ನೆಲ್ಯಾಡಿಯಲ್ಲಿ ರಾಶಿ ರಾಶಿ ಆಧಾರ್ ಕಾರ್ಡ್ ಪತ್ತೆ ! ಏನಿದರ ಅಸಲಿಯತ್ತು ?

20-03-21 09:09 pm       Mangaluru correspondent   ಕರಾವಳಿ

ನೆಲ್ಯಾಡಿಯ ಹೊಟೇಲ್ ಒಂದರಲ್ಲಿ ರಾಶಿ ರಾಶಿ ಆಧಾರ್ ಕಾರ್ಡ್ ಪತ್ತೆಯಾಗಿದ್ದು ಭಾರೀ ಕುತೂಹಲ ಮೂಡಿಸಿದ ಸುದ್ದಿಯಾಗಿತ್ತು.

ಪುತ್ತೂರು, ಮಾ.20: ನೆಲ್ಯಾಡಿಯ ಹೊಟೇಲ್ ಒಂದರಲ್ಲಿ ರಾಶಿ ರಾಶಿ ಆಧಾರ್ ಕಾರ್ಡ್ ಪತ್ತೆಯಾಗಿದ್ದು ಭಾರೀ ಕುತೂಹಲ ಮೂಡಿಸಿದ ಸುದ್ದಿಯಾಗಿತ್ತು. ಯಾಕಂದ್ರೆ, ಆಧಾರ್ ಕಾರ್ಡ್ ಖಾಸಗಿ ಸೊತ್ತು. ಆದರೆ, ಸಾರ್ವಜನಿಕ ಜಾಗದಲ್ಲಿ ಹೀಗೆ ಆಧಾರ್ ಕಾರ್ಡ್ ರಾಶಿ ಬಿದ್ದಿರುವುದು ಹೇಗೆ ಎಂಬುದು ಭಾರೀ ಶಂಕೆಗೂ ಕಾರಣವಾಗಿತ್ತು.

ಈ ಸುದ್ದಿಯ ಬೆನ್ನತ್ತಿ ಹೋದ ಸಂದರ್ಭದಲ್ಲಿ ಅಂಚೆ ಇಲಾಖೆ ಸಿಬಂದಿಯ ಲೋಪದಲ್ಲಿ ಆಗಿರುವ ಘಟನೆ ಎನ್ನುವ ವಿಚಾರ ಬಯಲಾಗಿದೆ. ಸಾಮಾನ್ಯವಾಗಿ ಆಧಾರ್ ಕಾರ್ಡ್ ಬಟವಾಡೆಯಾಗುವುದು ಅಂಚೆ ಇಲಾಖೆಯ ಮೂಲಕ. ಹೊಸ ಆಧಾರ್ ಕಾರ್ಡ್ ಆಗಲೀ, ಕರೆಕ್ಷನ್ ಮಾಡುವುದಾಗಲೀ ಅದರ ಒರಿಜಿನಲ್ ಪ್ರತಿ ಸಿಗುವುದು ಅಂಚೆ ಇಲಾಖೆಯಿಂದ. ಆಧಾರ್ ಸಂಸ್ಥೆಯಿಂದ ನೇರವಾಗಿ ತಮ್ಮ ವಿಳಾಸಕ್ಕೆ ಅಂಚೆ ಮೂಲಕ ಕಾರ್ಡ್ ಬಟವಾಡೆಯಾಗುತ್ತದೆ. ಇದು ಎಲ್ಲ ಕಡೆ ನಡೆಯುವ ವಾಡಿಕೆ.

ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮಕ್ಕೆ ಪಕ್ಕದ ಪಟ್ಟಣ ಕೇಂದ್ರ ನೆಲ್ಯಾಡಿ. ಸಾಮಾನ್ಯವಾಗಿ ಹಳ್ಳಿ ಕಡೆಗಳಲ್ಲಿ ಆಧಾರ್ ಕಾರ್ಡ್ ಆಗಲೀ, ಪೋಸ್ಟ್ ಆಗಲೀ ಅದನ್ನು ಮನೆಗೆ ತಲುಪಿಸುವ ವ್ಯವಸ್ಥೆ ಇರುವುದಿಲ್ಲ. ಹಳ್ಳಿ ಹಳ್ಳಿಗೆ ತಿರುಗಾಡುವ ಬದಲು ಒಂದು ಗ್ರಾಮದ ಪೋಸ್ಟಲನ್ನು ಆಯಾ ಗ್ರಾಮದ ಪಟ್ಟಣ ಕೇಂದ್ರವೋ, ಆ ಭಾಗದ ಹೊಟೇಲ್, ಇನ್ನಿತರ ಅಂಗಡಿಗಳಲ್ಲಿ ಇಡುತ್ತಾರೆ. ಅಲ್ಲಿಗೆ ಬರುವ ಜನರು ತಮ್ಮ ಪೋಸ್ಟನ್ನು ಪಡೆಯುತ್ತಾರೆ. ಅದೇ ರೀತಿ, ಕೆಯ್ಯೂರು ಗ್ರಾಮದ ನಿವಾಸಿಗಳ ಆಧಾರ್ ಕಾರ್ಡ್ ಬಟವಾಡೆಯಾಗಿತ್ತು. ಅಂಚೆ ಇಲಾಖೆಯಿಂದ ಬಂದಿದ್ದ ಪೊಸ್ಟಲನ್ನು ಅಂಚೆಯಣ್ಣ ಅಲ್ಲಿನ ಹೊಟೇಲ್ ಒಂದರಲ್ಲಿ ಇಟ್ಟು ಹೋಗುತ್ತಿದ್ದ. ಎಲ್ಲವೂ ಸೀಲ್ಡ್ ಆಗಿದ್ದ ಆಧಾರ್ ಕಾರ್ಡ್ ಗಳವು. ಹೀಗೆ ಇಟ್ಟಿದ್ದ ಪೋಸ್ಟ್ ಗಳು ಗ್ರಾಮಸ್ಥರು ಪಡೆಯದೆ ಅಲ್ಲಿ ಬಾಕಿಯಾಗಿದ್ದವು.

ಇತ್ತೀಚೆಗೆ ಕೊರೊನಾ ಬಂದ ಬಳಿಕ ಜನರು ಸುಮ್ಮನೆ ಅಂಗಡಿಗಳಿಗೆ ಬರುವುದು, ಅಲ್ಲಿ ಹರಟುವುದನ್ನು ಕಡಿಮೆ ಮಾಡಿದ್ದಾರೆ. ಇದೇ ಕಾರಣಕ್ಕೋ ಏನೋ ಅಲ್ಲಿನ ಪೋಸ್ಟಲ್ ಗಳು ಬಾಕಿಯಾಕಿ ಮೂಲೆ ಸೇರಿದ್ದವು. ಅದನ್ನು ಒಂದು ಕಡೆಯಲ್ಲಿ ಹೊಟೇಲ್ ಸಿಬಂದಿ ರಾಶಿ ಹಾಕಿದ್ದರು. ಎರಡು ದಿನಗಳ ಹಿಂದೆ ಹೊಟೇಲಿನ ಸಿಬಂದಿ ಕ್ಲೀನ್ ಮಾಡುವ ಸಂದರ್ಭದಲ್ಲಿ ಆಧಾರ್ ಕಾರ್ಡ್ ಗಳು ರಾಶಿ ಬಿದ್ದಿರುವುದು ಗಮನಕ್ಕೆ ಬಂದಿದ್ದು, ವಿಷಯ ಪತ್ರಿಕೆಯವರಿಗೆ ಗೊತ್ತಾಗಿ ಭಾರೀ ಕುತೂಹಲಕ್ಕೆ ಕಾರಣವಾಗಿತ್ತು.

ಅಧಿಕಾರಿಗಳು ಭೇಟಿ, ಪರಿಶೀಲನೆ

ಅಂಚೆ ಇಲಾಖೆಯಿಂದ ಬಟವಾಡೆ ಆಗಿದ್ದ ಆಧಾರ್ ಕಾರ್ಡ್ ಗಳು ರಾಶಿ ಬಿದ್ದಿರುವ ವಿಚಾರ ತಿಳಿದ ಇಲಾಖೆಯ ಹಿರಿಯ ಅಧಿಕಾರಿಗಳು ಇಂದು ನೆಲ್ಯಾಡಿಗೆ ಭೇಟಿ ನೀಡಿದ್ದಾರೆ. ಆಧಾರ್ ಕಾರ್ಡ್ ಪರಿಶೀಲನೆ ನಡೆಸಿದಾಗ, ಕಳೆದ ಹಲವಾರು ತಿಂಗಳಿಂದ ಅಂಚೆ ಮೂಲಕ ಹೋಗಿದ್ದ ಪೋಸ್ಟಲ್ ಕೆಯ್ಯೂರಿನ ನಿವಾಸಿಗಳ ಕೈಸೇರದೆ ಉಳಿದುಕೊಂಡಿರುವುದು ತಿಳಿದುಬಂದಿದೆ. ಅಲ್ಲಿನ ಅಂಚೆ ಇಲಾಖೆಯ ಸಿಬಂದಿಯ ನಿರ್ಲಕ್ಷ್ಯ ಮತ್ತು ಪೋಸ್ಟಲ್ಲಿ ಹೇಗೂ ಬರುತ್ತೆ ಎಂದುಕೊಂಡು ಜನರು ವಿಚಾರಿಸದೆ ಅಸಡ್ಡೆ ವಹಿಸಿದ್ದರ ಪರಿಣಾಮ ಅತ್ಯಂತ ಮುಖ್ಯವಾದ ಖಾಸಗಿ ಸೊತ್ತಾಗಿರುವ ಆಧಾರ್ ಕಾರ್ಡ್ ಎಲ್ಲೋ ಬೀದಿಯಲ್ಲಿ ಬೀಳುವಂತಾಗಿತ್ತು.

ಅಂಚೆ ಸಿಬಂದಿಯ ಅವಸ್ಥೆಯೂ ಅಷ್ಟೇ..!

ಅಂಚೆ ಇಲಾಖೆಯಲ್ಲೂ ಈಗ ಖಾಯಂ ನೌಕರರು ಇಲ್ಲ. ಹೆಚ್ಚಾಗಿ ಗುತ್ತಿಗೆ ಕಾರ್ಮಿಕರಾಗಿ ಪೋಸ್ಟ್ ಮ್ಯಾನ್ ಹುದ್ದೆಗೆ ನೇಮಕ ಮಾಡಲಾಗುತ್ತದೆ. 12 ಸಾವಿರ ಸಂಬಳಕ್ಕೆ ಗುತ್ತಿಗೆ ಕಾರ್ಮಿಕರು ದುಡಿಯುತ್ತಿದ್ದು, ಒಂದು ಪೋಸ್ಟ್ ಹಿಡಿದು ಹಳ್ಳಿ ಹಳ್ಳಿಗೆ ತಿರುಗಾಡುವುದು ಕಷ್ಟ. ಸೈಕಲ್ ಅಥವಾ ಸ್ಕೂಟರಿನಲ್ಲಿ ಬರಬೇಕಿದ್ದರೂ, ಹಳ್ಳಿಗಳಲ್ಲಿ ಮನೆ ಮನೆಗೆ ಹೋಗುವುದು ಕಷ್ಟವಾಗಿರುತ್ತದೆ. ಹೀಗಾಗಿ ಅಂಚೆ ಸಿಬಂದಿ ಆಯಾ ಗ್ರಾಮದ ಪ್ರಮುಖ ಕೇಂದ್ರಗಳಲ್ಲಿ ಅಂಚೆಯನ್ನು ಬಡವಾಡೆ ಮಾಡುತ್ತಾರೆ. ಆದರೆ, ಇಂಥ ಸಂದರ್ಭದಲ್ಲಿ ಆಯಾ ನಿವಾಸಿಗಳಿಗೆ ಫೋನ್ ಮಾಡಿಯಾದ್ರೂ ವಿಷಯ ಮುಟ್ಟಿಸುವ ಕಾರ್ಯವನ್ನು ಅಂಚೆ ಸಿಬಂದಿ ಮಾಡಬೇಕಾಗುತ್ತದೆ. ಇಲ್ಲದೇ ಇದ್ದರೆ, ಈ ರೀತಿಯ ಪರಿಸ್ಥಿತಿ ಆಗುತ್ತದೆ.

ಕೆಲವೊಮ್ಮೆ ಹಳ್ಳಿಗಳಲ್ಲಿ ಸಂಘ- ಸಂಸ್ಥೆಗಳು ಆಧಾರ್ ಕಾರ್ಡ್ ಮಾಡಿಸುವ ಕೆಲಸ ಮಾಡುತ್ತವೆ. ಈ ವೇಳೆ, ಫೋಟೋ ಪ್ರತಿ ಪಡೆದು ಆಧಾರ್ ಕಾರ್ಡ್ ಮಾಡಿಸಿದ ಬಳಿಕ ಅಂಚೆ ಮೂಲಕ ಕಾರ್ಡ್ ಮನೆಗೆ ಬರುತ್ತದೆ ಎನ್ನುತ್ತಾರೆ. ಆದರೆ, ಅಂಚೆ ಇಲಾಖೆಯಲ್ಲಿ ಬಟವಾಡೆ ಆಗದೇ ಇದ್ದರೆ, ಈ ರೀತಿಯ ಅವಸ್ಥೆ ಆಗುತ್ತದೆ ಎನ್ನುತ್ತಾರೆ, ಅಲ್ಲಿನ ಒಬ್ಬರು.

Mangalore Hundreds of unknown aadhar cards found inside lodge in Nelyadi, Dakshina Kannada. A detailed report by Headline Karnataka.