ಮಂಗಳೂರಿನಲ್ಲಿ ಮತ್ತಷ್ಟು ಬಾಂಗ್ಲಾ ನಿವಾಸಿಗಳ ಬೇಟೆ ; ಮತ್ತೆ 10ಕ್ಕೂ ಹೆಚ್ಚು ಅಕ್ರಮ ವಲಸಿಗರು ಪೊಲೀಸರ ವಶಕ್ಕೆ, ಎಸ್ಐಆರ್ ಹಿನ್ನೆಲೆ ಜನರಲ್ಲಿ ಜಾಗೃತಿ

13-07-26 11:51 am       HK News Staffer   ಕ್ರೈಂ

ಮಂಗಳೂರು ಪೊಲೀಸರು ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ನಿವಾಸಿಗಳ ಬೇಟೆ ಮುಂದುವರೆಸಿದ್ದು ನಗರದ ಉರ್ವಾ ಠಾಣೆ ವ್ಯಾಪ್ತಿಯಲ್ಲಿ ಅಡಗಿಕೊಂಡಿದ್ದ ಹತ್ತಕ್ಕೂ ಹೆಚ್ಚು ಬಾಂಗ್ಲಾದೇಶಿಗಳನ್ನು ವಶಕ್ಕೆ ಪಡೆದಿದ್ದಾರೆ.

ಮಂಗಳೂರು, ಜುಲೈ 13: ಮಂಗಳೂರು ಪೊಲೀಸರು ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ನಿವಾಸಿಗಳ ಬೇಟೆ ಮುಂದುವರೆಸಿದ್ದು ನಗರದ ಉರ್ವಾ ಠಾಣೆ ವ್ಯಾಪ್ತಿಯಲ್ಲಿ ಅಡಗಿಕೊಂಡಿದ್ದ ಹತ್ತಕ್ಕೂ ಹೆಚ್ಚು ಬಾಂಗ್ಲಾದೇಶಿಗಳನ್ನು ವಶಕ್ಕೆ ಪಡೆದಿದ್ದಾರೆ. 

ಕುಂಟಿಕಾನ ಬಳಿಯಲ್ಲಿ ಕಟ್ಟಡ ಕಾರ್ಮಿಕರ ಸೋಗಿನಲ್ಲಿದ್ದ ಮೂವರನ್ನು ವಿಚಾರಣೆ ನಡೆಸಿದ್ದು ಬಾಂಗ್ಲಾದೇಶದ ರಾಜಶಾಹಿ ಜಿಲ್ಲೆಯ ನಿವಾಸಿಗಳಾದ ನೂರ್ ಅಮೀನ್, ಮಹಮ್ಮದ್ ಕೌಸರ್, ಇಮ್ರಾನ್ ಅಲಿ ಎಂಬವರೆಂದು ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇವರು ಕಳೆದ ಎರಡು ತಿಂಗಳಿಂದ ಮಂಗಳೂರಿನಲ್ಲಿ ಅಡಗಿಕೊಂಡಿದ್ದರು ಎನ್ನುವ ಅಂಶ ತನಿಖೆಯಲ್ಲಿ ತಿಳಿದುಬಂದಿದೆ. 

ಇದೇ ವೇಳೆ, ಕೋಡಿಕಲ್ ಎಂಬಲ್ಲಿ ಬೃಹತ್ ಅಪಾರ್ಟ್ಮೆಂಟ್ ಕಟ್ಟಡದ ನಿರ್ಮಾಣ ಕೆಲಸದಲ್ಲಿ ತೊಡಗಿದ್ದ ಎಂಟು ಮಂದಿಯನ್ನು ಬಾಂಗ್ಲಾ ಮೂಲದವರೆಂಬ ಶಂಕೆಯಲ್ಲಿ ಉರ್ವಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಒಂದೇ ಕಟ್ಟಡದಲ್ಲಿ ಎಂಟಕ್ಕೂ ಅಧಿಕ ಉತ್ತರ ಭಾರತದ ಕಾರ್ಮಿಕರು ಕೆಲಸ ಮಾಡುತ್ತಿದ್ದು ಪೊಲೀಸರು ಪರಿಶೀಲನೆಗೆ ಮುಂದಾದ ವೇಳೆ ಓರ್ವ ವ್ಯಕ್ತಿ ಪರಾರಿಯಾಗಿದ್ದಾನೆ. ಸದ್ಯಕ್ಕೆ ಎಂಟು ಜನರನ್ನು ವಶಕ್ಕೆ ಪಡೆದು ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. 

ಅಕ್ರಮ ವಲಸಿಗರು ಬಾಂಗ್ಲಾ ಗಡಿಯಿಂದ ಪಶ್ಚಿಮ ಬಂಗಾಳದ ಮೂಲಕ ಭಾರತದೊಳಕ್ಕೆ ನುಸುಳಿ, ಅಕ್ರಮವಾಗಿ ದಾಖಲೆ ಪತ್ರಗಳನ್ನು ಮಾಡಿಸಿ ಮಂಗಳೂರಿಗೆ ಬಂದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ರಾಜ್ಯದಲ್ಲಿ ಎಸ್ಐಆರ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಉಂಟಾಗಿದ್ದು ಬಾಂಗ್ಲಾ ಮೂಲದವರು ಎಂಬ ಶಂಕೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾರೆ. 

ವಾರದ ಹಿಂದಷ್ಟೇ ಸುರತ್ಕಲ್ ಠಾಣೆ ಪೊಲೀಸರು ಮುಕ್ಕದಲ್ಲಿ ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿಸಿದ್ದ ಎಂಟು ಮಂದಿ ಬಾಂಗ್ಲಾ ನಿವಾಸಿಗಳನ್ನು ಬಂಧಿಸಿದ್ದು ಅವರನ್ನು ಗಡೀಪಾರು ಮಾಡಲು ಪೊಲೀಸ್ ಕಮಿಷನರ್ ಕ್ರಮ ಕೈಗೊಂಡಿದ್ದಾರೆ.