ಏನಪ್ಪಾ ಮಾಸ್ಕ್ ಎಲ್ಲಪ್ಪಾ..? ಮಂಗ್ಲೂರಲ್ಲಿ ಫೀಲ್ಡಿಗಿಳಿದ ಜಿಲ್ಲಾಧಿಕಾರಿ ; ಬಸ್, ರಸ್ತೆಯಲ್ಲಿ ಓಡಾಡಿ ಕೊರೊನಾ ಬಿಸಿ !

22-03-21 05:09 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಸ್ವತಃ ಫೀಲ್ಡಿಗೆ ಇಳಿದಿದ್ದಾರೆ. ಕೊರೊನಾ ನಿಯಂತ್ರಣದ ಬಗ್ಗೆ ಮಂಗಳೂರು ನಗರದ ಜನರಿಗೆ ಅರಿವು ಮೂಡಿಸಲು ದಂಡ ಎತ್ತಿದ್ದಾರೆ.

ಮಂಗಳೂರು, ಮಾ.22:ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಸ್ವತಃ ಫೀಲ್ಡಿಗೆ ಇಳಿದಿದ್ದಾರೆ. ಕೊರೊನಾ ನಿಯಂತ್ರಣದ ಬಗ್ಗೆ ಮಂಗಳೂರು ನಗರದ ಜನರಿಗೆ ಅರಿವು ಮೂಡಿಸಲು ದಂಡ ಎತ್ತಿದ್ದಾರೆ. ಸಾರ್ವಜನಿಕ ಜಾಗಗಳು, ಬಸ್ ಇನ್ನಿತರ ಸಾರಿಗೆ ವಾಹನಗಳು, ಮಾಲ್ ಗಳಿಗೆ ತೆರಳಿ ಕೊರೊನಾ ಎಚ್ಚರಿಕೆಯ ಛಾಟಿ ಬೀಸಿದ್ದಾರೆ.

ಕೊರೊನಾ ನಿಯಂತ್ರಣಕ್ಕಾಗಿ ಜಿಲ್ಲೆಯ ಪ್ರಮುಖ ಇಲಾಖೆಯ ಅಧಿಕಾರಿಗಳು ದಿನದಲ್ಲಿ ಒಂದು ಗಂಟೆ ಕಾಲ ಫೀಲ್ಡಿಗೆ ಇಳಿಯಬೇಕು ಎಂದು ಜಿಲ್ಲಾಧಿಕಾರಿಗಳು ಕಳೆದ ವಾರ ಸೂಚನೆ ನೀಡಿದ್ದರು. ಹೊಸ ರೀತಿಯ ಅಭಿಯಾನಕ್ಕೆ ಜಿಲ್ಲಾಧಿಕಾರಿಗಳೇ ಚಾಲನೆ ನೀಡಿದ್ದು ದಿಢೀರ್ ಆಗಿ ಸಂಜೆ ನಾಲ್ಕು ಗಂಟೆ ಸುಮಾರಿಗೆ ಮಂಗಳೂರಿನ ಕೆ.ಎಸ್.ರಾವ್ ರಸ್ತೆಯಲ್ಲಿ ನಡೆಯುತ್ತಾ ಹೋಗಿದ್ದಾರೆ. ಇವರ ಕಾರ್ಯಾಚರಣೆಗೆ ಡಿಸಿಪಿ ಹರಿರಾಮ್ ಶಂಕರ್ ಸಾಥ್ ನೀಡಿದ್ದಾರೆ.

ಅಂಗಡಿಗಳಲ್ಲಿ ವ್ಯಾಪಾರಸ್ಥರು ಮಾಸ್ಕ್ ಹಾಕಿದ್ದಾರೆಯೇ ಎಂದು ಗಮನಿಸುತ್ತಾ ರಸ್ತೆಯಲ್ಲಿ ಮಾಸ್ಕ್ ಇಲ್ಲದೆ ಎದುರಿಗೆ ಸಿಕ್ಕವರಿಗೆ ಗದರುತ್ತಾ ಸಾಗಿದ್ದಾರೆ. ಯಾಕಪ್ಪಾ ಮಾಸ್ಕ್ ಹಾಕಿಲ್ಲಾ.. ಕೊರೊನಾ ಇರೋದು ಗೊತ್ತಿಲ್ವಾ.. ಎಂದು ಗದರಿದ್ದಾರೆ. ಬಳಿಕ ಸಿಟಿ ಸೆಂಟರ್ ಮಾಲ್ ಗೆ ತೆರಳಿದ ಜಿಲ್ಲಾಧಿಕಾರಿಗಳು ಅಲ್ಲಿ ಸಿಬಂದಿಯೇ ಮಾಸ್ಕ್ ಹಾಕಿರದೇ ಇದ್ದುದನ್ನು ಗಮನಿಸಿ, ಶಟರ್ ಎಳೆದು ಬಂದ್ ಮಾಡುವಂತೆ ಸೂಚಿಸಿದ್ದಾರೆ.

ಸಾರಿಗೆ ಬಸ್ಸಿಗೂ ಏರಿಹೋದ ಜಿಲ್ಲಾಧಿಕಾರಿ, ಮಾಸ್ಕನ್ನು ಗಲ್ಲಕ್ಕೆ ತಗಲಿಸಿಕೊಂಡಿದ್ದ ಪ್ರಯಾಣಿಕರನ್ನು ಗದರಿಸಿದ್ದಾರೆ. ಮೊದಲ ದಿನವಾಗಿದ್ದರಿಂದ ಫೈನ್ ಹಾಕೋದಿಲ್ಲ. ಬಸ್ಸಿನಲ್ಲಿ ಪ್ರಯಾಣಿಕರು ಮಾಸ್ಕ್ ಹಾಕಿಲ್ಲಾಂದ್ರೆ ಕಂಡಕ್ಟರ್ ಮತ್ತು ಚಾಲಕನಿಗೆ ದಂಡ ವಿಧಿಸುವುದಾಗಿ ಹೇಳಿದ್ದಾರೆ.

ಜಿಲ್ಲಾಧಿಕಾರಿ ರಸ್ತೆಯುದ್ದಕ್ಕೂ ನಡೆದು ಹೋಗುತ್ತಾ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರೆ, ಹಿಂದಿನಿಂದ ಮಾಧ್ಯಮದ ಕ್ಯಾಮರಾಗಳು, ಪೊಲೀಸರು ಮತ್ತು ಇತರೇ ಇಲಾಖೆಯ ಅಧಿಕಾರಿಗಳು ಓಡುತ್ತಿದ್ದರು. ಜಿಲ್ಲಾಧಿಕಾರಿಗಳ ಚುರುಕಿನ ನಡೆಗೆ ಪೊಲೀಸರು ಮತ್ತು ಇತರೇ ಅಧಿಕಾರಿಗಳು ಸುಸ್ತಾಗಿದ್ದರು. ಜನರಿಗೆ ಎಷ್ಟು ಹೇಳಿದರೂ, ಅಷ್ಟೇ. ಮಾಸ್ಕ್, ಅಂತರ ಕಾಪಾಡಬೇಕು ಎಂದ್ರೆ ಕೇಳಲ್ಲ. ಇದಕ್ಕಾಗಿ ವ್ಯಾಪಾರಸ್ಥರು ಮತ್ತು ಮಾಲ್ ಗಳೇ ಜನರನ್ನು ನೋಡಿಕೊಳ್ಳಬೇಕು. ಅದಕ್ಕಾಗಿ ಅಧಿಕಾರಿಗಳು ಫೀಲ್ಡಿಗೆ ಇಳಿದು ಬಿಸಿ ಮುಟ್ಟಿಸಬೇಕು ಎಂಬ ಪ್ಲಾನ್ ಜಿಲ್ಲಾಧಿಕಾರಿಗಳದ್ದು. 

Video: 

DC Rajendra Kumar along with DCP Hariram Shankar visited public places like Malls, Bus stands and other places to aware people of coronavirus in Mangalore.