ಫೇಸ್ಬುಕ್ ಯುವತಿಗೆ ಮರುಳಾದ ಮಾಮಾ ; ಹಾಕಿಸಿಕೊಂಡ 3 ಲಕ್ಷ ರೂಪಾಯಿ ಪಂಗನಾಮ ! 

29-08-20 10:59 am       Udupi Reporter   ಕ್ರೈಂ

ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಯುವತಿಯ ಮಾತನ್ನು ನಂಬಿ ವ್ಯಕ್ತಿಯೊಬ್ಬರು ಬರೋಬ್ಬರಿ 3.53 ಲಕ್ಷ ರೂಪಾಯಿ ಹಣ ಕಳೆದುಕೊಂಡ ಪ್ರಸಂಗ ಉಡುಪಿಯಲ್ಲಿ ಬೆಳಕಿಗೆ ಬಂದಿದೆ

ಉಡುಪಿ, ಆಗಸ್ಟ್ 29: ಫೇಸ್ ಬುಕ್ ಅನ್ನೋ ಮಾಯಾಜಾಲದಲ್ಲಿ ಸಿಲುಕಿದ ವ್ಯಕ್ತಿಯೊಬ್ಬ ಯುವತಿಯ ಮಾತು ನಂಬಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಪ್ರಸಂಗ ಬೆಳಕಿಗೆ ಬಂದಿದೆ.

ಕೇವಲ ಮೂರು ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಯುವತಿಯ ಮಾತನ್ನು ನಂಬಿ ವ್ಯಕ್ತಿಯೊಬ್ಬರು ಬರೋಬ್ಬರಿ  3.53 ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದಾರೆ.

ಉಡುಪಿ ಜಿಲ್ಲೆಯ ಪಡುಬಿದ್ರಿ ನಿವಾಸಿ ಡೇವಿಡ್ ಪೌಲ್ ಕುಮಾರ್(53) ಹಣ ಕಳೆದುಕೊಂಡವರು. ಫೇಸ್‌ಬುಕ್‌ನಲ್ಲಿ ಆಗಸ್ಟ್ 24ರಂದು ಜೋನ್ ಶರ್ರಿ ಮಾರ್ಕ್ಸ್‌ವೆಲ್ ಎಂಬಾಕೆಯ ಪರಿಚಯವಾಗಿತ್ತು.

ಫೇಸ್ ಬುಕ್ ನಲ್ಲಿ ಪರಿಚಯವಾದ ಜೊನ್ ಶೆರ್ರಿ, ಡೇವಿಡ್ ಹುಟ್ಟುಹಬ್ಬಕ್ಕೆ ಬೆಲೆಬಾಳುವ ಗಿಫ್ಟ್ ಪಾರ್ಸೆಲ್ ಕಳುಹಿಸುವುದಾಗಿ ಹೇಳಿದ್ದಳು. ಅದರಂತೆ ದೆಹಲಿ ಏರ್‌ಪೋರ್ಟಿನಿಂದ ಮಹಿಳೆಯೊಬ್ಬರು ಕರೆ ಮಾಡಿ, ವಿದೇಶದಿಂದ ಪಾರ್ಸೆಲ್ ಬಂದಿದೆ ಎಂದು ಡೇವಿಡ್ ಗೆ ತಿಳಿಸಿದ್ದರು.

ಆದರೆ, ಪಾರ್ಸೆಲ್ ಕಳುಹಿಸಬೇಕಾದರೆ 3.53 ಲಕ್ಷ ರೂಪಾಯಿ ಹಣ ಶುಲ್ಕ ಪಾವತಿಸಬೇಕು. ಈ ಕೂಡಲೇ ಹಣ ವರ್ಗಾಯಿಸುವಂತೆ ಹೇಳಿದ್ದಾರೆ. ಮಹಿಳೆಯ ಮಾತು ನಂಬಿದ ಡೇವಿಡ್ ಹಣವನ್ನು ವರ್ಗಾಯಿಸಿದ್ದಾರೆ. ಆದರೆ ಪಾರ್ಸೆಲ್ ಮಾತ್ರ ಕೈ ಸೇರಲಿಲ್ಲ. ಸೈಬರ್ ವಂಚನೆ ಬಗ್ಗೆ ಈಗ ಉಡುಪಿ ಸೈಬರ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.