Bangalore Idli Guru Owner Karthik Shetty, Fraud franchise: ಬಿಸಿ ಬಿಸಿ ಇಡ್ಲಿ ಹೆಸ್ರಲ್ಲಿ ಮೋಸ ; 'ಇಡ್ಲಿ ಗುರು' ಹೋಟೆಲ್ ಮಾಲೀಕನಿಂದ ದೋಖಾ, ಫ್ರಾಂಚೈಸಿ ಕೊಡ್ತೀವಿ ಅಂತ ಹೇಳಿ ಪಂಗನಾಮ, ನಾಲ್ವರ ವಿರುದ್ಧ ಪ್ರಕರಣ, ಪೊಲೀಸರಿಂದ ಶೋಧ 

10-02-24 02:47 pm       Bangalore Correspondent   ಕ್ರೈಂ

ಹೋಟೆಲ್ ಫ್ರಾಂಚೈಸಿ ನೀಡುವುದಾಗಿ ನಂಬಿಸಿ ವಂಚಿಸಿದ ಆರೋಪದಡಿ "ಇಡ್ಲಿ ಗುರು" ಹೋಟೆಲ್ ಮಾಲೀಕ ಸೇರಿ ನಾಲ್ವರ ವಿರುದ್ಧ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಬೆಂಗಳೂರು, ಫೆ 10: ಹೋಟೆಲ್ ಫ್ರಾಂಚೈಸಿ ನೀಡುವುದಾಗಿ ನಂಬಿಸಿ ವಂಚಿಸಿದ ಆರೋಪದಡಿ "ಇಡ್ಲಿ ಗುರು" ಹೋಟೆಲ್ ಮಾಲೀಕ ಸೇರಿ ನಾಲ್ವರ ವಿರುದ್ಧ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಈ ಸಂಬಂಧ ಕಾಮಾಕ್ಷಿಪಾಳ್ಯ ನಿವಾಸಿ ಚೇತನ್‌ ಎಂಬವರು ನೀಡಿದ ದೂರಿನ ಮೇರೆಗೆ ಇಡ್ಲಿ ಗುರು ಹೋಟೆಲ್ ಮಾಲೀಕ ಕಾರ್ತಿಕ್‌ ಶೆಟ್ಟಿ, ಅವರ ಪತ್ನಿ ಮಂಜುಳಾ, ಕಾರ್ತಿಕ್‌ ತಂದೆ ಬಾಬು ಶೆಟ್ಟಿ ಹಾಗೂ ಹೋಟೆಲ್ ಸಿಬ್ಬಂದಿ ದಿವಾಕರ್‌ ವಿರುದ್ಧ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಎಫ್ ಐಆರ್‌ ದಾಖಲಿಸಿದ್ದಾರೆ.

2022ರ ಅಕ್ಟೋಬರ್‌ನಲ್ಲಿ ದೂರುದಾರ ಚೇತನ್‌ ಮಾಗಡಿ ಮುಖ್ಯರಸ್ತೆಯ ಕೊಟ್ಟಿಗೆಪಾಳ್ಯದಲ್ಲಿರುವ ಇಡ್ಲಿಗುರು ಕಚೇರಿಗೆ ಭೇಟಿ ನೀಡಿ, ಸಂಸ್ಥೆಯ ಬಗ್ಗೆ ಕಾರ್ತಿಕ್‌ನಿಂದ ಮಾಹಿತಿ ಪಡೆದುಕೊಂಡರು. ‌

ಈ ವೇಳೆ ಆರೋಪಿಗಳು ತಿಂಗಳಿಗೆ 50 ಸಾವಿರ ರೂ. ಸಂಪಾದಿಸಬಹುದು ಎಂದು ತಿಳಿಸಿ, ಆರಂಭದಲ್ಲಿ ನಮ್ಮ ಹೋಟೆಲ್‌ ಫ್ರಾಂಚೈಸಿ ನೀಡುವುದಾಗಿ ಚೇತನ್‌ಗೆ ನಂಬಿಸಿದ್ದರು. ಅದಕ್ಕಾಗಿ ಠೇವಣಿ ರೂಪದಲ್ಲಿ 3 ಲಕ್ಷ ರೂ. ಪಡೆದಿದ್ದಾರೆ.

ಹೋಟೆಲ್‌ಗಾಗಿ ಬಾಡಿಗೆ ಅಂಗಡಿ ಖಾಲಿ ಮಾಡಿಸಿದ್ದ ಚೇತನ್‌:

ಆರೋಪಿಗಳ ಸಲಹೆ ಮೇರೆಗೆ ಚೇತನ್‌, ತಮ್ಮ ಮನೆಯ ನೆಲಮಹಡಿಯಲ್ಲಿದ್ದ 9 ಸಾವಿರ ರೂ. ಬಾಡಿಗೆ ಬರುತ್ತಿದ್ದ ಅಂಗಡಿಯನ್ನು ಖಾಲಿ ಮಾಡಿಸಿದ್ದರು. ಈ ಜಾಗದಲ್ಲಿ ಇಡ್ಲಿ ಗುರು ನಡೆಸಲು ಕಾರ್ತಿಕ್‌ ಒಪ್ಪಿಕೊಂಡಿದ್ದರು. ಹೀಗಾಗಿ ಅಂಗಡಿಯನ್ನು ಹೋಟೆಲ್‌ ನಡೆಸಲು ಬೇಕಾದ ವಿನ್ಯಾಸಕ್ಕೆ ಬದಲಾಯಿಸಲಾಗಿತ್ತು. ಅದಕ್ಕೆ ಎರಡು ಲಕ್ಷ ರೂ. ವ್ಯಯಿಸಲಾಗಿತ್ತು. ಆದರೆ, ಆರೋಪಿಗಳು ಹೋಟೆಲ್‌ನ ಬದಲಾಗಿ ಫ‌ುಡ್‌ ಕಾರ್ಟ್‌(ಮೊಬೈಲ್‌ ಕ್ಯಾಂಟಿನ್‌) ತಂದು ನಿಲ್ಲಿಸಿ ಸ್ವಲ್ಪ ದಿನಗಳ ಬಳಿಕ ಅಂದು ಕೊಂಡಂತೆ ವ್ಯಾಪಾರ ಆಗುತ್ತಿಲ್ಲ. ಬೇರೆಡೆ ವ್ಯಾಪಾರ ಮಾಡೋಣ ಎಂದಿದ್ದ ಆರೋಪಿಗಳು, ನಂತರ ಶೇ.10 ಕಮಿಷನ್‌ ನೀಡುವುದಾಗಿ ನಂಬಿಸಿದ್ದರು. ಆದರೆ, ಯಾವುದೇ ಕಮಿಷನ್‌ ನೀಡದೆ, ನಿಗದಿತ ಅಂಗಡಿಯಲ್ಲಿ ಹೋಟೆಲ್‌ ನಡೆಸದೆ, ಹೋಟೆಲ್‌ಗಾಗಿ ಅಂಗಡಿಯನ್ನು ಮರು ವಿನ್ಯಾಸ ಮಾಡಿದ ಹಣ ಸೇರಿ 5 ಲಕ್ಷ ರೂ. ಆಗಿದೆ. ಈ ಬಗ್ಗೆ ಆರೋಪಿಗಳನ್ನು ವಿಚಾರಿಸಿದಾಗ ನಾಲ್ವರು ಆರೋಪಿಗಳು ಜೀವ ಬೆದರಿಕೆ ಹಾಕಿದ್ದಾರೆ ಎಂದು ಚೇತನ್‌ ದೂರಿನಲ್ಲಿ ಆರೋಪಿಸಿದ್ದಾರೆ. ಮತ್ತೂಂದೆಡೆ ಆರೋಪಿಗಳು ಇದೇ ರೀತಿ ಹತ್ತಾರು ಮಂದಿಗೆ ವಂಚಿಸಿದ್ದಾರೆ ಎಂಬುದು ಗೊತ್ತಾಗಿದೆ.

ಸದ್ಯ ಆರೋಪಿಗಳು ಪರಾರಿಯಾಗಿದ್ದು, ಪೊಲೀಸರಿಂದ ಶೋಧ ನಡೆದಿದೆ.

Bangalore Idli Guru Owner Karthik Shetty allged of fraud and cheating in the name of Franchise. A case against Karthik and his family has been lodged at Kamakshipalya Police Station.