ಕೇರಳ ಪ್ರಯಾಣಿಕರಿಗೆ ಕೋವಿಡ್ ನಿರ್ಬಂಧ ; ಲೀಗ್ ಕಾರ್ಯಕರ್ತರ ಹೈಡ್ರಾಮಾ, ಇಕ್ಕಟ್ಟಿಗೆ ಬಿದ್ದ ಜಿಲ್ಲಾಡಳಿತ !

20-03-21 04:31 pm       Mangalore Correspondent   ಕರಾವಳಿ

ಕೊರೊನಾ ನಿಯಂತ್ರಣ ವಿಚಾರದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತೆ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಮಂಗಳೂರು, ಮಾ.20: ಕೊರೊನಾ ನಿಯಂತ್ರಣ ವಿಚಾರದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತೆ ಇಕ್ಕಟ್ಟಿಗೆ ಸಿಲುಕಿದ್ದಾರೆ. ಕೊರೊನಾ ತಡೆಯುವ ನಿಟ್ಟಿನಲ್ಲಿ ಕೇರಳದಿಂದ ಮಂಗಳೂರಿಗೆ ಬರುವ ಪ್ರಯಾಣಿಕರಿಗೆ ಆರ್ ಟಿಪಿಸಿಆರ್ ಟೆಸ್ಟ್ ರಿಪೋರ್ಟ್ ಕಡ್ಡಾಯಗೊಳಿಸಿ ಆದೇಶ ಮಾಡಿದ್ದರು. ಅದರಂತೆ, ತಲಪಾಡಿ ಗಡಿಯಲ್ಲಿ ಆರೋಗ್ಯಧಿಕಾರಿಗಳು ಮತ್ತು ಪೊಲೀಸರು ತಡೆಹಾಕಿ, ಕಾರ್ಯಾಚರಣೆ ಆರಂಭಿಸಿದ್ದರು. ಆದರೆ, ಗಡಿಭಾಗದ ಜನರ ತೀವ್ರ ವಿರೋಧದಿಂದಾಗಿ ಮತ್ತೆ ನೆಗೆಟಿವ್ ರಿಪೋರ್ಟ್ ಕಡ್ಡಾಯ ನಿಲುವಿನಿಂದ ಜಿಲ್ಲಾಡಳಿತ ಹಿಂದೆ ಸರಿದಿದೆ.

ಕೇರಳದಲ್ಲಿ ಕೋವಿಡ್ ಸೋಂಕು ಹೆಚ್ಚು ಹರಡುತ್ತಿರುವುದರಿಂದ ಅಲ್ಲಿಂದ ಬರುವ ಪ್ರಯಾಣಿಕರು ಕೋವಿಡ್ ನೆಗೆಟಿವ್ ಸರ್ಟಿಫಿಕೇಟು ಹೊಂದಿರಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿತ್ತು. ಗುರುವಾರದಿಂದಲೇ ಈ ನಿಯಮ ಜಾರಿಗೊಳಿಸಿದ್ದರೂ, ಆರೋಗ್ಯ ಇಲಾಖೆ ಸಿಬಂದಿ ಮಾತ್ರ ತಲಪಾಡಿ ಗಡಿಯಲ್ಲಿದ್ದರಿಂದ ಇದರ ಪಾಲನೆ ಸಾಧ್ಯವಾಗಲಿಲ್ಲ. ಶುಕ್ರವಾರ ಪೊಲೀಸರು, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಮಂಗಳೂರು ತಹಸೀಲ್ದಾರ್ ಸೇರಿ ನಿಯಮ ಕಟ್ಟುನಿಟ್ಟು ಮಾಡಲು ಮುಂದಾಗಿದ್ದರು.

ತಲಪಾಡಿ ಗಡಿಯ ಮೂಲಕ ಬರುತ್ತಿದ್ದ ಪ್ರಯಾಣಿಕರು ಒಂದೋ ಸ್ಥಳದಲ್ಲೇ ತಪಾಸಣೆಗೆ ಒಳಪಡಬೇಕು. ಇಲ್ಲದಿದ್ದರೆ, ಕೋವಿಡ್ ನೆಗೆಟಿವ್ ವರದಿ ಹೊಂದಿರಬೇಕು ಎಂದು ಅಧಿಕಾರಿಗಳು ಸೂಚನೆ ನೀಡುತ್ತಿದ್ದರು. ಹೆಚ್ಚಿನ ಮಂದಿ ಗಡಿಯಲ್ಲಿ ನಿಯೋಜಿತರಾದ ಮಂಗಳೂರಿನ ಆರೋಗ್ಯ ಸಿಬಂದಿಯಲ್ಲಿ ಉಚಿತ ತಪಾಸಣೆಗೆ ಒಳಗಾಗುತ್ತಿದ್ದರು. ತಪಾಸಣೆ ವೇಳೆ, ಹೆಸರು, ವಿಳಾಸ ಮತ್ತು ಮೊಬೈಲ್ ನಂಬರ್ ಪಡೆದು ಕರ್ನಾಟಕ ಪ್ರವೇಶಕ್ಕೆ ಬಿಡುತ್ತಿದ್ದರು. ಪಾಸಿಟಿವ್ ಆದಲ್ಲಿ ಕರೆ ಮಾಡುತ್ತೇವೆ, ಮೆಸೇಜ್ ಕೂಡ ಬರುತ್ತದೆ, ಕ್ವಾರಂಟೈನ್ ಇರಬೇಕಾಗುತ್ತದೆ ಎಂದು ಹೇಳುತ್ತಿದ್ದರು. ಆದರೆ, ಗಡಿಭಾಗದ ಕಾಂಗ್ರೆಸ್ ಮತ್ತು ಲೀಗ್ ಕಾರ್ಯಕರ್ತರು ಈ ನಡುವೆ ಹೈಡ್ರಾಮಾ ಮುಂದುವರಿಸಿದ್ದಾರೆ.

ಲೀಗ್ ಕಾರ್ಯಕರ್ತರ ಹೈಡ್ರಾಮಾ

ಆರ್ ಟಿಪಿಸಿಆರ್ ಕಡ್ಡಾಯ ನಿಯಮ ಹೇರಿದರೆ, ತಲಪಾಡಿ ಗಡಿಯನ್ನು ಬಂದ್ ಮಾಡುತ್ತೇವೆ. ಕರ್ನಾಟಕದಿಂದ ಕೇರಳಕ್ಕೆ ವಾಹನ ಮತ್ತು ಪ್ರಯಾಣಿಕರ ಪ್ರವೇಶಕ್ಕೆ ಬಿಡುವುದಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡುವ ಕೆಲಸ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಕೇರಳದ ಮಂದಿಗೆ ಗಡಿಯಲ್ಲಿ ನಿರ್ಬಂಧ ಹೇರಬಾರದು ಮತ್ತು ಕೋವಿಡ್ ನೆಗೆಟಿವ್ ವರದಿ ಕಡ್ಡಾಯ ಮಾಡಬಾರದು ಎಂದು ತಲಪಾಡಿ ಗಡಿಭಾಗಕ್ಕೆ ಬಂದಿದ್ದ ಮಂಗಳೂರು ತಹಸೀಲ್ದಾರ್ ಗುರುಪ್ರಸಾದ್ ಗೆ ಲೀಗ್ ಕಾರ್ಯಕರ್ತರು ಮನವಿ ನೀಡಿದ್ದಾರೆ. ಈ ಮೂಲಕ ಮಂಜೇಶ್ವರ ಭಾಗದ ಕಾರ್ಯಕರ್ತರು ಪರೋಕ್ಷವಾಗಿ ಜಿಲ್ಲಾಡಳಿತವನ್ನು ಬ್ಲಾಕ್ ಮೇಲ್ ಮಾಡಲು ಆರಂಭಿಸಿದ್ದಾರೆ.

ಅಡಕತ್ತರಿಯಲ್ಲಿ ಬಿದ್ದ ಜಿಲ್ಲಾಡಳಿತ

ಗಡಿಭಾಗದ ಕಾರ್ಯಕರ್ತರ ಈ ನೀತಿಯಿಂದಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತೆ ಅಡಕತ್ತರಿಯಲ್ಲಿ ಬಿದ್ದಿದೆ. ಅತ್ತ ರಾಜ್ಯದ ಸಿಎಂ ಯಡಿಯೂರಪ್ಪ ಮಂಗಳೂರಿನಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ. ಇದೇ ಕಾರಣಕ್ಕೆ ಕೇರಳದ ಪ್ರಯಾಣಿಕರ ಪ್ರವೇಶಕ್ಕೆ ಕೋವಿಡ್ ನೆಗೆಟಿವ್ ಕಡ್ಡಾಯಗೊಳಿಸಿ ಜಿಲ್ಲಾಡಳಿತ ಆದೇಶ ಮಾಡಿತ್ತು. ಆದರೆ, ಗಡಿಭಾಗದ ಜನರು ಹೆದ್ದಾರಿಯನ್ನು ಬಂದ್ ಮಾಡುವ ಎಚ್ಚರಿಕೆ ನೀಡುತ್ತಿದ್ದು, ಕರ್ನಾಟಕ ಸರಕಾರದ ಕೋವಿಡ್ ನಿರ್ಬಂಧವನ್ನು ಉಲ್ಲಂಘಿಸುತ್ತಿದ್ದಾರೆ.

ಗಡಿ ಬಂದ್ ಮಾಡಲ್ಲ, ತಪಾಸಣೆ ಮಾಡ್ತೀವಿ

ಈ ಬಗ್ಗೆ ಸ್ಥಳದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ತಹಸೀಲ್ದಾರ್ ಗುರುಪ್ರಸಾದ್, ಗಡಿಯನ್ನು ಬಂದ್ ಮಾಡುತ್ತೇವೆ ಎಂದು ನಾವೆಂದೂ ಹೇಳಿಲ್ಲ. ಸೋಶಿಯಲ್ ಮೀಡಿಯಾಗಳಲ್ಲಿ ಮಾತ್ರ ಹೀಗೆ ಬಂದಿರುವುದಷ್ಟೆ. ಕೋವಿಡ್ ನೆಗೆಟಿವ್ ವರದಿ ತರುವುದನ್ನು ಕಡ್ಡಾಯ ಮಾಡಿದ್ದೇವೆ. ಜೊತೆಗೆ, ಸ್ಥಳದಲ್ಲೇ ಆರೋಗ್ಯ ಇಲಾಖೆಯಿಂದ ತಪಾಸಣೆಗೂ ವ್ಯವಸ್ಥೆ ಮಾಡಿದ್ದೇವೆ. ಆದರೆ, ಈ ಭಾಗದ ಜನರು ಇದಕ್ಕೆ ಸಹಕಾರ ಕೊಡಬೇಕು ಎಂದು ಹೇಳಿದರು.

ಉಳ್ಳಾಲ ಪೊಲೀಸರು, ಆರೋಗ್ಯ ಇಲಾಖೆ ಕಾರ್ಯಕರ್ತರು ಸ್ಥಳದಲ್ಲಿ ಸೇರಿದ್ದರೂ, ಲೀಗ್ ಕಾರ್ಯಕರ್ತರ ಪೀಕಲಾಟದಿಂದಾಗಿ ಮತ್ತೆ ಗಡಿಯನ್ನು ಮುಕ್ತಗೊಳಿಸಲಾಗಿದೆ. ಆರೋಗ್ಯ ಇಲಾಖೆ ಕಾರ್ಯಕರ್ತರನ್ನು ಗಡಿಯಲ್ಲಿ ನಿಯೋಜಿಸಿದ್ದರೂ, ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಕೇರಳದಲ್ಲಿ ಚುನಾವಣೆಗೆ ಕೆಲವೇ ದಿನಗಳಿರುವ ಹಿನ್ನೆಲೆಯಲ್ಲಿ ಬಿಜೆಪಿ ಸರಕಾರವೂ ಗಡಿಭಾಗದ ಜನರ ಮೇಲೆ ಪೂರ್ತಿ ನಿರ್ಬಂಧ ಹಾಕಲು ಮುಂದಾಗಿಲ್ಲ.