುತ್ತಿಲ್ಲ. ಜನವಸತಿ ಮತ್ತು ಕಂಪೆನಿಯ ಕೈಗಾರಿಕಾ ಸಂಕೀರ್ಣದ ನಡುವೆ ನಿರ್ಮಾಣವಾಗಬೇಕಾದ ಇಪ್ಪತ್ತೇಳು ಎಕರೆ ಹಸಿರು ವಲಯದ ಆದೇಶವನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದರು. 

ಜೋಕಟ್ಟೆಯ ಎಸ್ ಇ ಝಡ್ ಕಾರಿಡಾರ್ ರಸ್ತೆಯಲ್ಲಿರುವ ಎಮ್ ಆರ್ ಪಿ ಎಲ್ ದ್ವಾರದ ಮುಂಭಾಗ 'ನಾಗರಿಕ ಹೋರಾಟ ಸಮಿತಿ, ಜೋಕಟ್ಟೆ' ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ಧರಣಿ ಉದ್ಘಾಟಿಸಿ ಮುನೀರ್ ಮಾತನಾಡಿದರು. 

ಜಿಲ್ಲಾಡಳಿತವೂ ಕಂಪೆನಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ಈಗ 220  ಉದ್ಯೋಗಗಳಿಗೆ ಎಮ್ ಆರ್ ಪಿ ಎಲ್ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದ್ದು ಸ್ಥಳೀಯರಿಗೆ ಸಣ್ಣ ಆದ್ಯತೆಯನ್ನೂ ನೀಡುತ್ತಿಲ್ಲ. ಇದರಿಂದ ಚಿನ್ನದಂತಹ ಉದ್ಯೋಗಗಳು ಹೊರ ರಾಜ್ಯದವರಿಗೆ, ಕೆಮಿಕಲ್ ಮಾಲಿನ್ಯದಿಂದ ರೋಗ ರುಜಿನಗಳು ಮಾತ್ರ ಸ್ಥಳೀಯರಿಗೆ ಎಂಬಂತಾಗಿದೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದರು. 

ಕೋಕ್ ಸಲ್ಫರ್ ಮಾಲಿನ್ಯದಿಂದ ಸುತ್ತಲ ಗ್ರಾಮಸ್ಥರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದ್ದು, ಆರೋಗ್ಯದ ಸ್ಥಿತಿಗತಿ ಅಧ್ಯಯನಕ್ಕೆ ಸಮಿತಿಯನ್ನು ನೇಮಿಸುವ ಅಗತ್ಯವಿದೆ. ಎಮ್ ಆರ್ ಪಿ ಎಲ್ ಹಾಗೂ ಜಿಲ್ಲಾಡಳಿತ, ಹಸಿರು ವಲಯ ನಿರ್ಮಾಣದ ಆದೇಶ ಜಾರಿಗೊಳಿಸುವಲ್ಲಿ ಕಣ್ಣಾಮುಚ್ಚಾಳೆ ಆಟ ಆಡುತ್ತಿದ್ದು, ಕಾಲಮಿತಿಯ ಒಳಗಡೆ ಆದೇಶ ಜಾರಿಗೊಳಿಸದಿದ್ದಲ್ಲಿ ಅನಿರ್ಧಿಷ್ಟಾವಧಿ ಧರಣಿ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.

ತಾಲೂಕು ಪಂಚಾಯತ್ ಸದಸ್ಯ ಬಿ.ಎಸ್ ಬಶೀರ್, ತೋಕೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೆವಿನ್ ಫೆರಾವೊ, ಡಿವೈಎಫ್ಐ ಮುಖಂಡರಾದ ಸಂತೋಷ್ ಬಜಾಲ್, ಶ್ರೀನಾಥ್ ಕುಲಾಲ್, ಉದ್ಯಮಿ ರಶೀದ್ ಕೊಪ್ಪ ಧರಣಿಯನ್ನು ಉದ್ದೇಶಿಸಿ ಮಾತನಾಡಿದರು. 

ಪಂಚಾಯತ್ ಸದಸ್ಯರಾದ ಅಬೂಬಕ್ಕರ್ ಬಾವ, ನವಾಜ್ ಜೋಕಟ್ಟೆ, ಜುಬೇದಾ, ಪಂಚಾಯತ್ ಮಾಜಿ ಅಧ್ಯಕ್ಷರಾದ ಪ್ರೆಸಿಲ್ಲಾ, ಮಾಜಿ ಉಪಾಧ್ಯಕ್ಷ ಸಂಸು ಇದ್ದಿನಬ್ಬ ಹೋರಾಟ ಸಮಿತಿಯ ಮುಖಂಡರಾದ ಸಿಲ್ವಿಯಾ, ಸುರೇಂದ್ರ, ರಾಜು ಅರಿಕೆರೆ, ಶೇಖರ ಜೋಕಟ್ಟೆ, ಹಕೀಂ ಜೋಕಟ್ಟೆ, ಚೆರಿಯೋನು ಜೋಕಟ್ಟೆ ಮಂಜುನಾಥ್, ನಜೀರ್ ಜೋಕಟ್ಟೆ, ಆಮಿನಮ್ಮ, ಫಕ್ರುದ್ದೀನ್, ಅಲೆಕ್ಸ್ ಕಳವಾರು, ಐತಪ್ಪ ಪೂಜಾರಿ ಮತ್ತಿತರರು ಧರಣಿಯ ನೇತೃತ್ವ ವಹಿಸಿದ್ದರು. ಅಜ್ಮಲ್ ಮೂಸಾ  ಸ್ವಾಗತಿಸಿ ಪಂಚಾಯತ್ ಸದಸ್ಯ ಫಾರೂಕ್ ನಿರೂಪಿಸಿದರು.

DYFI state president Muneer Katipalla slammed on MRPL, Mangalore over it's effect on society.