ಸುಶಾಂತ್ ಆತ್ಮಹತ್ಯೆ : ಜಾರಿ ನಿರ್ದೇಶನಾಲಯ ವಿಚಾರಣೆಗೆ ರಿಯಾ ಹಾಜರ್

07-08-20 07:34 am       Headline Karnataka News Network   ಕ್ರೈಂ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಹಾಗೂ ಸುಶಾಂತ್ ಸಿಂಗ್ ಮಾಜಿ ಗೆಳತಿ ರಿಯಾ ಚಕ್ರವರ್ತಿ ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

ಮುಂಬೈ, ಆಗಸ್ಟ್ 7: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಹಾಗೂ ಸುಶಾಂತ್ ಸಿಂಗ್ ಮಾಜಿ ಗೆಳತಿ ರಿಯಾ ಚಕ್ರವರ್ತಿ ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

ಆಗಸ್ಟ್ 7 ರಂದು ಜಾರಿ ನಿರ್ದೇಶನಾಲಯ ಕಚೇರಿಗೆ ಖುದ್ದು ಹಾಜರಾಗಬೇಕು ಎಂದು ಇಡಿ ರಿಯಾ ಚಕ್ರವರ್ತಿ ಸಮನ್ಸ್ ನೀಡಿತ್ತು. ಆದರೆ, ಇಡಿ ಸಮನ್ಸ್ ಆಗಸ್ಟ್ 7 ರಂದು ಸಾಧ್ಯವಿಲ್ಲ. ಇನ್ನೂ ಸ್ವಲ್ಪ ಸಮಯ ಬೇಕು ಎಂದು ಕೇಳಿಕೊಂಡಿದ್ದರು.

ಶುಕ್ರವಾರ ಬೆಳಗ್ಗೆ 11 ಗಂಟೆಗೆ ಮುಂಬೈನಲ್ಲಿರುವ ಇಡಿ ಕಚೇರಿಗೆ ರಿಯಾ ಆಗಮಿಸಿದ್ದು, ಪ್ರಕರಣ ಕುತೂಹಲ ಮೂಡಿಸಿದೆ.

ಸುಶಾಂತ್ ಸಿಂಗ್ ಬ್ಯಾಂಕ್ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ರಿಯಾ ಚಕ್ರವರ್ತಿ ವಿರುದ್ಧ ಎಫ್ ಐ ಆರ್ ದಾಖಲಿಸಿಕೊಂಡಿತ್ತು.

ಸುಶಾಂತ್ ಅವರ ತಂದೆ ಪಾಟ್ನಾದಲ್ಲಿ ನಟಿ ರಿಯಾ ಸೇರಿದಂತೆ ಏಳು ಜನರ ವಿರುದ್ಧ ದೂರು ನೀಡಿದ್ದರು. ಪಾಟ್ನಾ ಪೊಲೀಸರು ಸಹ ಎಫ್ ಐ ಆರ್ ದಾಖಲಿಸಿದ್ದರು. ಪಾಟ್ನಾ ಪೊಲೀಸರ ಎಫ್ ಐ ಆರ್ ಆಧಾರದಲ್ಲಿ ಇಡಿ ಅಧಿಕಾರಿಗಳು ಸಹ ಪ್ರತ್ಯೇಕ ಎಫ್ ಐ ಆರ್ ನಮೂದಿಸಿದ್ದರು. ಮತ್ತೊಂದೆಡೆ ಸುಶಾಂತ್ ಸಿಂಗ್ ಪ್ರಕರಣವನ್ನು ಕೇಂದ್ರ ಸರ್ಕಾರ ಸಿಬಿಐಗೆ ವರ್ಗಾಯಿಸಿದೆ. ಸಿಬಿಐ ಅಧಿಕಾರಿಗಳು ಸಹ ರಿಯಾ ಚಕ್ರವರ್ತಿಯ ಹೇಳಿಕೆ ಪಡೆಯುವ ಸಾಧ್ಯತೆ ಹೆಚ್ಚಿದೆ.