ಜೋತಿಷ್ಯ ಹೇಳುವ ನೆಪದಲ್ಲಿ ಪೂಜೆ ; ಮನೆಯಲ್ಲಿದ್ದ ಚಿನ್ನವನ್ನೇ ಎಗರಿಸಿದ ಮಹಿಳೆ !!

06-03-21 12:50 pm       Udupi Correspondent   ಕ್ರೈಂ

ಜೋತಿಷ್ಯ ಹೇಳುವುದಾಗಿ ನಂಬಿಸಿ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ಎಗರಿಸಿದ ಘಟನೆ ನಿಟ್ಟೂರಿನಲ್ಲಿ ನಡೆದಿದೆ.

ಉಡುಪಿ, ಮಾ.6: ಜೋತಿಷ್ಯ ಹೇಳುವುದಾಗಿ ಮನೆಗೆ ಬಂದ ಮಹಿಳೆಯೊಬ್ಬರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಎಗರಿಸಿದ ಘಟನೆ ನಿಟ್ಟೂರಿನಲ್ಲಿ ನಡೆದಿದೆ.

ರಾಜೀವನಗರದ ಲಕ್ಷ್ಮಿ(55) ಎಂಬವರ ಮನೆಗೆ ಸುಮಾರು 30 ವರ್ಷದ ಪ್ರಾಯದ ಅಪರಿಚಿತ ಮಹಿಳೆ ಬಂದಿದ್ದು ಜೋತಿಷ್ಯ ಹೇಳುವುದಾಗಿ ನಂಬಿಸಿದರು. ‘ನಿಮ್ಮ ಮನೆಯಲ್ಲಿ ಯಾರೋ ಮಾಟ ಮಂತ್ರ ಮಾಡಿದ್ದಾರೆ, ಕಣ್ಣು ದೃಷ್ಟಿ ಆಗಿದೆ, ಲಕ್ಷ್ಮಿ ಪೂಜೆ ಮಾಡಿಸುತ್ತೇನೆ’ ಎಂದು ಹೇಳಿದ ಆಕೆ, ಪೂಜೆ ಮಾಡಿಸಲು ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಹಣವನ್ನು ತರುವಂತೆ ತಿಳಿಸಿದ್ದಳು.

ಅದರಂತೆ ಲಕ್ಷ್ಮಿ ಎಲ್ಲಾ ಚಿನ್ನಾಭರಣಗಳನ್ನು ಮತ್ತು 15,000 ರೂ. ಹಣವನ್ನು ಬಾಕ್ಸ್‌ನಲ್ಲಿ ಹಾಕಿ ಕೊಟ್ಟಿದ್ದರು. ಅಪರಿಚಿತ ಮಹಿಳೆ, ಪೂಜೆ ಮುಗಿಸಿ ಬಾಕ್ಸ್ ವಾಪಾಸು ಕೊಟ್ಟು ಅಲ್ಲಿಂದ ಹೋಗಿದ್ದರು. ನಂತರ ಲಕ್ಷ್ಮೀ ಬಾಕ್ಸ್ ತೆಗೆದು ನೋಡುವಾಗ ಚಿನ್ನಾಭರಣ ಮತ್ತು ನಗದು ಹಣ ಇಲ್ಲದಿರುವುದು ಕಂಡುಬಂದಿದೆ. ಅಪರಿಚಿತ ಮಹಿಳೆ ಹಣ ಮತ್ತು ಅಭರಣಗಳನ್ನು ತೆಗೆದುಕೊಂಡು ಹೋಗಿದ್ದು ಚಿನ್ನಾಭರಣದ ಅಂದಾಜು ಮೌಲ್ಯ 7.36 ಲಕ್ಷ ರೂ. ಮತ್ತು 15 ಸಾವಿರ ರೂ. ನಗದು ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

A woman has duped a family in the name of Astrology in Lakhs at Udupi. A case has been registered at Udupi police station.