Brahmarakootlu toll fight: ಟೋಲ್ ತಪ್ಪಿಸಲು ಬ್ರಹ್ಮರಕೂಟ್ಲುನಲ್ಲಿ ಸಿಪಿಐಎಂ ಕಾರ್ಯಕರ್ತರ ಗೂಂಡಾಗಿರಿ ; ಒನ್‌ವೇನಲ್ಲಿ ನುಗ್ಗಿ ಟೋಲ್ ಗೇಟ್ ಧ್ವಂಸ ; ದಾಂಧಲೆ ವಿಡಿಯೋ ವೈರಲ್

22-06-26 12:53 pm       HK News Staffer   ಕ್ರೈಂ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬ್ರಹ್ಮರಕೂಟ್ಲು ಸಮೀಪದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಟೋಲ್‌ಗೇಟ್‌ನಲ್ಲಿ ಟೋಲ್ ಶುಲ್ಕ ಪಾವತಿ ವಿಚಾರವಾಗಿ ಉದ್ಭವಿಸಿದ ವಿವಾದ ಭಾರೀ ಗಲಾಟೆಗೆ ತಿರುಗಿದ ಘಟನೆ ಬೆಳಕಿಗೆ ಬಂದಿದೆ.

ಮಂಗಳೂರು, ಜೂನ್ 22: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬ್ರಹ್ಮರಕೂಟ್ಲು ಸಮೀಪದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಟೋಲ್‌ಗೇಟ್‌ನಲ್ಲಿ ಟೋಲ್ ಶುಲ್ಕ ಪಾವತಿ ವಿಚಾರವಾಗಿ ಉದ್ಭವಿಸಿದ ವಿವಾದ ಭಾರೀ ಗಲಾಟೆಗೆ ತಿರುಗಿದ ಘಟನೆ ಬೆಳಕಿಗೆ ಬಂದಿದೆ. ಟೋಲ್ ಪಾವತಿಸುವುದನ್ನು ತಪ್ಪಿಸಲು ಕೆಲವು ವಾಹನಗಳು ಏಕಮುಖ ಸಂಚಾರ ನಿಯಮ ಉಲ್ಲಂಘಿಸಿ ನುಗ್ಗಿದಲ್ಲದೆ, ಸುರಕ್ಷತಾ ಬ್ಯಾರಿಯರ್‌ಗಳಿಗೆ ಡಿಕ್ಕಿ ಹೊಡೆದು ಹಾನಿಗೊಳಿಸಿರುವ ಆರೋಪ ಕೇಳಿಬಂದಿದೆ.

ಮಾಹಿತಿಯ ಪ್ರಕಾರ, ಸಿಪಿಐಎಂ ಪಕ್ಷದ ಕಾರ್ಯಕರ್ತರನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ ಬ್ರಹ್ಮರಕೂಟ್ಲು ಟೋಲ್‌ಗೇಟ್‌ಗೆ ಆಗಮಿಸಿತ್ತು. ಟೋಲ್ ಸಿಬ್ಬಂದಿ ನಿಯಮಾನುಸಾರ ಶುಲ್ಕ ಪಾವತಿಸುವಂತೆ ಸೂಚಿಸಿದಾಗ, ಚಾಲಕ ಮತ್ತು ವಾಹನದಲ್ಲಿದ್ದ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ವಿವಾದ ತೀವ್ರಗೊಂಡ ಬಳಿಕ ಬಸ್ ಚಾಲಕ ಟೋಲ್ ಪಾವತಿಸದೇ ವಾಹನವನ್ನು ಮುಂದಕ್ಕೆ ಚಲಾಯಿಸಿದ್ದು, ಈ ವೇಳೆ ಟೋಲ್‌ಗೇಟ್‌ನ ಸುರಕ್ಷತಾ ಬೂಮ್ ಬ್ಯಾರಿಯರ್‌ಗೆ ಡಿಕ್ಕಿ ಹೊಡೆದ ಅಲ್ಲಿಂದ ತೆರಳಿದೆ.

ಇದಾದ ಬಳಿಕ ಅದೇ ತಂಡದೊಂದಿಗೆ ಸಂಚರಿಸುತ್ತಿದ್ದ ಇನ್ನೂ ಕೆಲವು ವಾಹನಗಳು ಸಹ ಟೋಲ್ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿ, ಏಕಮುಖ ಸಂಚಾರ ಮಾರ್ಗದಲ್ಲೇ ವಾಹನಗಳನ್ನು ನುಗ್ಗಿಸಿ ನಿಯಮ ಉಲ್ಲಂಘಿಸಿರುವ ಆರೋಪ ಕೇಳಿಬಂದಿದೆ.

ಘಟನೆಯ ವೇಳೆ ಟೋಲ್ ಸಿಬ್ಬಂದಿ ಮತ್ತು ವಾಹನದಲ್ಲಿದ್ದವರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಟೋಲ್ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರೂ ವಾಹನಗಳು ವೇಗವಾಗಿ ಸಾಗಿದ ಕಾರಣ ಗೊಂದಲ ಉಂಟಾಯಿತು ಎಂದು ಹೇಳಲಾಗಿದೆ.

ಇಡೀ ಘಟನೆ ಟೋಲ್‌ಗೇಟ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ದೃಶ್ಯಾವಳಿಗಳ ಆಧಾರದ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಯಿಂದ ಟೋಲ್‌ಗೇಟ್‌ನ ಸುರಕ್ಷತಾ ವ್ಯವಸ್ಥೆಗೆ ಹಾನಿಯಾಗಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರಕ್ಕೂ ಅಡಚಣೆ ಉಂಟಾಗಿದೆ ಎನ್ನಲಾಗಿದೆ.