Mangalore News, Harekala sand mining, crime: ಹರೇಕಳ ಪಾವೂರಿನಲ್ಲಿ ರಾತ್ರಿಯಿಡೀ ಮರಳು ದಂಧೆ, ಠಾಣೆ ಎದುರಲ್ಲೇ ಕೇರಳಕ್ಕೆ ಅಕ್ರಮ ಸಾಗಣೆ ; ಮಾಫಿಯಾಕ್ಕೆ ಹೆದರಿ ಕುಳಿತ ಪೊಲೀಸರು, ದಕ್ಷಿಣ ಎಸಿಪಿ, ಕೊಣಾಜೆ ಇ‌ನ್ಸ್ ಪೆಕ್ಟರ್ ಗೆ ಹೆಚ್ಚಿನ ಭದ್ರತೆ ನೀಡಲು ಡೀಸಿ, ಪೊಲೀಸ್ ಆಯುಕ್ತರಿಗೆ ಸಾರ್ವಜನಿಕರ ಮನವಿ! 

16-05-24 09:50 pm       Mangalore Correspondent   ಕ್ರೈಂ

ಉಳ್ಳಾಲ ತಾಲೂಕಿನ ಹರೇಕಳ ಪಾವೂರು ನೇತ್ರಾವತಿ ನದಿಯಿಂದ ನಿತ್ಯವೂ ಅಕ್ರಮವಾಗಿ ಮರಳನ್ನ ತೆಗೆದು ಕೇರಳಕ್ಕೆ ಸಾಗಾಟ ನಡೆಸಲಾಗುತ್ತಿದ್ದು, ಮರಳು ಮಾಫಿಯಾಕ್ಕೆ ಹೆದರಿದ ಎಸಿಪಿ ಧನ್ಯಾ ನಾಯಕ್ ಮತ್ತು ಕೊಣಾಜೆ ಇನ್ಸ್ ಪೆಕ್ಟರ್ಗೆ ಹೆಚ್ಚಿನ ಸಿಬ್ಬಂದಿಗಳನ್ನ ಒದಗಿಸಿ ಭದ್ರತೆ ಕಲ್ಪಿಸಿ ಎಂದು ಪಾವೂರು ಗ್ರಾಮಸ್ಥರು ಜಿಲ್ಲಾಧಿಕಾರಿ ಮತ್ತು ಮಂಗಳೂರು ಪೊಲೀಸ್ ಕಮೀಷನರ್ ಗೆ ಮನವಿ ನೀಡಿದ್ದಾರೆ. 

ಉಳ್ಳಾಲ, ಮೇ.16: ಉಳ್ಳಾಲ ತಾಲೂಕಿನ ಹರೇಕಳ ಪಾವೂರು ನೇತ್ರಾವತಿ ನದಿಯಿಂದ ನಿತ್ಯವೂ ಅಕ್ರಮವಾಗಿ ಮರಳನ್ನ ತೆಗೆದು ಕೇರಳಕ್ಕೆ ಸಾಗಾಟ ನಡೆಸಲಾಗುತ್ತಿದ್ದು, ಮರಳು ಮಾಫಿಯಾಕ್ಕೆ ಹೆದರಿದ ಎಸಿಪಿ ಧನ್ಯಾ ನಾಯಕ್ ಮತ್ತು ಕೊಣಾಜೆ ಇನ್ಸ್ ಪೆಕ್ಟರ್ಗೆ ಹೆಚ್ಚಿನ ಸಿಬ್ಬಂದಿಗಳನ್ನ ಒದಗಿಸಿ ಭದ್ರತೆ ಕಲ್ಪಿಸಿ ಎಂದು ಪಾವೂರು ಗ್ರಾಮಸ್ಥರು ಜಿಲ್ಲಾಧಿಕಾರಿ ಮತ್ತು ಮಂಗಳೂರು ಪೊಲೀಸ್ ಕಮೀಷನರ್ ಗೆ ಮನವಿ ನೀಡಿದ್ದಾರೆ. 

ಪಾವೂರು ಗ್ರಾಮದ ಗ್ರಾಮಸ್ಥರು ಸೇರಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಮತ್ತು ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಅವರಿಗೆ ಈ ರೀತಿಯ ವಿಭಿನ್ನ ಮನವಿಯೊಂದನ್ನ ಸಲ್ಲಿಸಿದ್ದಾರೆ. 

ಪಾವೂರು ಗ್ರಾಮದ ಗಾಡಿಗದ್ದೆ ಎಂಬಲ್ಲಿ ಸುಮಾರು ಐವತ್ತು ಮಂದಿ ಕೂಲಿ ಕಾರ್ಮಿಕರನ್ನ ಬಳಸಿ ನಿತ್ಯವೂ ನೇತ್ರಾವತಿ ನದಿಯಿಂದ ಅಕ್ರಮವಾಗಿ ಮರಳನ್ನ ತೆಗೆಯಲಾಗುತ್ತಿದೆ. ರಾತ್ರಿ 11 ಗಂಟೆಯಿಂದ ಬೆಳಗ್ಗಿನ ಜಾವ 5 ಗಂಟೆಯ ವರೆಗೆ 75 ಲಾರಿಗಳಲ್ಲಿ ಕೊಣಾಜೆ ಪೊಲೀಸ್ ಠಾಣೆಯ ಎದುರಿನಿಂದಲೇ ಮಂಜನಾಡಿ, ಪೂಪಾಡಿ ಕಲ್ಲು ಮಾರ್ಗವಾಗಿ ಕೇರಳಕ್ಕೆ ಅಕ್ರಮವಾಗಿ ಮರಳು ಸಾಗಾಟ ನಡೆಸಲಾಗುತ್ತಿದೆ. ಒಂದು ರಾತ್ರಿಯಲ್ಲಿ ಸುಮಾರು ನೂರು ಲಾರಿಗಳಷ್ಟು ಮರಳು ಸಾಗಾಟ ನಡೆಯುತ್ತಿದ್ದು, ಕೇರಳದಲ್ಲಿ ಒಂದು ಲಾರಿ ಮರಳು 10 ಸಾವಿರಕ್ಕೂ ಹೆಚ್ಚು ಬೆಲೆಗೆ ಮಾರಾಟವಾಗುತ್ತಿದ್ದು ಮರಳು ಮಾಫಿಯಗಳು ದಿವಸಕ್ಕೆ ಹತ್ತು ಲಕ್ಷ ರೂಪಾಯಿಗಳನ್ನ ಕುಳಿತಲ್ಲೇ  ಸಂಪಾದಿಸುತ್ತಿದ್ದಾರೆ. ಇದರಿಂದ ರಾಜ್ಯ ಸರಕಾರದ ಬೊಕ್ಕಸಕ್ಕೆ ಭಾರೀ ನಷ್ಟ ಉಂಟಾಗುತ್ತಿದೆ.

ಮರಳು ಮಾಫಿಯಾದ ಪಟಾಲಮ್ ರಾತ್ರಿ ಹೊತ್ತಲ್ಲಿ ಅಮಲು ಪದಾರ್ಥ ಸೇವಿಸಿ ಗೂಂಡಾಗಿರಿ ಪೃವೃತ್ತಿ ಪ್ರದರ್ಶಿಸುತ್ತಾರೆ. ಈ ಬಗ್ಗೆ ಸ್ಥಳೀಯ ಕೊಣಾಜೆ ಪೊಲೀಸ್ ಠಾಣೆ, ಗಣಿ ಇಲಾಖೆ, ಪೊಲೀಸ್ ಕಂಟ್ರೋಲ್ ರೂಂ, ಕೊನೆಗೆ ಮಂಗಳೂರು ಉಪ ವಿಭಾಗದ ಎಸಿಪಿ ಧನ್ಯಾ ನಾಯಕ್ ಅವರಿಗೂ ನಾವು ಫೋನ್ ಕರೆ ಮೂಲಕ ದೂರು ನೀಡಿದ್ದರೂ ಅಕ್ರಮ ಮರಳುಗಾರಿಕೆಗೆ ಬ್ರೇಕ್ ಬಿದ್ದಿಲ್ಲ ಎಂದು ಪಾವೂರಿನ ಗ್ರಾಮಸ್ಥರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಪೊಲೀಸ್ ವ್ಯವಸ್ಥೆಗಿಂತ ರಾಜಕೀಯ ಕೃಪಾಪೋಷಿತ ಅಕ್ರಮ ಮರಳು ಮಾಫಿಯಾದ ಗೂಂಡಾ ವ್ಯವಸ್ಥೆ ಪ್ರಬಲವಾಗಿ ರಾತ್ರಿ ಕಾರ್ಯಾಚರಿಸುತ್ತಿದೆ. ಎಸಿಪಿ ಮಟ್ಟದ ಅಧಿಕಾರಿಗಳಿಗೆ ದೂರು ನೀಡಿ ಗೂಗಲ್ ಮ್ಯಾಪ್ ಲೊಕೇಷನ್ ಕಳಿಸಿದರೂ ಇಂಥವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದಾದರೆ ಮರಳು ಮಾಫಿಯಾಗಳಿಗೆ ಇವರೆಲ್ಲ ಬೆಚ್ಚಿ ಬಿದ್ದಿದ್ದಾರೆ ಎಂದರ್ಥ. ಅದರಲ್ಲೂ ಎಸಿಪಿ ಧನ್ಯಾ ನಾಯಕ್, ಗಣಿ ಇಲಾಖೆ ಡೆಪ್ಯುಟಿ ಡೈರೆಕ್ಟರ್ ಮಹಿಳೆಯರು ಆಗಿದ್ದಾರೆ. ಮಹಿಳಾ ಅಧಿಕಾರಿಗಳಿಗೆ ರಾತ್ರಿ ಹೊತ್ತು ಅಕ್ರಮ ಮರಳು ಮಾಫಿಯಾ ವಿರುದ್ಧ ಕ್ರಮ ಕೈಗೊಳ್ಳಲು ಅಸಾಧ್ಯ ಆಗಿರಬಹುದು. ಆದುದರಿಂದ ಈ ಎಲ್ಲಾ ಅಧಿಕಾರಿಗಳಿಗೂ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಿ ಪಾವೂರಿನ ಮರಳು ಮಾಫಿಯಾಕ್ಕೆ ಬ್ರೇಕ್ ಹಾಕುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿ ಮತ್ತು ಪೊಲೀಸ್ ಕಮೀಷನರ್ ಗೆ ಮನವಿ ಸಲ್ಲಿಸಿದ್ದಾರೆ.

ಠಾಣೆಯ ಮುಂಭಾಗದಲ್ಲೇ ಅಕ್ರಮ ವಹಿವಾಟುಗಳು ನಡೆಯುತ್ತಿದ್ದರೂ ಜಾಣ ಕುರುಡು ಪ್ರದರ್ಶಿಸುತ್ತಿರುವ ಪೊಲೀಸ್ ಅಧಿಕಾರಿಗಳಿಗೆ ಭದ್ರತೆ ಕಲ್ಪಿಸಿ ಎಂದು ಜಿಲ್ಲಾಧಿಕಾರಿ, ಪೊಲೀಸ್ ಕಮೀಷನರ್ ಗೆ ಸಾರ್ವಜನಿಕರು ಮನವಿ ಸಲ್ಲಿಸಿರುವುದು ಪೊಲೀಸ್ ವ್ಯವಸ್ಥೆಯನ್ನೇ ಅಣಕಿಸಿದಂತಿದೆ.

Harekala pavoor daylight sand mining, public slam both police commissioner and DC of Mangalore. Some social activist have written letter to both DC and police commissioner stating to give more security to illegal sand miners.