Shivajinagar mosque, Bomb call, arrest: ಬೆಂಗಳೂರಿನ ಶಿವಾಜಿನಗರ ಮಸೀದಿಗೆ ಬಾಂಬ್‌ ಕರೆ ;  ಮಲಗಲು ಅವಕಾಶ ನೀಡದ ಸಿಟ್ಟಿಗೆ ಭಿಕ್ಷುಕನ ರಿವೇಂಜ್, ಗ್ರಹಚಾರ ಬಿಡಿಸಿದ ಪೊಲೀಸರು !

10-07-23 01:25 pm       Bangalore Correspondent   ಕ್ರೈಂ

ಶಿವಾಜಿನಗರ ಮಸೀದಿಯಲ್ಲಿ ಬಾಂಬ್‌ ಇಟ್ಟು ಸ್ಫೋಟಿಸುವ ಸಂಚಿನ ಬೆದರಿಕೆ ಕರೆ ಮಾಡಿ ಆತಂಕ ಸೃಷ್ಟಿಸಿದ್ದ ಸೈಯದ್‌ ಖಾಜಿ ಮಹಮದ್‌ ಅನ್ವರ್‌ ಉಲ್ಲಾ(37) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು, ಜುಲೈ 10: ಶಿವಾಜಿನಗರ ಮಸೀದಿಯಲ್ಲಿ ಬಾಂಬ್‌ ಇಟ್ಟು ಸ್ಫೋಟಿಸುವ ಸಂಚಿನ ಬೆದರಿಕೆ ಕರೆ ಮಾಡಿ ಆತಂಕ ಸೃಷ್ಟಿಸಿದ್ದ ಸೈಯದ್‌ ಖಾಜಿ ಮಹಮದ್‌ ಅನ್ವರ್‌ ಉಲ್ಲಾ(37) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಉಸ್ಮಾನಾಬಾದ್‌ ನಿವಾಸಿಯಾದ ಸೈಯದ್‌ ಖಾಜಿ ಅವಿವಾಹಿತನಾಗಿದ್ದು, ದೇಶದ ಹಲವು ನಗರಗಳಲ್ಲಿ ಸುತ್ತಾಟ ನಡೆಸಿ ಭಿಕ್ಷಾಟನೆ ಮಾಡುತ್ತಿದ್ದ. ಮಸೀದಿಗಳ ಬಳಿ ಆಶ್ರಯ ಪಡೆದು ಅಲ್ಲಿಯೇ ಮಲಗುತ್ತಿದ್ದ. ಜು.4ರಂದು ನಗರಕ್ಕೆ ಆಗಮಿಸಿ ಶಿವಾಜಿನಗರ ಮಸೀದಿ ಬಳಿ ತೆರಳಿದ್ದ. ರಾತ್ರಿ ವೇಳೆ ಅಲ್ಲಿಯೇ ಉಳಿದುಕೊಳ್ಳಲು ಕೇಳಿದ್ದ. ಮಸೀದಿಯಲ್ಲಿ ರಾತ್ರಿ ವೇಳೆ ಭದ್ರತಾ ಸಿಬ್ಬಂದಿ ಹೊರತುಪಡಿಸಿ, ಇತರರಿಗೆ ಅವಕಾಶವಿಲ್ಲ ಎಂದು ಹೇಳಿ ಆತನನ್ನು ಅಲ್ಲಿಂದ ಕಳುಹಿಸಲಾಗಿತ್ತು.

ಮಸೀದಿಯಲ್ಲಿ ಬಾಂಬ್‌ ಇರಿಸಿ ಸ್ಫೋಟಿಸಲು ಕೆಲವರು ಸಂಚು ;

ಮಸೀದಿಯಲ್ಲಿ ಮಲಗಲು ಅವಕಾಶ ನೀಡದ ಸಿಟ್ಟಿಗೆ ಜು. 5 ರಂದು ರಾತ್ರಿ 10 ಗಂಟೆ ಸುಮಾರಿಗೆ ತನ್ನ ಮೊಬೈಲ್‌ನಿಂದ ಪೊಲೀಸ್‌ ಕಂಟ್ರೋಲ್‌ ರೂಂಗೆ ಕರೆ ಮಾಡಿ ''ಮಸೀದಿಯಲ್ಲಿ ಬಾಂಬ್‌ ಇರಿಸಿ ಸ್ಫೋಟಿಸಲು ಕೆಲವರು ಸಂಚು ರೂಪಿಸಿದ್ದಾರೆ'' ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕರ್ನೂಲ್‌ಗೆ ಪರಾರಿಯಾಗಿದ್ದ ಆರೋಪಿ;

ಮಸೀದಿ ಶೋಧನೆ ಬಳಿಕ ಹುಸಿ ಬಾಂಬ್‌ ಬೆದರಿಕೆ ಕರೆ ಎಂಬುದು ಖಚಿತಪಟ್ಟಿತ್ತು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕರೆ ಬಂದಿದ್ದ ಮೊಬೈಲ್‌ನ ನಂಬರ್‌ ಜಾಡು ಹಿಡಿದು ತನಿಖೆ ಚುರುಕುಗೊಳಿಸಿದರು. ಆಗ ವ್ಯಕ್ತಿಯೊಬ್ಬ ಮಸೀದಿ ಬಳಿ ಬಂದಿದ್ದ ಮಾಹಿತಿ ಸಿಕ್ಕಿತ್ತು. ಮೊಬೈಲ್‌ ಸಂಖ್ಯೆಯ ಜಾಡು ಹಿಡಿದು ಹೊರಟಾಗ ಆರೋಪಿಯು ಕರ್ನೂಲ್‌ನ ಬಸ್‌ವೊಂದರಲ್ಲಿಸಂಚರಿಸುತ್ತಿರುವುದು ಗೊತ್ತಾಗಿದೆ. ತಕ್ಷಣ ವಿಶೇಷ ತಂಡವೊಂದು ಕರ್ನೂಲ್‌ಗೆ ತೆರಳಿತ್ತು. ಆದರೆ, ಅಷ್ಟರಲ್ಲಾಗಲೇ ಆರೋಪಿ ಸೈಯದ್‌ ಖಾಜಿ, ಮೆಹಬೂಬ್‌ ನಗರ ತಲುಪಿದ್ದ. ಅಂತಿಮವಾಗಿ ಆರೋಪಿಯನ್ನು ಬೆನ್ನಟ್ಟಿ ಬಂಧಿಸಿ ಕರೆತರಲಾಗಿದೆ.

ವಿಚಾರಣೆ ವೇಳೆ ನಕಲಿ ಕರೆ ಎಂದು ಒಪ್ಪಿಗೆ ;

ಮಸೀದಿಯಲ್ಲಿ ಮಲಗಲು ಜಾಗ ಕೊಡಲಿಲ್ಲ ಎಂಬ ಸಿಟ್ಟಿಗೆ ಬೆದರಿಕೆ ಕರೆ ಮಾಡಿದ್ದಾಗಿ ಆರೋಪಿಯು ವಿಚಾರಣೆ ವೇಳೆ ತಿಳಿಸಿದ್ದಾನೆ. ಆತನ ಪೂರ್ವಾಪರ ಪರಿಶೀಲಿಸಿದಾಗ ಯಾವುದೇ ಕ್ರಿಮಿನಲ್‌ ಚಟುವಟಿಕೆಯಲ್ಲಿಭಾಗಿಯಾಗಿರುವುದು ಕಂಡುಬಂದಿಲ್ಲ. ಅವರ ಪೋಷಕರಿಗೂ ವಿಚಾರ ತಿಳಿಸಲಾಗಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

Bangalore Shivajinagar Mosque Gets Hoax Bomb Call, Denied Stay, Man Makes Fake Call Threatening Bomb at Mosque, Arrested. The accused has been identified as 37-year-old Syed Mohammad Anwar from Maharashtra. According to police, the accused was raising donations for madrassas from the mosques.