ನಾರಾವಿ ; ಒಂಟಿ ಮಹಿಳೆಯನ್ನು ಮನೆಯಲ್ಲಿ ಕಟ್ಟಿಹಾಕಿ 4.60 ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ

13-11-22 09:58 pm       Mangalore Correspondent   ಕ್ರೈಂ

ಒಂಟಿ ಮಹಿಳೆ ವಾಸವಿದ್ದ ಮನೆಗೆ ನುಗ್ಗಿದ ನಾಲ್ವರು ಮುಸುಕುಧಾರಿಗಳು ಮಹಿಳೆಯನ್ನು ಕಟ್ಟಿಹಾಕಿ, ಮನೆಯಲ್ಲಿದ್ದ ಚಿನ್ನಾಭರಣ ದರೋಡೆಗೈದ ಘಟನೆ ನಡೆದಿದ್ದು, ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ, ನ.13: ಒಂಟಿ ಮಹಿಳೆ ವಾಸವಿದ್ದ ಮನೆಗೆ ನುಗ್ಗಿದ ನಾಲ್ವರು ಮುಸುಕುಧಾರಿಗಳು ಮಹಿಳೆಯನ್ನು ಕಟ್ಟಿಹಾಕಿ, ಮನೆಯಲ್ಲಿದ್ದ ಚಿನ್ನಾಭರಣ ದರೋಡೆಗೈದ ಘಟನೆ ನಡೆದಿದ್ದು, ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾರಾವಿ ಬಳಿಯ ಅರಸಿಕಟ್ಟೆ ಎಂಬಲ್ಲಿ ಪ್ರಭಾವತಿ ನಾಯ್ಕ(67) ಎಂಬ ಮಹಿಳೆಯ ಮನೆಗೆ ನುಗ್ಗಿ ದರೋಡೆ ನಡೆಸಲಾಗಿದೆ. ನ.12ರಂದು ರಾತ್ರಿ ಏಳು ಗಂಟೆಗೆ ನುಗ್ಗಿದ ನಾಲ್ವರು ಮುಸುಕುಧಾರಿಗಳು ಸುತ್ತುವರಿದು, ಬಂಗಾರವನ್ನು ತಂದು ಕೊಡುವಂತೆ ಹೇಳಿ ಧಮ್ಕಿ ಹಾಕಿದ್ದಾರೆ. ಬೊಬ್ಬೆ ಹೊಡೆದ ಮಹಿಳೆಯ ಕೈಕಾಲನ್ನು ಹಗ್ಗದಿಂದ ಕಟ್ಟಿ ಹಾಕಿದ್ದು, ಬಾಯಿಗೆ ಬಟ್ಟೆ ತುರುಕಿದ್ದಾರೆ. ಬಳಿಕ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ, ಕಿವಿಯಲ್ಲಿದ್ದ ಚಿನ್ನದ ಕಿವಿಯೋಲೆಯನ್ನು ಕಿತ್ತು ತೆಗೆದಿದ್ದಾರೆ.

ಆನಂತರ ಮನೆಯ ಒಳಗೆ ಇರಿಸಿದ್ದ ಕಪಾಟು, ಬೆಡ್ಡನ್ನು ಜಾಲಾಡಿದ್ದು, ಅಲ್ಲಿದ್ದ ಚಿನ್ನವನ್ನೂ ಹೊತ್ತೊಯ್ದಿದ್ದಾರೆ. ಬೆಡ್ ಅಡಿಯಲ್ಲಿ ಇರಿಸಿದ್ದ ಮೂರು ಚಿನ್ನದ ಬಳೆಗಳು, ಮೂರು ಚಿನ್ನದ ಉಂಗುರಗಳು, ಮೂರು ಎಲೆಯ ಚಿನ್ನದ ಚೈನ್ ಒಂದನ್ನು ದೋಚಿದ್ದಾರೆ. ಇದಲ್ಲದೆ, ಅಡುಗೆ ಕೋಣೆಯಲ್ಲಿ ಇಟ್ಟಿದ್ದ 10 ಸಾವಿರ ರೂ. ನಗದನ್ನು ಕಳವು ಮಾಡಿದ್ದಾರೆ. ಅಂದಾಜು 4.60 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕಳ್ಳರು ದೋಚಿದ್ದು ಪರಾರಿಯಾಗಿದ್ದಾರೆ. ಮಹಿಳೆ ಆನಂತರ ನಿಧಾನಕ್ಕೆ ಕೊಸರಾಡಿಕೊಂಡು ಮನೆಯ ಒಳಗೆ ತೆರಳಿದ್ದು, ಕಳ್ಳರು ನುಗ್ಗಿ ದರೋಡೆ ನಡೆಸಿದ್ದನ್ನು ಸಂಬಂಧಿಕರಿಗೆ ಫೋನ್ ಮಾಡಿ ತಿಳಿಸಿದ್ದಾರೆ. ವೇಣೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳು ತುಳುವಿನಲ್ಲಿ ಮಾತನಾಡುತ್ತಿದ್ದು, ಕೊನೆಗೆ ಹೋಗುವಾಗ ಎಂಕುಲು ಬತ್ತಿನ ಕೆಲಸ ಆಂಡ್(ನಾವು ಬಂದ ಕೆಲಸ ಆಯ್ತು) ಅಂತ ಹೇಳಿ ಹೋಗಿದ್ದಾರೆಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

Mangalore Robbers tie women flee from home with gold worth 4.60 lakhs in Belthangady.