ರಾಮನ ಹೆಸರಲ್ಲಿ ರಾಜಕೀಯ ಮಾಡಿದವರು ಈಗ ಯಾಕೆ ಮೌನಿ ಬಾಬಾಗಳಾಗಿದ್ದಾರೆ, ಆರೆಸ್ಸೆಸ್- ಮೋದಿ ಜನಗಳೇ ರಾಮನ ದುಡ್ಡು ಲೂಟಿಗೈದಿದ್ದಲ್ಲವೇ ? ವಿಎಸ್ ಉಗ್ರಪ್ಪ ಪ್ರಶ್ನೆ

11-07-26 06:32 pm       HK News Staffer   ಕರಾವಳಿ

ರಾಮನ ಹೆಸರಲ್ಲಿ ಸುದೀರ್ಘ ಕಾಲದಿಂದ ರಾಜಕೀಯ ಮಾಡಿಕೊಂಡು ಬಂದವರೇ ಈಗ ರಾಮನ ಆಸ್ತಿ ಲಪಟಾಯಿಸಿದ್ದಾರೆ. ತಮ್ಮನ್ನು ದೇಶ ಪ್ರೇಮಿಗಳು ಅನ್ನಿಸಿಕೊಂಡವರಿಗೆ ಚೂರಾದ್ರೂ ನಾಚಿಕೆ, ಮಾನ, ಮರ್ಯಾದೆ ಇದೆಯಾ.. ಈಗ ಯಾಕೆ ಪ್ರಧಾನಿ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿಯವರು ಮೌನಿ ಬಾಬಾಗಳಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಪ್ರಶ್ನಿಸಿದ್ದಾರೆ.

ಮಂಗಳೂರು, ಜುಲೈ 11: ರಾಮನ ಹೆಸರಲ್ಲಿ ಸುದೀರ್ಘ ಕಾಲದಿಂದ ರಾಜಕೀಯ ಮಾಡಿಕೊಂಡು ಬಂದವರೇ ಈಗ ರಾಮನ ಆಸ್ತಿ ಲಪಟಾಯಿಸಿದ್ದಾರೆ. ತಮ್ಮನ್ನು ದೇಶ ಪ್ರೇಮಿಗಳು ಅನ್ನಿಸಿಕೊಂಡವರಿಗೆ ಚೂರಾದ್ರೂ ನಾಚಿಕೆ, ಮಾನ, ಮರ್ಯಾದೆ ಇದೆಯಾ.. ಈಗ ಯಾಕೆ ಪ್ರಧಾನಿ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿಯವರು ಮೌನಿ ಬಾಬಾಗಳಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಪ್ರಶ್ನಿಸಿದ್ದಾರೆ.

ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ತ್ರೇತಾಯುಗ, ದ್ವಾಪರ ಯುಗಗಳ ಆಧಾರ ನೋಡಿದರೆ ಸುಮಾರು ಏಳು ಸಾವಿರ ವರ್ಷಗಳ ಹಿಂದೆ ರಾಮಾಯಣ ಆಗಿತ್ತು. ರಾಮ- ಭರತನ ಸಂಭಾಷಣೆಯಲ್ಲಿ ರಾಜ್ಯಭಾರ ಹೇಗಿರಬೇಕು, ಹೇಗಿರಬಾರದು ಅನ್ನುವುದನ್ನು ಕಟ್ಟಿಕೊಡಲಾಗಿದೆ. ಯಾವ ದೇಶದಲ್ಲಿ ಭ್ರಷ್ಟಾಚಾರ ಇರುತ್ತದೋ ಆ ದೇಶ ಉದ್ಧಾರ ಆಗಲ್ಲ ಎಂದು ರಾಮ ಹೇಳುತ್ತಾನೆ. ಹಲವಾರು ಕಾರಣಕ್ಕೆ ರಾಮನನ್ನು ಮರ್ಯಾದಾ ಪುರುಷೋತ್ತಮ ಎಂದು ನಾವು ಕರೆಯುತ್ತೇವೆ.

ಶ್ರೀರಾಮಚಂದ್ರನೇ ಈ ದೇಶದ ಅಸ್ಮಿತೆ. ಆದರೆ ರಾಮನದ್ದೇ ಆದರ್ಶ ಎನ್ನುತ್ತಾ ಅದೇ ಹೆಸರಲ್ಲಿ ರಾಜಕೀಯ ಮಾಡಿಕೊಂಡು ಬಂದವರು ಈಗ ರಾಮನ ದೇಗುಲದ ಹೆಸರಲ್ಲಿ ದುಡ್ಡು ಹೊಡೆದಿದ್ದಾರೆ. ಆರೆಸ್ಸೆಸ್, ವಿಶ್ವ ಹಿಂದು ಪರಿಷತ್, ಬಿಜೆಪಿ ಮತ್ತು ಪ್ರಧಾನಿ ಮೋದಿಯವರೇ ಸೇರಿ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ರಚಿಸಿದ್ದರು. ಕೇಂದ್ರ ಸರ್ಕಾರದ ಮಾಜಿ ಕಾರ್ಯದರ್ಶಿ ಪ್ರಶಾಂತ ಲೇಖಂಡೆ, ಅಯೋಧ್ಯೆ ಜಿಲ್ಲಾ ಮ್ಯಾಜಿಸ್ಟ್ರೇಟ್, ಪ್ರಧಾನಿ ಮೋದಿಯವರ ಮಾಜಿ ಸೆಕ್ರಟರಿ ನೃಪೇಂದ್ರ ಮಿಶ್ರಾ ಅವರೆಲ್ಲ ಟ್ರಸ್ಟ್ ಸದಸ್ಯರಿದ್ದಾರೆ.

ರಥಯಾತ್ರೆ ಸೇರಿದಂತೆ ಇಡೀ ದೇಶಾದ್ಯಂತ ಅಭಿಯಾನ ನಡೆಸಿ ಸಾವಿರಾರು ಕೋಟಿ ಕಲೆಕ್ಷನ್ ಮಾಡಿದ್ದನ್ನು ಇವರೆಲ್ಲ ಸೇರಿ ಲೂಟಿ ಹೊಡೆದಿದ್ದಾರೆ. ಕರ್ನಾಟಕದಲ್ಲಿ ಪ್ರಚಾರಕ್ ಆಗಿದ್ದ ಗೋಪಾಲ ರಾವ್ ಎಂಬವರಿಗೂ ಈ ಲೂಟಿಯಲ್ಲಿ ಪಾಲಿದೆ ಎನ್ನುವ ಮಾಹಿತಿ ಇದೆ. ಇಷ್ಟೆಲ್ಲ ಆಗುತ್ತಿರಬೇಕಾದರೆ ಪ್ರಧಾನಿ ಮೋದಿ ಮೌನವಾಗಿರೋದ್ರ ಅರ್ಥವೇನು..? ಯಾಕೆ ಅವರೀಗ ಮೌನಿ ಬಾಬಾ ಆಗಿದ್ದಾರೆ. ಲಾಲ್ ಬಹದ್ದೂರ್ ಶಾಸ್ತ್ರಿಯವರು ಸಚಿವರಾಗಿದ್ದಾಗ ರೈಲು ಅಪಘಾತ ಆಗಿದ್ದಕ್ಕೆ ಹೊಣೆ ಹೊತ್ತು ರಾಜಿನಾಮೆ ನೀಡಿದ್ದರು. ಇವರೇ ನೇಮಿಸಿದ ಟ್ರಸ್ಟ್ ನವರೇ ಲೂಟಿ ಹೊಡೆದಿದ್ದರಿಂದ ಪ್ರಧಾನಿ ಮೋದಿ, ಸಿಎಂ ಯೋಗಿ, ಗೃಹ ಸಚಿವ ಅಮಿತ್ ಷಾ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕಿತ್ತು.

ಆರೆಸ್ಸೆಸ್, ವಿಶ್ವ ಹಿಂದು ಪರಿಷತ್ ನಾಯಕರ ಮೂಗಿನ ನೇರಕ್ಕೆ ಲೂಟಿಯಾಗಿದೆ. ಹೀಗಾಗಿ ಸುಪ್ರೀಂ ಕೋರ್ಟ್ ಜಡ್ಜ್ ನೇತೃತ್ವದಲ್ಲಿ ತನಿಖೆ ನಡೆಸಿ ರಾಮನ ಹೆಸರಿಗೆ ಅವಮಾನ ಮಾಡಿದವರನ್ನು ಬಂಧಿಸಬೇಕು. ಇಡೀ ಜಗತ್ತಿನಲ್ಲಿ ರಾಮನ ಭಕ್ತರಿದ್ದಾರೆ, ಅವರಿಗೆಲ್ಲ ಈ ಘಟನೆಯಿಂದ ಅವಮಾನ ಆಗಿದೆ, ತಲೆತಗ್ಗಿಸುವ ಸ್ಥಿತಿಯಾಗಿದೆ. ನಾವೆಲ್ಲ ರಾಮನ ಭಕ್ತರು, ನಮಗೆಲ್ಲ ನೋವಾಗಿದೆ ಎಂದು ಉಗ್ರಪ್ಪ ಹೇಳಿದರು.

ನಿಮ್ಮ ಸರ್ಕಾರ ಇರುವಾಗಲೇ ರಾಮ ಕಾಲ್ಪನಿಕ ಎಂದು ಅಫಿಡವಿಟ್ ಕೊಟ್ಟಿದ್ದರಲ್ವೇ ಎಂದು ಕೇಳಿದ ಪ್ರಶ್ನೆಗೆ, ಅದು ಯಾರೋ ವಕೀಲ ಹಾಗೆ ಅಫಿಡವಿಟ್ ಕೊಟ್ಟಿದ್ದೆಂದು ಬಿಜೆಪಿಯವರು ಹೇಳಿಕೊಂಡು ಬಂದಿದ್ದಾರೆ, ಅದಕ್ಕೆ ದಾಖಲೆ ನಮಗೆ ಸಿಕ್ಕಿಲ್ಲ. ಹಾಗಂತ, ಅದು ಕಾಂಗ್ರೆಸ್ ಪಕ್ಷದ ಪರವಾದ ನಿಲುವು ಅಲ್ಲ. 1991ರಲ್ಲಿ ರಾಮಲಲ್ಲಾನ ಪೂಜೆಗೆ ಅವಕಾಶ ನೀಡಿದ್ದು ಕಾಂಗ್ರೆಸ್ ಅಲ್ಲವೇ ಎಂದು ಮರು ಪ್ರಶ್ನಿಸಿದರು.

ಎಸ್ಸಿ-ಎಸ್ಟಿಗೆ ಮೀಸಲಾತಿ ಅನ್ಯಾಯ

2022ರಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರ ಇದ್ದಾಗ ರಾಜ್ಯದಲ್ಲಿ ಓಬಿಸಿ, ಎಸ್ಸಿ- ಎಸ್ಟಿಗೆ ಹೆಚ್ಚುವರಿ ಮೀಸಲಾತಿ ತರಲಾಗಿತ್ತು. ಆನಂತರ, 2025ರಲ್ಲಿ ಸಿದ್ದರಾಮಯ್ಯ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಸರ್ವಾನುಮತದಿಂದ ಈ ತಿದ್ದುಪಡಿಯನ್ನು ಅಂಗೀಕರಿಸಿ ಕೇಂದ್ರಕ್ಕೆ ಕಳುಹಿಸಿತ್ತು. ಆದರೆ ಕೇಂದ್ರ ಇದನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸದೆ ಉಳಿಸಿಕೊಂಡಿದ್ದರಿಂದ ಈಗ ಸಾಮಾಜಿಕ ನ್ಯಾಯ ಬಯಸುತ್ತಿರುವ ಎಸ್ಸಿ-ಎಸ್ಟಿ ಸಮುದಾಯಕ್ಕೆ ಅನ್ಯಾಯ ಎದುರಾಗಿದೆ. ರಾಜ್ಯದಲ್ಲಿ 75 ಸಾವಿರ ಹುದ್ದೆಗಳ ಭರ್ತಿ ಸಂದರ್ಭದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಉದ್ಯೋಗ ನಷ್ಟವಾಗುತ್ತಿದೆ. ಇದಕ್ಕಾಗಿ ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸರ್ವ ಪಕ್ಷಗಳ ನಿಯೋಗವನ್ನು ಕೂಡಲೇ ಪ್ರಧಾನಿ ಬಳಿಗೆ ಒಯ್ಯಬೇಕೆಂದು ಆಗ್ರಹಿಸುವುದಾಗಿ ಹೇಳಿದರು.