ಅನಿವಾಸಿ ವೈದ್ಯ, ಸಮಾಜ ಸೇವಕ ಡಾ. ಎ.ಕೆ. ಖಾಸಿಮ್ ಮೆಕ್ಕಾದಲ್ಲಿ ನಿಧನ

20-03-21 03:33 pm       Mangalore Correspondent   ಕರಾವಳಿ

ಝಹ್ರತುಲ್ ಕುದಾಯಿ ಏಷಿಯನ್ ಪಾಲಿಕ್ಲಿನಿಕ್ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಾಧಿಕಾರಿಯಾಗಿದ್ದ ಡಾ. ಎ.ಕೆ. ಖಾಸಿಮ್ (51) ಮೆಕ್ಕಾದ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. 

ಮಂಗಳೂರು, ಮಾ.20: ಸೌದಿ ಅರೇಬಿಯಾದ ಮೆಕ್ಕಾ ನಗರದ ಝಹ್ರತುಲ್ ಕುದಾಯಿ ಏಷಿಯನ್ ಪಾಲಿಕ್ಲಿನಿಕ್ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಾಧಿಕಾರಿಯಾಗಿದ್ದ ಉಪ್ಪಳ ಮೂಲದ, ಮಂಗಳೂರು ಫಳ್ನೀರ್ ನಿವಾಸಿಯಾಗಿದ್ದ ಡಾ. ಎ.ಕೆ. ಖಾಸಿಮ್ (51) ಮೆಕ್ಕಾದ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. 

ಗುರುವಾರ ರಾತ್ರಿ ಸೌದಿ ಸಮಯ ರಾತ್ರಿ 11 ಗಂಟೆಗೆ ಜೆದ್ದಾ ನಗರದಲ್ಲಿರುವ ಸಂಬಂಧಿಕರ ಜೊತೆಗೆ ಫೋನಲ್ಲಿ ಮಾತನಾಡಿದ್ದ ಖಾಸಿಮ್, ಶುಕ್ರವಾರ ಜುಮಾ ನಮಾಝ್ ಗೆ ಜಿದ್ದಾಕ್ಕೆ ಆಗಮಿಸುವುದಾಗಿ ತಿಳಿಸಿದ್ದರು. ಆದರೆ ಶುಕ್ರವಾರ ಎಷ್ಟೇ ಫೋನ್ ಮಾಡಿದರೂ ಸ್ವೀಕರಿಸದೇ ಇದ್ದಾಗ ಸಂಶಯಗೊಂಡು ಮನೆಯ ಬಾಗಿಲು ಮುರಿದು ನೋಡಿದ್ದು ಡಾ. ಖಾಸಿಮ್ ಮೃತದೇಹ ಕಂಡುಬಂದಿತ್ತು. ಅವರು ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗ್ಗಿನ ಮಧ್ಯೆ ಹೃದಯಾಘಾತದಿಂದ ನಿಧನರಾಗಿರಬಹುದೆಂದು ಸಂಶಯಿಸಲಾಗಿದೆ.

ಡಾ. ಎ.ಕೆ. ಖಾಸಿಮ್ ಮೂಲತಃ ವಿಟ್ಲ ಬಳಿಯ ಕನ್ಯಾನದ ಕಡೂರಿನವರು. ಅವರ ತಂದೆ ಅಬ್ದುಲ್ ಖಾದರ್ ಬಳಿಕ ಉಪ್ಪಳದ ಪೈವಳಿಕೆಯ ಅಟ್ಟೆಗೋಳಿಯಲ್ಲಿ ವಾಸಿಸುತ್ತಿದ್ದರು. ಡಾ.ಖಾಸಿಮ್ ಮೆಡಿಕಲ್ ಕಲಿತು ವೈದ್ಯರಾದ ಬಳಿಕ ಮಂಗಳೂರಿನ ಫಳ್ನೀರ್ ನಲ್ಲಿ ಕುಟುಂಬದೊಂದಿಗೆ ವಾಸ ಮಾಡುತ್ತಿದ್ದರು. ಒಂದು ವರ್ಷದ ಹಿಂದಷ್ಟೇ ಊರಿಗೆ ಬಂದು ಸೌದಿಗೆ ತೆರಳಿದ್ದರು. ಕಳೆದ 26 ವರ್ಷಗಳಿಂದ ಉಪ್ಪಳ, ಮಂಗಳೂರು, ಸೌದಿ ಅರೇಬಿಯಾದಲ್ಲಿ ವೈದ್ಯಕೀಯ ಸೇವೆ ಸಲ್ಲಿಸಿ ಜನಮನ್ನಣೆ ಗಳಿಸಿದ್ದರು. 

ಮಂಗಳೂರು ಕೆಎಂಸಿಯಲ್ಲಿ ಎಂಬಿಬಿಎಸ್ ಮುಗಿಸಿ ಎಮರ್ಜೆನ್ಸಿ ಹೆಲ್ತ್ ಕೋರ್ಸ್ ಮಾಡಿದ್ದರು. ವಿಟ್ಲದ ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಯ ಹಳೆ ವಿದ್ಯಾರ್ಥಿಯಾಗಿದ್ದ ಖಾಸಿಮ್, ಈಗಿನ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಜೊತೆಗೆ ಮಂಗಳೂರಿನಲ್ಲಿ ಸಹಪಾಠಿಯಾಗಿದ್ದರು.  

ಸೌದಿಗೆ ಉದ್ಯೋಗಕ್ಕೆ ತೆರಳುವ ಮುನ್ನ ಉಪ್ಪಳದ ಕೈಕಂಬದಲ್ಲಿ ಸೊಸೈಟಿ ಆಸ್ಪತ್ರೆ ತೆರೆದು ಬಡರೋಗಿಗಳಿಗೆ ನೆರವಾಗುತ್ತಿದ್ದರು. ಮಂಗಳೂರಿನಲ್ಲಿ ಕೂಡ ಹಲವಾರು ಕಾರುಣ್ಯ ಯೋಜನೆಯಲ್ಲಿ ಸಕ್ರಿಯರಾಗಿದ್ದರು. ಕಳೆದ ಬಾರಿ ವಿಮಾನದಲ್ಲಿ ಬರುತ್ತಿದ್ದ ವೇಳೆ ಓರ್ವ ಮಹಿಳೆಗೆ ಹೃದಯಾಘಾತವಾಗಿದ್ದು ವಿಮಾನದಲ್ಲೇ ತುರ್ತು ಚಿಕಿತ್ಸೆ ನೀಡಿ ಜೀವ ಉಳಿಸಿದ್ದು ದೊಡ್ಡ ಸುದ್ದಿಯಾಗಿತ್ತು.

Mangaloren doctor and social worker dr kasim dies in Mecca.