ಸ್ಥಗಿತಗೊಂಡಿದ್ದ ಸ್ಮಾರ್ಟ್ ಸಿಟಿ ಕಾಮಗಾರಿ ಮುಂದುವರಿಸಲು ಹೈಕೋರ್ಟ್ ಅನುಮತಿ

16-03-21 12:37 pm       Mangalore Correspondent   ಕರಾವಳಿ

ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಯನ್ನು ಮುಂದುವರಿಸಲು ಕೊನೆಗೂ ಹೈಕೋರ್ಟ್ ಅನುಮತಿ ನೀಡಿದೆ. 

ಮಂಗಳೂರು, ಮಾ16 : ಒಂದು ತಿಂಗಳಿಂದ ಸ್ಥಗಿತಗೊಂಡಿರುವ ಮಂಗಳೂರು ಸ್ಮಾರ್ಟ್ ಸಿಟಿ ಕಾಮಗಾರಿಯನ್ನು ಮುಂದುವರಿಸಲು ಕೊನೆಗೂ ಹೈಕೋರ್ಟ್ ಅನುಮತಿ ನೀಡಿದೆ. 

ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ(ನೀರಿ) ಸೂಚಿಸಿರುವ ಮಾರ್ಗಸೂಚಿಗಳನ್ನು ಪಾಲಿಸಲು ಬದ್ಧ ಎಂದು ರಾಜ್ಯ ಸರಕಾರ ಭರವಸೆ ನೀಡಿದ್ದು ಈ ಹಿನ್ನೆಲೆಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಮುಂದುವರಿಸಲು ಅನುಮತಿ ನೀಡಿದೆ. ಪಚ್ಚನಾಡಿ, ಕುಡುಪು, ಮಂದಾರ ಪ್ರದೇಶದಲ್ಲಿನ ಘನತ್ಯಾಜ್ಯ ಕುಸಿತದಿಂದ ಉಂಟಾದ ಅವಘಡದ ಹಿನ್ನೆಲೆ ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸೋಮವಾರ ವಿಚಾರಣೆಗೆ ಬಂದಿತ್ತು.

ಈ ವೇಳೆ, ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆ ಅಡ್ವಕೇಟ್ ಜನರಲ್ ಪ್ರಭುಲಿಂಗ ಕೆ ನಾವದಗಿ ಹಾಜರಾಗಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಳ್ಳಲಾಗುವ ಕಟ್ಟಡ ಹಾಗೂ ಇತರ ನಿರ್ಮಾಣ ಕಾಮಗಾರಿಗಳಲ್ಲಿ ನೀರಿ ಸಂಸ್ಥೆ ಸೂಚಿಸಿದ ಮಾರ್ಗಸೂಚಿ ಪಾಲಿಸಲು ಬದ್ಧ ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದರು.

ಜತೆಗೆ ಈ ಕುರಿತ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ ಅವರ ಮುಚ್ಚಳಿಕೆಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ಮುಚ್ಚಳಿಕೆ ಹಾಗೂ ಮಾರ್ಗಸೂಚಿಗಳನ್ನು ಪಾಲಿಸುವ ಬಗ್ಗೆ ಭರವಸೆ ನೀಡಿರುವುದರಿಂದ ಕಾಮಗಾರಿಗಳನ್ನು ಮುಂದುವರಿಸಲು ಅನುಮತಿ ನೀಡುತ್ತಿರುವುದಾಗಿ ಹೈಕೋರ್ಟ್ ಹೇಳಿದೆ. ಮುಂದಿನ ವಿಚಾರಣೆ ಮಾ.30 ರಂದು ನಡೆಯಲಿದೆ.

On the basis of the assurance of the government that it is committed to stick to the guidelines which may be stipulated by the National Environmental Engineering Research Institute (NEERI), the state high court (HC), which had ordered suspension of all smart city project work, on Monday March 15, permitted to go ahead.